ಸುಪ್ರೀಂನಿಂದ ಸುಬ್ರತೋ ರಾಯ್ 'ಬೇಲ್ ಭದ್ರತೆ'ಗೆ 3 ತಿಂಗಳ ಗಡುವು
ನವದೆಹಲಿ: ಷೇರುದಾರರಿಗೆ ವಂಚಿಸಿದ ಆರೋಪದಡಿ ಬಂಧನಕ್ಕೀಡಾಗಿರುವ ಸಹಾರಾ ಸಂಸ್ಥೆಯ ಮುಖ್ಯಸ್ಥ ಸುಬ್ರತೋ ರಾಯ್ ಅವರ ಜಾಮೀನು ಮಂಜೂರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ 'ಜಾಮೀನು ಭದ್ರತಾ ಠೇವಣಿ' ಶೇಖರಿಸುವ ಮಾರ್ಗೋಪಾಯ ರಚನೆಗೆ 3 ತಿಂಗಳ ಕಾಲಾವಕಾಶ ನೀಡಿದೆ.
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಷೇರುದಾರರ ಹಣವನ್ನು ಹಿಂದಿರುಗಿಸಿದ ಅಥವಾ ಸಂಪೂರ್ಣವಾಗಿ ಹಿಂದುರುಗಿಸುವ ಭರವಸೆ ನೀಡಿದ ನಂತರವೇ ನಿಮಗೆ ಜಾಮೀನು ದೊರೆಯುತ್ತದೆ ಎಂದು ಹೇಳಿದೆ. ಅಲ್ಲದೆ ನ್ಯಾಯಾಲಯ ಕೇಳಿರುವ ಭದ್ರತಾ ಠೇವಣಿ ಇಡುವ ಕುರಿತು ಸೂಕ್ತ ಯೋಜನೆ ತಯಾರಿಸಲು ನ್ಯಾಯಾಲಯ 3 ತಿಂಗಳ ಗಡುವು ಕೂಡ ನೀಡಿದೆ. ಸುಬ್ರತೋ ರಾಯ್ ಅವರಿಗೆ ನ್ಯಾಯಾಲಯ ನೀಡಿರುವ ಅಂತಿಮ ಗಡುವಾಗಿದ್ದು, ಒಂದು ವೇಳೆ ರಾಯ್ ಅವರು ಇದರಲ್ಲಿಯೂ ಜಾಮೀನು ಭದ್ರತೆ ನೀಡುವಲ್ಲಿ ವಿಫಲರಾದರೆ ನ್ಯಾಯಾಲಯ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಷೇರುದಾರರಿಗೆ ವಂಚಿಸಿದ ಆರೋಪದಡಿ ಬಂಧಿತರಾಗಿರುವ ಸಹಾರಾ ಸಂಸ್ಥೆಯ ಮುಖ್ಯಸ್ಥ ಸುಬ್ರತೋ ರಾಯ್ ಅವರ ಬಿಡುಗಡೆಗೆ ಸುಪ್ರೀಂಕೋರ್ಟ್ 1.6 ಬಿಲಿಯನ್ ಹಣವನ್ನು ಭದ್ರತಾ ಠೇವಣಿಯಾಗಿ ಇಡುವಂತೆ ಸೂಚನೆ ನೀಡಿತ್ತು. ಆದರೆ 6 ಬಾರಿ ಜಾಮೀನಿಗಾಗಿ ಪ್ರಯತ್ನಿಸಿದ್ದ ಸುಬ್ರತೋ ರಾಯ್ ಅವರು 6 ಬಾರಿಯೂ ವಿಫಲರಾಗಿದ್ದರು. ಹೀಗಾಗಿ ಇಂದು ಸುಪ್ರೀಂಕೋರ್ಟ್ ಭದ್ರತಾ ಠೇವಣಿ ಇಡುವ ಕುರಿತು ಸೂಕ್ತ ಮತ್ತು ನಿಖರ ಪ್ರಸ್ತಾಪದೊಂದಿಗೆ ಬನ್ನಿ ಎಂದು 3 ತಿಂಗಳ ಗಡುವು ನೀಡಿದೆ.
ಸಹರಾ ಸಮೂಹ ಸಂಸ್ಥೆಯು ತನ್ನ ಸಂಸ್ಥೆಯ ವಿವಿಧ ವಿಭಾಗಗಲ್ಲಿ ಸಾವಿರಾರು ಷೇರುದಾರರು ತೊಡಗಿಸಿದ್ದ ಸುಮಾರು 24000 ಸಾವಿರ ಕೋಟಿ ರುಪಾಯಿಗಳನ್ನು ಷೇರುದಾರರಿಗೆ ಹಿಂತಿರುಗಿಸದ ಹಿನ್ನಲೆಯಲ್ಲಿ ಸಹಾರಾ ಸಂಸ್ಥೆಯ ಮುಖ್ಯಸ್ಥ ಸುಬ್ರತೋ ರಾಯ್ ರನ್ನು ಬಂಧಿಸಲಾಗಿತ್ತು. ಈ ಹಿಂದೆ ತಮ್ಮ ವಯಸ್ಸಾದ ತಾಯಿಯ ಅನಾರೋಗ್ಯ ನೆಪವೊಡ್ಡಿ ಸುಬ್ರತೋ ರಾಯ್ ಅವರು ಜಾಮೀನು ಪಡೆಯಲು ಮುಂದಾಗಿದ್ದರು. ಆದರೆ ಸುಬ್ರತೋ ರಾಯ್ ಅವರ ನಡೆಯನ್ನು ಅರಿತಿದ್ದ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದ ಅವರು, ಕಂತುಗಳ ಲೆಕ್ಕದಲ್ಲಿ ಷೇರುದಾರರಿಗೆ ಹಣ ನೀಡುತ್ತೇನೆ ಎಂಬ ಪ್ರಸ್ತಾಪ ಮುಂದಿಟ್ಟು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಸುಬ್ರತೋ ರಾಯ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಇದೊಂದು ಸಂಪೂರ್ಣ ಅವಾಸ್ತವಿಕ ಮತ್ತು ಕಾಲ್ಪನಿಕ ಪ್ರಸ್ತಾಪ ಎಂದು ಅಭಿಪ್ರಾಯಪಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