
ನವದೆಹಲಿ: ವಿಷಕಾರಿ ಲೆಡ್ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಕಳೆದ 5 ತಿಂಗಳ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಇದೀಗ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಸ್ನ್ಯಾಪ್ ಡೀಲ್ ನಲ್ಲಿ ಕೇವಲ 5 ನಿಮಿಷದಲ್ಲಿ 60 ಸಾವಿರ ಕಿಟ್ ಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಸ್ನ್ಯಾಪ್ ಡೀಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟೋನಿ ನವೀನ್ ಅವರು ಹೇಳುವಂತೆ, ನಿಷೇಧಕ್ಕೆ ಒಳಗಾಗಿರುವ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ತನ್ನ ವಿವಾದಗಳನ್ನು ಪರಿಷ್ಕರಿಸಿಕೊಂಡಿದೆ. ಇದೀಗ ಅದರ ಮೇಲಿದ್ದ ನಿಷೇಧ ತೆರವುಗೊಂಡಿದ್ದು, ಮ್ಯಾಗಿ ಮಾರಾಟದ ಕುರಿತು ನವೆಂಬರ್ 9ರಿಂದಲೇ ನಾವು ಪ್ರಚಾರ ನೀಡಿದ್ದೆವು. ಅದರಂತೆ ಇಂದಿನಿಂದ ಮಾರಾಟ ಆರಂಭವಾಗಿದ್ದು, ಮಾರಾಟ ಆರಂಭವಾದ ಕೇವಲ 5 ನಿಮಿಷದಲ್ಲಿ 60 ಸಾವಿರ ಮ್ಯಾಗಿ ಕಿಟ್ ಗಳು ಮಾರಾಟವಾಗಿವೆ. ಪ್ರತಿಯೊಂದು ಕಿಟ್ ನಲ್ಲಿ 12 ಪ್ಯಾಕೆಟ್ ಗಳಿವೆ ಎಂದು ಹೇಳಿದ್ದಾರೆ.
ಅಲ್ಲದೆ ಗ್ರಾಹಕರು ಕೂಡ ಮ್ಯಾಗಿ ವಾಪಸಾತಿಗೆ ಕಾಯುತ್ತಿದ್ದರು. ಹೀಗಾಗಿ ನಮ್ಮ ಸಂಸ್ಥೆ ನೀಡಿದ ಫ್ಲ್ಯಾಶ್ ಡೀಲ್ ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 3 ದಿನಗಳ ಹಿಂದಿನಿಂದಲೇ ಈ ಬಗ್ಗೆ ನಾವು ವಿವಿಧ ರೀತಿಯ ಪ್ರಚಾರ ನಡೆಸಿದ್ದೆವು. ಪೋಸ್ಟ್ ಕಾರ್ಡ್ ಗಳು, 2016 ಮ್ಯಾಗಿ ಕ್ಯಾಲೆಂಡರ್ ಗಳಲ್ಲಿ ವೆಲ್ ಕಮ್ ಬ್ಯಾಕ್ ಎಂಬ ಸ್ಲೋಗನ್ ಗಳೊಂದಿಗೆ ಪ್ರಚಾರ ನಡೆಸಿದ್ದೆವು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಟೋನಿ ನವೀನ್ ಹೇಳಿದ್ದಾರೆ.
ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಲೆಡ್ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಕಳೆದ 5 ತಿಂಗಳ ಹಿಂದೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ದ ವತಿಯಿಂದ ನಿಷೇಧ ಹೇರಲಾಗಿತ್ತು. ಇದಾದ ಬಳಿಕ ಮಾರುಕಟ್ಟೆಯಲ್ಲಿದ್ದ ಅಷ್ಟೂ ಮ್ಯಾಗಿ ಪ್ಯಾಕೆಟ್ ಗಳನ್ನು ನೆಸ್ಲೆ ಸಂಸ್ಥೆ ವಾಪಸ್ ಪಡೆದು ನಾಶ ಮಾಡಿತ್ತು. ಇದೀಗ ಎಫ್ಎಸ್ಎಸ್ಎ ಮ್ಯಾಗಿಗೆ ಹಸಿರು ನಿಶಾನೆ ತೋರಿರುವುದರಿಂದ ದೇಶದ 100ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮ್ಯಾಗಿ ಮರು ಮಾರಾಟಕ್ಕೆ ಸಜ್ಜಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ವಿತರಕರನ್ನು ನೇಮಿಸಲಾಗಿದ್ದು, ಇಂದಿಗೂ ನಿಷೇಧ ತೆರವುಗೊಳ್ಳದ 8 ರಾಜ್ಯಗಳನ್ನು ಹೊರತು ಪಡಿಸಿ, ದೇಶದ ಉಳಿದ ಭಾಗಗಲ್ಲಿ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಮ್ಯಾಗಿ ಲಭ್ಯವಾಗುತ್ತಿದೆ ಎಂದು ತಿಳಿದುಬಂದಿದೆ.
Advertisement