
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‍ಬಿಐ ಮೂರನೇ ಬಾರಿ ಬಡ್ಡಿ ದರ ಕಡಿತ ಮಾಡಿದೆ. ಆದರೆ ಬ್ಯಾಂಕ್ ಗಳು ಅದನ್ನು ಗ್ರಾಹಕರಿಗೆ ತಲುಪಿಸಲು ಹಿಂದೇಟು ಹಾಕುತ್ತಿವೆ ಎನ್ನುವುದು ಸತ್ಯ.
ಏಕೆಂದರೆ ಈ ಹಿಂದೆ ಎರಡು ಬಾರಿ ದರ ಕಡಿತ ಉಂಟಾಗಿದ್ದರೂ ಬ್ಯಾಂಕ್‍ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಅದಕ್ಕೆ ಗ್ರಾಹಕರಿಂದಲೂ ಟೀಕೆ ವ್ಯಕ್ತವಾಗಿದೆ. ಆದರೆ ಬ್ಯಾಂಕ್‍ಗಳ ದೃಷ್ಟಿಯಿಂದಲೇ ನೋಡುವುದಿದ್ದರೆ ಅವರ ವಾದವನ್ನೂ ಮನ್ನಿಸಬೇಕಾಗುತ್ತದೆ. ಏಕೆಂದರೆ ಜಾಗತೀಕರಣದ ಜಗತ್ತಿನಲ್ಲಿ ಹೆಚ್ಚು ಕಾರ್ಯವಿಧಾನ ಇಲ್ಲದೆ ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಸಾಲ ಮತ್ತು ಇತರ ಸೌಲಭ್ಯಗಳನ್ನು ಸುಲಭವಾಗಿ ನೀಡುವ ನಿಟ್ಟಿನಲ್ಲಿ ಸರ್ಕಾರವೇ ನಿಯಮ ಸರಳಗೊಳಿಸಿದೆ.
ಜತೆಗೆ ಅದಕ್ಕೆ ಸಂಬಂಧಿಸಿದ ಶುಲ್ಕಗಳನ್ನೂ ರದ್ದು ಮಾಡಿದೆ. ಈ ಹಿಂದೆ ಯಾವುದೇ ರೀತಿಯ ಸಾಲಗಳನ್ನು ಅವಧಿಗಿಂತ ಮೊದಲು ಪಾವತಿ ಮಾಡುವುದಿದ್ದರೆ ಪೂರ್ವ ಪಾವತಿ ಶುಲ್ಕ ನೀಡಬೇಕಾಗಿತ್ತು. ಆದರೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅದನ್ನು ರದ್ದುಪಡಿಸಲಾಯಿತು. ಏಕೆಂದರೆ ಅವಧಿಗಿಂತ ಮೊದಲು ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕ್‍ಗಳಿಗೆ ನಷ್ಟವಾಗುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಸಾಲದ ಹೆಚ್ಚು ಜನರನ್ನು ಆಕರ್ಷಿಸಲೋಸುಗ ಅದನ್ನು ರದ್ದುಪಡಿಸಲಾಯಿತು.
ಠೇವಣಿ ಬಡ್ಡಿಯೂ ತಗ್ಗಬೇಕು
ಸಾಲದ ಮೇಲೆ ಬಡ್ಡಿ ದರ ಹೆಚ್ಚಿದರೆ, ಠೇವಣಿ ಮೇಲಿನ ಬಡ್ಡಿ ಕಡಿಮೆಯಾಗಲೇಬೇಕು. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮ ಪ್ರಕಾರ ಠೇವಣಿ ಮತ್ತು ಬಡ್ಡಿ ದರದ ಮೇಲೆ ಶೇ.3ರಷ್ಟು ವ್ಯತ್ಯಾಸ ಇರಬೇಕು. ಏಕೆಂದರೆ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಕೊಟ್ಟು ಸಾಲಕ್ಕೆ ಕಡಿಮೆ ಬಡ್ಡಿ ದರ ನೀಡಲು ಸಾಧ್ಯವೇ ಇಲ್ಲ. ಏಕೆಂದರೆ ಬ್ಯಾಂಕಿನ ನಿರ್ವಹಣೆಯೂ ನಡೆಯಬೇಕಲ್ಲ. ಈ ಕಾರಣದಿಂದಾಗಿ ಆರ್‍ಬಿಐ ಬ್ಯಾಂಕ್‍ಗಳ ಮೇಲೆ ಒತ್ತಡ ಹೇರಿದರೂ ಬ್ಯಾಂಕ್‍ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಹಿಂದೇಟು ಹಾಕುತ್ತಿವೆ.
