
ನವದೆಹಲಿ: ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಣೆ ಮಾಡಿದ್ದ ಸೇವಾ ತೆರಿಗೆ ಹೆಚ್ಚಳ ಇದೇ ಜೂನ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ.
ನೂತನ ಸೇವಾ ತೆರಿಗೆ ಆನ್ವಯ ವಿಮೆ, ದೂರವಾಣಿ ಕರೆ, ಹೋಟೆಲ್ ಮತ್ತಿತರ ಸೇವೆಗಳ ದರದಲ್ಲಿ ಹೆಚ್ಚಳವಾಗುವುದು ಬಹುತೇಕ ಖಚಿತಗೊಂಡಿದೆ. ಶೇ. 12.36 ಇರುವ ಸೇವಾ ತೆರಿಗೆಯನ್ನು ಜೂನ್ 1ರಿಂದ ಶೇ.14ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಜಾಹೀರಾತು, ವಿಮಾನಯಾನ, ಗೃಹ ನಿರ್ಮಾಣ, ಕ್ರೆಡಿಟ್ ಕಾರ್ಡ್, ಇವೆಂಟ್ ಮ್ಯಾನೇಜ್ವೆುಂಟ್ ಮತ್ತಿತರ ಕ್ಷೇತ್ರಗಳಲ್ಲಿನ ಸೇವಾ ಶುಲ್ಕ ಏರಿಕೆಯಾಗಲಿದೆ.
ಕಳೆದ ಫೆಬ್ರವರಿಯಲ್ಲಿ ಮಂಡನೆಯಾಗಿದ್ದ ಬಜೆಟ್ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇವಾ ತೆರಿಗೆ ಹೆಚ್ಚಿಸುವ ನಿರ್ಧಾರ ಘೊಷಿಸಿದ್ದರು. ಮಧ್ಯಮವರ್ಗದ ಜನತೆಗೆ ಬಜೆಟ್ನಲ್ಲಿ ಹಲವು ತೆರಿಗೆ ವಿನಾಯಿತಿ ಕಲ್ಪಿಸಲಾಗಿದ್ದರೂ ಆದಾಯದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಜೊತೆಗೆ ಕ್ಲಬ್, ವಿವಿಧ ಸಂಸ್ಥೆಗಳ ಸದಸ್ಯತ್ವ ಮತ್ತು ವಕೀಲರ ಸೇವಾ ಶುಲ್ಕ ಕೂಡ ಹೆಚ್ಚಳವಾಗಿದೆ.
ಯಾವ ಕ್ಷೇತ್ರಗಳಲ್ಲಿ ಏರಿಕೆ
ಹೋಟೆಲ್ ಬಿಲ್ ದುಬಾರಿಯಾಗಲಿದ್ದು, ಇದು ಎಲ್ಲಾ ಸಣ್ಣ ಪುಟ್ಟ ಹೋಟೆಲ್, ದರ್ಶಿನಿ, ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಗಳಿಗೂ ಅನ್ವಯವಾಗಲಿದೆ. ತಿಂಗಳ ಮೊಬೈಲ್ ಬಿಲ್ ಗೆ ಹೊಸದಾಗಿ ಸೇವಾ ತೆರಿಗೆ ಸೇರ್ಪಡೆಯಾಗಲಿದ್ದು, ಶೇ 14ರಷ್ಟು ಬಿಲ್ ಮೊತ್ತ ಹೆಚ್ಚಳವಾಗಲಿದೆ. ಬಿಲ್ ಮೊತ್ತ ಹೆಚ್ಚದಂತೆ ತೆರಿಗೆ ಮೊತ್ತವೂ ಏರಿಕೆಯಾಗಲಿದೆ. ಇದಲ್ಲದೆ ದೇಶಿ, ವಿದೇಶಿ ವಿಮಾನಯಾನ ಟಿಕೆಟ್ ದರದ ಜೊತೆಗೆ ಶೇ 14ರಷ್ಟು ಸೇವಾ ತೆರಿಗೆ ಸೇರ್ಪಡೆಗೊಳ್ಳಲಿದ್ದು, ವಿಮಾನದಲ್ಲಿ ಪ್ರಯಾಣ ದುಬಾರಿಯಾಗಲಿದೆ.
ಡಿಟಿಎಚ್, ಬ್ಯೂಟಿ ಪಾರ್ಲರ್, ಟ್ಯಾಕ್ಸಿ, ಕ್ಯಾಬ್ ಸೇವೆ, ವಿಮೆ, ಕೊರಿಯರ್, ಲಾಂಡ್ರಿ ಎಲ್ಲವೂ ದುಬಾರಿಯಾಗಲಿದೆ.ಇನ್ನು ಮನರಂಜನೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲ ರಾಜ್ಯಗಳಲ್ಲಿ ಮನರಂಜನೆ ತೆರಿಗೆ ವಿನಾಯತಿ ಇರುವುದರಿಂದ ಸಿನಿಮಾ ಟಿಕೆಟ್ ದರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಸೇವಾ ತೆರಿಗೆ ಮಾತ್ರ ಎಲ್ಲೆಡೆ ಅನ್ವಯವಾಗಲಿದ್ದು, ಆನ್ ಲೈನ್ ಸಿನಿಮಾ ಟಿಕೆಟ್ ಬುಕ್ಕಿಂಗ್ ದರ ಏರಿಕೆಯಾಗುವ ನಿರೀಕ್ಷಿ ಇದೆ. ಇದರ ಜೊತೆಗೆ ಎಜುಕೇಷನ್ ಸೆಸ್ ಕೂಡಾ ದುಬಾರಿಯಾಗಲಿದ್ದು, ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳವಾಗಲಿದೆ.
Advertisement