ಕರ್ನಾಟಕ ಬ್ಯಾಂಕ್‍ಗೆ ರು.451.45 ಕೋಟಿ ಲಾಭ

ಕರ್ನಾಟಕ ಬ್ಯಾಂಕ್ ನಿವ್ವಳ ಲಾಭವು ಈ ಹಣಕಾಸು ವರ್ಷಾಂತ್ಯಕ್ಕೆ ಸರ್ವಾಧಿಕ ರು. 451.45 ಕೋಟಿಗೆ ಏರಿದೆ. ಕಳೆದ ವರ್ಷದ ರು.311.03 ಕೋಟಿಗಿಂತ ಶೇ. 45.15ರ ವಾರ್ಷಿಕ ವೃದ್ಧಿಯನ್ನು ದಾಖಲಿಸಿದೆ...
ಕರ್ನಾಟಕ ಬ್ಯಾಂಕ್
ಕರ್ನಾಟಕ ಬ್ಯಾಂಕ್

ಮಂಗಳೂರು: ಕರ್ನಾಟಕ ಬ್ಯಾಂಕ್ ನಿವ್ವಳ ಲಾಭವು ಈ ಹಣಕಾಸು ವರ್ಷಾಂತ್ಯಕ್ಕೆ ಸರ್ವಾಧಿಕ ರು. 451.45 ಕೋಟಿಗೆ ಏರಿದೆ. ಕಳೆದ ವರ್ಷದ ರು.311.03 ಕೋಟಿಗಿಂತ ಶೇ. 45.15ರ ವಾರ್ಷಿಕ ವೃದ್ಧಿಯನ್ನು ದಾಖಲಿಸಿದೆ.

ಬ್ಯಾಂಕ್ ಆಡಳಿತ ಮಂಡಳಿಯು ಶುಕ್ರವಾರ ಮಂಗಳೂರಿನ ಪ್ರಧಾನ ಕಛೇರಿಯಲ್ಲಿ ಸಭೆ ನಡೆಸಿ 2014-15 ರ ಹಣಕಾಸು ವರದಿಯನ್ನು ಅಂಗೀಕರಿಸಿ, ಕಳೆದ ವರ್ಷ ತನ್ನ ಷೇರುದಾರರಿಗೆ ನೀಡಿದ ಶೇ. 40 ಡಿವಿಡೆಂಡ್‍ಗೆ ಪೂರಕವಾಗಿ ಈ ವರ್ಷ ಶೇ.50 ಡಿವಿಡೆಂಡ್ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. 2015ರ ಮಾರ್ಚ್‍ಅಂತ್ಯಕ್ಕೆ ಅನ್ವಯವಾಗುವಂತೆ ಒಟ್ಟು ರು.77,688.60 ಕೋಟಿ ವ್ಯವಹಾರ ದಾಖಲಿಸಿದ್ದು, ವಾರ್ಷಿಕ ಶೇ. 12.71 ಪ್ರಗತಿ ದಾಖಲಿಸಿದೆ.

ಬ್ಯಾಂಕಿನ ಠೇವಣಿಯು ಶೇ. 13.37 ಹೆಚ್ಚಳದೊಂದಿಗೆ ರು.46,008.61 ಕೋಟಿಗೆ ವೃದ್ಧಿಸಿದೆ. ಬ್ಯಾಂಕಿನ ಮುಂಗಡ ಕಳೆದ ವರ್ಷದ ರು.28,345.49 ಕೋಟಿಯಿಂದ ರು31,679.99 ಕೋಟಿಗೆ ವೃದ್ಧಿಸಿ ಶೇ. 11.76 ಅಭಿವೃದ್ಧಿ ಕಂಡಿದೆ. ಬ್ಯಾಂಕಿನ ಒಟ್ಟು ಆದಾಯ ಕಳೆದ ವರ್ಷದ ರು.4694.41 ಕೋಟಿಯಿಂದ ಈ ವರ್ಷ ರು.5205.41 ಕೋಟಿಗೆ ಏರಿಕೆ ಕಂಡಿದ್ದು, ಶೇ. 10.89 ಪ್ರಗತಿ ಸಾಧಿಸಿದೆ. ಬ್ಯಾಂಕು ತನ್ನ 4ನೇ ತ್ರೈಮಾಸಿಕ ಅವಧಿಯಲ್ಲಿ ರು.134.42 ಕೋಟಿ ನಿವ್ವಳ ಲಾಭ ಗಳಿಸಿ ಶೇ. 65.52 ವೃದ್ಧಿ ಸಾಧಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ ಇದೇ ಅವಧಿಯಲ್ಲಿ ಬ್ಯಾಂಕು ರು.81.21 ಕೋಟಿ ನಿವ್ವಳ ಲಾಭ ಗಳಿಸಿತ್ತು.

