1 ರುಪಾಯಿ ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತೆ ಗೊತ್ತೆ..?

ಒಂದು ರುಪಾಯಿ ಮುಖಬೆಲೆಯ ಒಂದು ನೋಟನು ಮುದ್ರಿಸಲು ಅದಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯ ಮೂಲಕ ಬಯಲಾಗಿದೆ...
ಒಂದು ರುಪಾಯಿ ನೋಟು
ಒಂದು ರುಪಾಯಿ ನೋಟು
Updated on
ನವದೆಹಲಿ: ಒಂದು ರುಪಾಯಿ ಮುಖಬೆಲೆಯ ಒಂದು ನೋಟನು ಮುದ್ರಿಸಲು ಅದಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯ ಮೂಲಕ ಬಯಲಾಗಿದೆ.
ಮೂಗಿಗಿಂತ ಮೂಗುತಿ ಭಾರ ಎನ್ನುವ ಗಾದೆ ಬಹುಶಃ ಈ ಸುದ್ದಿಗೆ ಅನ್ವಯಿಸಬಹುದು. ಕಳೆದ ಎರಡು ದಶಕಗಳಿಂದ ಮುದ್ರಣವಿಲ್ಲದೆ ಮೂಲೆಗುಂಪಾಗಿದ್ದ ಒಂದು ರುಪಾಯಿ ನೋಟಿಗೆ ಮತ್ತೆ ಮುದ್ರಣದ ಭಾಗ್ಯ ದೊರಕಿದೆ. ಆದರೆ ಈ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟು ಖರ್ಚು ಮಾಡುತ್ತಿದೆ ಗೊತ್ತೆ..? ಒಂದು ನೋಟಿಗೆ 1 ರುಪಾಯಿ 14 ಪೈಸೆ. ಅಂದರೆ ಒಂದು ರುಪಾಯಿ ಮೌಲ್ಯದ ನೋಟಿಗೆ ಅದರ ಮೌಲ್ಯಕ್ಕಿಂತ 14 ಪೈಸೆಗಳಷ್ಟು ಹೆಚ್ಚುವರಿ ಖರ್ಚಾಗುತ್ತಿದೆ. 
ಈ ವಿಚಾರವನ್ನು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ನ ಮುದ್ರಣ ಇಲಾಖೆಯ ಅಧಿಕಾರಿಗಳೇ ನೀಡಿದ್ದು, ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರ್ವಾಲ್ ಅವರು ಸಲ್ಲಿಸಿದ್ದ ಅರ್ಜಿ ಮುಖಾಂತರವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಭಾರತೀಯ ಭದ್ರತಾ ಮುದ್ರಣ ಮತ್ತು ಸಂಪಾದನಾ ಸಂಸ್ಥೆ (Security Printing and Minting Corporation of India-SPMCIL) ನೀಡಿರುವ ಮಾಹಿತಿಯನ್ವಯ ತಾತ್ಕಾಲಿಕ ಮತ್ತು ಅನೌಪಚಾರಿಕ ಲೆಕ್ಕಾಚಾರದ ಮಾಹಿತಿಗಳ ಪ್ರಕಾರ ಪ್ರತೀ ಒಂದು ರುಪಾಯಿ ನೋಟು ಮುದ್ರಣಕ್ಕೆ ಸುಮಾರು 1.14 ರು. ಖರ್ಚಾಗುತ್ತಿದೆಯಂತೆ.
1994ರಿಂದೀಚೆಗೆ ಇದೇ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಒಂದು ರುಪಾಯಿ ನೋಟು ಮುದ್ರಣವನ್ನು ನಿಲ್ಲಿಸಿತ್ತು. ಬಳಿಕ ಇದೇ ರೀತಿ 2 ಮತ್ತು 5 ರು. ಮುಖಬೆಲೆಯ ನೋಟುಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಈ ನೋಟುಗಳ ಮುದ್ರಣವನ್ನು ಕೂಡ ನಿಲ್ಲಿಸಲಾಗಿತ್ತು. 2014 ಡಿಸೆಂಬರ್ 16ರಂದು ಕೇಂದ್ರ ವಿತ್ತ ಸಚಿವಾಲಯ ಒಂದು ರುಪಾಯಿ ನೋಟುಗಳನ್ನು ಮತ್ತೆ ಮುದ್ರಿಸಲು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಅದರ ಪರಿಣಾಮ 2015 ಮಾರ್ಚ್ 6ರಿಂದ ಮತ್ತೆ ಒಂದು ರುಪಾಯಿ ನೋಟು ಚಲಾವಣೆ ಬಂದಿತು. ಈ ಹೊಸ ನೋಟು ಹಳೆಯ ಒಂದು ರುಪಾಯಿ ನೋಟಿನಂತೆಯೇ ಇದ್ದು, ಇಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್‌ನ ಸಹಿ ಬದಲು ವಿತ್ತ ಕಾರ್ಯದರ್ಶಿಯ ಸಹಿ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com