
ನವದೆಹಲಿ : ಪ್ರಸಕ್ತ ಸಾಲಿನಲ್ಲಿ 1.18 ಬಿಲಿಯನ್ ಟನ್ ಗಳಷ್ಟು ಸರಕನ್ನು ಸಾಗಾಣಿಕೆ ಮಾಡುವ ಗುರಿ ಹೊಂದಿರುವ ರೈಲ್ವೆ ಇಲಾಖೆಗೆ ಬೋಗಿಗಳ(ವ್ಯಾಗನ್)ಗಳ ಕೊರತೆ ಎದುರಾಗಿದೆ.
ಕಲ್ಲಿದ್ದಲನ್ನು ಸಾಗಾಣಿಕೆ ಮಾಡುವುದಕ್ಕೆ ಪ್ರತಿನಿತ್ಯ 2,000 ರೈಲು ಬಂಡಿಗಳ ಕೊರತೆ ಉಂಟಾಗಿದ್ದು ಮಹತ್ವಾಕಾಂಕ್ಷೆಯ ಗುರಿಗೆ ಅಡ್ಡಿಯುಂಟಾಗುತ್ತಿದೆ. ರೈಲು ಬೋಗಿಗಳ ಕೊರತೆಗೆ ಆತಂಕ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಸುರೇಶ್ ಪ್ರಭು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಲ್ಲಿದ್ದಲು ಸಾಗಣೆಗೆ ಅಡ್ಡಿಯುಂಟಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಸರಕು ಸಾಗಾಣಿಕೆಯ ಬೇಡಿಕೆಗೆ ತಕ್ಕಂತೆ ರೈಲು ಬಂಡಿಗಳನ್ನು ಖರೀದಿಸುವಂತೆ ಸುರೇಶ್ ಪ್ರಭು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸರಕು ಸಾಗಾಣಿಕೆಯ ಬೇಡಿಕೆಯನ್ನು ಪೂರೈಸಲು, ವಾರ್ಷಿಕವಾಗಿ 17,000-18,೦೦೦ ರೈಲ್ವೆ ವ್ಯಾಗನ್ ಅಗತ್ಯವಿದೆ. ಈ ಪೈಕಿ 5,000-6,000 ರೈಲುಗಳನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. 10,000-12,000 ಹೊರಗಿನಿಂದ ಪಡೆಯಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತುರ್ತು ಅಗತ್ಯಕ್ಕಾಗಿ 6,000 ವ್ಯಾಗನ್ ಗಳ ಖರೀದಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಮಂಡಳಿ ಸದಸ್ಯ(ಟ್ರಾಫಿಕ್) ಅಜಯ್ ಶುಕ್ಲಾ ತಿಳಿಸಿದ್ದಾರೆ. ಸರಕು ಸಾಗಣಿಕೆ ಹೆಚ್ಚಿದಂತೆ ಪ್ರತಿ ವರ್ಷವೂ ರೈಲು ವ್ಯಾಗನ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಆದರೆ 2014-15 ಸಾಲಿನಲ್ಲಿ ವ್ಯಾಗನ್ ಗಳ ಖರೀದಿಗೆ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಕೊರತೆ ಎದುರಾಗಿದೆ. 2013 -2014 ರಲ್ಲಿ ನಡೆದಿದ್ದ ಖರೀದಿಸಿದ್ದ 9000 ವ್ಯಾಗನ್ ಗಳು ಇನ್ನೂ ರೈಲ್ವೆ ಇಲಾಖೆಗೆ ಸೇರದೆ ಇರುವುದು ಮತ್ತೊಂದು ಕಾರಣವಾಗಿದೆ.
2015 -16 ರಲ್ಲಿ ಸರಕು ಸಾಗಾಣಿಕೆ ಕಳೆದ ವರ್ಷಕ್ಕಿಂತಲೂ 85 ಟನ್ ಗಳು ಹೆಚ್ಚಾಗಲಿದೆ ಎಂದು ರೈಲ್ವೆ ಬಜೆಟ್ ಸಂದರ್ಭದಲ್ಲಿ ಸಚಿವ ಸುರೇಶ್ ಪ್ರಭು ಹೇಳಿದ್ದರು. ನಿರೀಕ್ಷೆಯಂತೆಯೇ ಕಳೆದ ವರ್ಷಕ್ಕಿಂತಲೂ ಈ ವರ್ಷ ಸರಕು ಸಾಗಾಣಿಕೆಗೆ ಬೇಡಿಕೆ ಹೆಚ್ಚಿದೆ ಆದರೆ ರೈಲು ವ್ಯಾಗನ್ ಗಳ ಕೊರತೆ ಉಂಟಾಗಿದೆ.
Advertisement