ವಿತ್ತೀಯ ವರ್ಷ 2014-15 ರ ಡಿಸೆಂಬರ್ ತ್ರೈಮಾಸಿಕದ ಅನುತ್ಪಾದಕ ಆಸ್ತಿ ಶೇ. 3.44ರಿಂದ 2015 ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ. 2.95ಕ್ಕೆ ಕಡಿತಗೊಂಡಿದೆ. ಡಿಸೆಂಬರ್ 2014ರ ಅಂತ್ಯಕ್ಕೆ ಶೇ. 2.41 ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಮಾರ್ಚ್ 2015 ರ ಸಾಲಿನಲ್ಲಿ ಶೇ 1.98ಕ್ಕೆ ಇಳಿಕೆ ಕಂಡಿದೆ. ಬ್ಯಾಂಕಿನ ಬಂಡವಾಳ ಪರ್ಯಾಪ್ತಿ ಅನುಪಾತ ಬೆಸೆಲ್ ಅನ್ವಯ ಮಾರ್ಚ್ 2015ರ ಅಂತ್ಯಕ್ಕೆ ಶೇ. 12.41 ಇದ್ದು, ಇದು ಆರ್ ಬಿಐನ ಶೇ.9ರ ಕನಿಷ್ಠ ಬಂಡವಾಳ ಅನುಪಾತಕ್ಕಿಂತ ಹೆಚ್ಚಿನದಾಗಿಯೇ ಇದೆ. ಬ್ಯಾಂಕ್ 2014-15ರ ವಿತ್ತೀಯ ವರ್ಷದಲ್ಲಿ 675 ಶಾಖೆಗಳನ್ನು ಮತ್ತು 1000 ಎಟಿಎಂಗಳನ್ನು ಹೊಂದಿದೆ.

ಮಾರ್ಚ್ 2016ರ ಒಳಗಾಗಿ ಹೊಸ 50 ಶಾಖೆ, 725 ಎಟಿಎಂ ಹೊಂದುವ ಗುರಿಹೊಂದಿದೆ. ಈ ಸಾಲಿನಲ್ಲಿ ಈಗಾಗಲೇ ಉಡುಪಿ ಮತ್ತು ತುಮಕೂರಿನಲ್ಲಿ ಹೊಸ ಪ್ರಾದೇಶಿಕ ಕಚೇರಿಯನ್ನು ಆರಂಭಿಸಿ, ಒಟ್ಟು 12 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಬ್ಯಾಂಕು 2015-16ನೇ ಹಣಕಾಸು ವರ್ಷದಲ್ಲಿ ಒಟ್ಟು ರು.53,500 ಕೋಟಿ ಠೇವಣಿ ಮತ್ತು ರು.37,500 ಕೋಟಿ ಮುಂಗಡದೊಂದಿಗೆ ಒಟ್ಟು ರು.91,000 ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿದೆ.

ಎಂಎಸ್‍ಎಂಇ ಬ್ಯಾಂಕಿಂಗ್ ಎಕ್ಸಲೆನ್ಸ್ ಅವಾಡ್ರ್ಸ್ -2014ರಡಿ ಹೊಸ ವ್ಯವಹರಣಾ ಗುರಿಸಾಧನೆಗಾಗಿ ಅತ್ಯುತ್ತಮ ಬ್ಯಾಂಕು ಪ್ರಶಸ್ತಿ ರನ್ನರ್‍ಅಪ್, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮತ್ತು ಪ್ರಕೃತಿ ಸಂರಕ್ಷಣಾ ಕಾಳಜಿಗಾಗಿ ಅತ್ಯುತ್ತಮ ಬ್ಯಾಂಕು ರನ್ನರ್ ಅಪ್ ಪ್ರಶಸ್ತಿ ದೊರೆತಿದೆ. ಭಾರತೀಯ ರಫ್ತು ಸಂಘಟನೆ ಒಕ್ಕೂಟದ ಪಶ್ಚಿಮ ವಲಯ ವತಿಯಿಂದ 2014-15ರ ಸಾಲಿಗೆ ಎಂಎಸ್‍ಎಂಇ ವಿಭಾಗದ ಉತ್ಕೃಷ್ಟ ರಫ್ತು ಪ್ರಶಸ್ತಿ ಪ್ರಶಸ್ತಿ ಲಭಿಸಿದೆ.

ಪ್ರಕ್ಷುಬದ್ಧ ಮಾರುಕಟ್ಟೆಯ ಹೊರತಾಗಿಯೂ ಕರ್ಣಾಟಕ ಬ್ಯಾಂಕ್ 2014-15ರಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಕನಿಷ್ಠ ಅನುತ್ಪಾದಕ ಆಸ್ತಿಯೊಂದಿಗೆ ತನ್ನ ಕಾರ್ಯ ಚಟುವಟಿಕೆಯ ಕ್ಷಮತೆಯಲ್ಲಿ ಒಟ್ಟಾರೆ ಸುಧಾರಣೆ ಕಂಡಿದೆ. ಬ್ಯಾಂಕು ತನ್ನ ಗ್ರಾಹಕರಿಗೆ ಅನೇಕ ತಂತ್ರಜ್ಞಾನ ಆಧರಿತ ಸೇವೆಗಳನ್ನು ಪರಿಚಯಿಸಲು ಉದ್ಯುಕ್ತವಾಗಿದೆ. ಇತ್ತೀಚೆಗೆ ಪರಿಚಯಿಸಲಾದ ಈ-ಲಾಬಿ ಸೌಕರ್ಯಕ್ಕೆ ಉತ್ತಮ ಸ್ಪಂದನೆ ದೊರಕಿದೆ.
-ಪಿ. ಜಯರಾಮ ಭಟ್, ಆಡಳಿತ ನಿರ್ದೇಶಕ ಮತ್ತು
ಸಿಇಒ, ಕರ್ಣಾಟಕ ಬ್ಯಾಂಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com