ಎಚ್ಚರಿಕೆ ಕೊಟ್ಟಿದ್ದರು
ಹಿಂದಿನ ಎರಡು ಬಾರಿಯ ದರ ಕಡಿತ ಮಾಡಿದ್ದರೂ ಬ್ಯಾಂಕ್ ಗಳು ಅದನ್ನು ಜನ ಸಾಮಾನ್ಯರಿಗೆ ವರ್ಗಾಯಿಸಲೇ ಇಲ್ಲ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಡಾ.ರಘುರಾಮ್ ರಾಜನ್ ಖಡಕ್ ಆಗಿ ಎಚ್ಚರಿಕೆ ನೀಡಿದ ಬಳಿಕ ಬೆರಳೆಣಿಕೆಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಬಡ್ಡಿದರ ಇಳಿಕೆ ಮಾಡಿದ್ದವು. ಆರ್‍ಬಿಐ ನಿರ್ಧಾರದ ತಕ್ಷಣ ಬ್ಯಾಂಕ್‍ಗಳು ದರ ಇಳಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆಯಾ ಬ್ಯಾಂಕ್‍ನ ನಿರ್ದೇಶಕ ಮಂಡಳಿ ಅಥವಾ ಸಾಲದ ವಿಭಾಗದ ಹಿರಿಯ ಅಧಿಕಾರಿಗಳು ಸಭೆ ಸೇರಿ ದರ ಇಳಿಕೆ ಮಾಡಿದ್ದರಿಂದ ಬ್ಯಾಂಕ್‍ಗೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವದನ್ನು ಅಧ್ಯಯನ ಮಾಡಿ ನಿರ್ಧರಿಸುತ್ತವೆ.
ಹಣದುಬ್ಬರದ್ದೇ ತಲೆನೋವು
ಆರ್‍ಬಿಐ ಪಾಲಿಗೆ ಹಣದುಬ್ಬರ ತಲೆನೋವು ಮಾತ್ರ ಕಡಿಮೆಯಾಗಿಲ್ಲ. ಆಗಸ್ಟ್ ವರೆಗೆ ಬೆಲೆ ಏರಿಕೆಯು ಮಂದಗತಿಯಲ್ಲಿರಲಿದೆ. ಆದರೆ, 2016ರ ಜನವರಿ ವೇಳೆಗೆ ಅದು ಶೇ.6ರ
ವರೆಗೆ ಏರಿಕೆಯಾಗಲಿದೆ ಎನ್ನುವ ನಿರೀಕ್ಷೆ ಆರ್‍ಬಿಐಗಿದೆ. ಹಾಗಾಗಿ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯದಿದ್ದರೆ ಸೂಕ್ತ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗದೆ ಹಣದುಬ್ಬರ ಮೇಲೆ ಪರಿಣಾಮ ಬೀಳದಂತೆ ನೋಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ. ಆರ್‍ಬಿಐ ಪಾಲಿಗೆ ಮತ್ತೊಂದು ಪ್ರಮುಖ ತಲೆನೋವು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ. ಕಳೆದ ಏಪ್ರಿಲ್‍ನಿಂದ ಕಚ್ಚಾ ತೈಲದ ಬೆಲೆ ಶೇ.9ರಷ್ಟು ಏರಿಕೆಯಾಗಿದೆ.
Advertisement