
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರು.94 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.26ರಷ್ಟು ಏರಿಕೆ ಕಂಡಿದೆ.
ಗುಣಾತ್ಮಕ ಆಸ್ತಿಯ ವೃದ್ಧಿಯಿಂದಾಗಿ ಲಾಭ ಹೆಚ್ಚಳವಾಗಿದೆ. ಶುಲ್ಕ ಆದಾಯದಲ್ಲಿ ಶೇ.11ರಷ್ಟು ಏರಿಕೆ ದಾಖಲಿಸಿದೆ. ಠೇವಣಿಯಲ್ಲಿ ರು.68,400 ಕೋಟಿ ತಲುಪುವ ಮೂಲಕ ಶೇ.33.99ರಷ್ಟು ಏರಿಕೆ ಕಂಡಿದೆ. ಮುಂಗಡ ರು.52,600 ಕೋಟಿಗೆ ತಲುಪಿದ್ದು, ಒಟ್ಟಾರೆ ವಹಿವಾಟು ರು.1.21 ಲಕ್ಷ ಕೋಟಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಅನುತ್ಪಾದಕ ಆಸ್ತಿ (ಎನ್‍ಪಿಎ) ಪ್ರಮಾಣ ಶೇ.4.21ಕ್ಕೆ ಇಳಿಕೆಯಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಎಂಡಿ ಶರದ್ ಶರ್ಮಾ ತಿಳಿಸಿದ್ದಾರೆ.
ಈ ತ್ರೈಮಾಸಿಕದಲ್ಲಿ ಬ್ಯಾಂಕ್ ನ ಆಡಳಿತ ಹಾಗೂ ಸೇವೆಗಳಲ್ಲಿ ಹೆಚ್ಚಿನ ಪ್ರಗತಿಯಾಗಿದೆ. 222 ಹೊಸ ಎಟಿಎಂ ಸ್ಥಾಪಿಸಲಾಗಿದ್ದು ಒಟ್ಟಾರೆ ಸಂಖ್ಯೆ 1,350ಕ್ಕೆ ತಲುಪಿದೆ. ಈ ಪೈಕಿ ರಾಜ್ಯದಲ್ಲಿ ಮಾತ್ರವೇ 1,167 ಎಟಿಎಂಗಳಿವೆ. ಡೆಬಿಟ್ ಕಾರ್ಡ್ ಸಂಖ್ಯೆ 56.3 ಲಕ್ಷಕ್ಕೆ ತಲುಪಿದೆ ಎಂದರು. ಸರ್ಕಾರಿ ಯೋಜನೆಗಳೊಂದಿಗೆ ಬ್ಯಾಂಕ್ ಆಡಳಿತ ಮಂಡಳಿ ಉತ್ತಮ ಸಹಯೋಗ ಹೊಂದಿದೆ. `ಪ್ರಧಾನಮಂತ್ರಿ ಜನಧನ ಯೋಜನೆಯಡಿ 713 ಉಪಕೇಂದ್ರ ಹಾಗೂ 634 ವಾರ್ಡ್‍ಗಳಲ್ಲಿ 11.97 ಲಕ್ಷ ಮನೆಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಪ್ರತಿ ಮನೆಗೆ ಕನಿಷ್ಠ ಒಂದು ಬ್ಯಾಂಕ್ ಖಾತೆ ತೆರೆಯಲಾಗಿದೆ.
ಯೋಜನೆಯಡಿ ಹೊಸದಾಗಿ 8.26 ಲಕ್ಷ ಹೊಸ ಖಾತೆ ತೆರೆದಿದ್ದು, ಆರ್ಥಿಕ ವಿಭಾಗದಲ್ಲಿ ತೆರೆದ ಒಟ್ಟು ಖಾತೆಗಳ ಸಂಖ್ಯೆ 15.07 ಲಕ್ಷಕ್ಕೆ ತಲುಪಿದೆ. ಈ ಖಾತೆಗಳಲ್ಲಿ ಒಟ್ಟು ರು.85.22 ಕೋಟಿ ಮೊತ್ತವಿದೆ ಎಂದು ವಿವರಿಸಿದರು.
Advertisement