"ಬ್ರಿಕ್ಸ್" ಬ್ಯಾಂಕ್ ಅಧ್ಯಕ್ಷರಾಗಿ ಕನ್ನಡಿಗ ಕೆವಿ ಕಾಮತ್ ಆಯ್ಕೆ

ಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟವಾದ ಬ್ರಿಕ್ಸ್‌, ಪಾಶ್ಚಾತ್ಯ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಸ್ಥಾಪಿಸಲಾಗಿದ್ದ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಭಾರತದ ಹೆಸರಾಂತ ಬ್ಯಾಂಕರ್ ಕೆವಿ ಕಾಮತ್...
ಕೆವಿ ಕಾಮತ್ (ಸಂಗ್ರಹ ಚಿತ್ರ)
ಕೆವಿ ಕಾಮತ್ (ಸಂಗ್ರಹ ಚಿತ್ರ)

ಶಾಂಘೈ: ಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟವಾದ ಬ್ರಿಕ್ಸ್‌, ಪಾಶ್ಚಾತ್ಯ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಸ್ಥಾಪಿಸಲಾಗಿದ್ದ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಭಾರತದ ಹೆಸರಾಂತ ಬ್ಯಾಂಕರ್ ಕೆವಿ ಕಾಮತ್  ಆಯ್ಕೆಯಾಗಿದ್ದಾರೆ.

ವಿಶ್ವ ಬ್ಯಾಂಕ್‌ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಪರ್ಯಾಯವೆಂದೇ ಪರಿಗಣಿತವಾಗಿರುವ ಮತ್ತು ಇತ್ತೀಚೆಗೆ ಸ್ಥಾಪನೆಯಾಗಿರುವ ಬ್ರಿಕ್ಸ್‌ ಬ್ಯಾಂಕ್‌ನ (ಮೂಲ ಸೌಕರ್ಯಕ್ಕಾಗಿ ಅಭಿವೃದ್ಧಿ ಬ್ಯಾಂಕ್‌) ಮೊದಲ ಅಧ್ಯಕ್ಷ ಹುದ್ದೆಗೆ ಕೆವಿ ಕಾಮತ್ ಅವರನ್ನು ನೇಮಿಸಲಾಗಿದೆ ಎಂದು ವಿತ್ತ ಕಾರ್ಯದರ್ಶಿ ರಾಜೀವ್ ಮಹರ್ಷಿ ಹೇಳಿದ್ದಾರೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸದಸ್ಯರಾಗಿರುವ ಈ ಬ್ರಿಕ್ಸ್‌ ಬ್ಯಾಂಕ್‌ನ  ಬ್ಯಾಂಕ್‌ನ ಮೊದಲ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿದ್ದು, ನೂತನ ಕೇಂದ್ರ ಕಚೇರಿ ಇನ್ನೊಂದು ವರ್ಷದಲ್ಲಿ ಚೀನಾದ ಶಾಂಘೈನಲ್ಲಿ ಸ್ಥಾಪನೆಯಾಗಲಿದೆ. ಅಲ್ಲದೆ ಇನ್ನೊಂದು ವರ್ಷದಲ್ಲಿ ಈ ಬ್ರಿಕ್ಸ್ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ಕೆವಿ ಕಾಮತ್ ಅವರು ಇನ್ನು ಐದು ವರ್ಷಗಳ ಕಾಲ ಬ್ಯಾಂಕ್ ನ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ಹೊರಲಿದ್ದಾರೆ.

2014ರ ಜುಲೈ ತಿಂಗಳಿನಲ್ಲಿ ಬ್ರೆಜಿಲ್ ನಲ್ಲಿ ನಡೆದಿದ್ದ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ವಿಶ್ವ ಬ್ಯಾಂಕ್ ಗೆ ಪರ್ಯಾಯವಾಗಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ಇಂಡಿಯಾ, ಚೀನಾ, ರಷ್ಯಾ ಮತ್ತು ದಕ್ಷಿಣ ಆಫ್ರಿಕಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು.

ಯಾರು ಈ ಕಾಮತ್?
ಕೆವಿ ಕಾಮತ್ ಮೂಲತಃ ನಮ್ಮ ಕರ್ನಾಟಕದವರು ಮತ್ತು ಅಪ್ಪಟ ಕನ್ನಡಿಗರು. ಕುಂದಾಪುರ ವಾಮನ ಕಾಮತ್ ಇವರ ಪೂರ್ಣ ಹೆಸರು. ಈ ಹಿಂದೆ ಐಸಿಐಸಿಐ ಬ್ಯಾಂಕ್ ನ ನಾನ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಮತ್ತು ಇನ್ಫೋಸಿಸ್ ನ ಸ್ವತಂತ್ರ ನಿರ್ದೇಶಕ ಆಗಿ ಕಾಮತ್ ಅವರು ಸೇವೆ ಸಲ್ಲಿಸಿದ್ದರು. ಅಲ್ಲದೆ ಭಾರತದ ಎರಡನೇ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ನಿಂದ ಮುಖ್ಯಸ್ಥ ನಾರಾಯಣಮೂರ್ತಿ ಅವರು ನಿವೃತ್ತಿಯಾದಾಗ ಅವರ ಸ್ಥಾನ ತುಂಬಲು ಎಂವಿ ಕಾಮತ್ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ನಿರ್ದೇಶಕ ಮಂಡಳಿ ಆಯ್ಕೆ ಮಾಡಿತ್ತು.

ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಕಾಮತ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಅಹ್ಮದಾಬಾದ್ ನಿಂದ ಡಿಗ್ರಿ ಕೂಡ ಪಡೆದಿದ್ದಾರೆ. 1971ರಲ್ಲಿ ಐಸಿಐಸಿಐ ಸೇರಿದ್ದ ಕಾಮತ್ 2009 ಏಪ್ರಿಲ್ ನಲ್ಲಿ ಭಾರತದ ಎರಡನೇ ಅತಿದೊಡ್ಡ ಖಾಸಗಿ ಹಣಕಾಸು ಕಂಪನಿಯಿಂದ ನಿವೃತ್ತರಾಗಿದ್ದರು. ಕಾಮತ್ ಅವರು 2007ರಲ್ಲಿ ಫೋರ್ಬ್ಸ್ ಏಷ್ಯಾದ 'ಬಿಸಿನೆಸ್ ಮ್ಯಾನ್ ಆಫ್ ದಿ ಇಯರ್' ಮತ್ತು ದಿ ಎಕಾನಾಮಿಕ್ ಟೈಮ್ಸ್ ನ 'ಬಿಸಿನೆಸ್ ಲೀಡರ್ ಆಪ್ ದಿ ಇಯರ್' ಪ್ರಶಸ್ತಿ ಪಡೆದಿದ್ದರು. ಐಸಿಐಸಿಐ ಕಂಪನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೇರಲು ಅವರ ಕಾಣಿಕೆ ಅಪಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com