ಸರ್ಕಾರಿ, ಖಾಸಗಿ ಹೂಡಿಕೆ ಕುಸಿದರೆ ಕಾದಿದೆ ಸಂಕಷ್ಟ: ರಘುರಾಮ್ ರಾಜನ್
ಹಾಂಕಾಂಗ್: ಭಾರತದ ಆರ್ಥಿಕ ಪ್ರಗತಿ ಕುರಿತು ಹಲವು ಆತಂಕಗಳು ಎದುರಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.8ರಿಂದ 8.5ರಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
ಆದರೆ ಆರ್‍ಬಿಐ ಮಾತ್ರ ತನ್ನ ಮುನ್ನೋಟದಲ್ಲಿ ಮೊದಲಿಗೆ ಶೇ.7.6ರಷ್ಟು ಇರಲಿದೆ ಎಂದು ಹೇಳಿದ್ದನ್ನು ಪರಿಷ್ಕರಿಸಿ ಶೇ.7.4ರಷ್ಟು ಮಾತ್ರ ಪ್ರಗತಿ ಇರಲಿದೆ ಎಂದು ತಿಳಿಸಿದೆ. ಏತನ್ಮಧ್ಯೆ ದೇಶದ ಆರ್ಥಿಕ ಪ್ರಗತಿ ಕುರಿತಂತೆ ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆದ ವಾಣಿಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಹೂಡಿಕೆ ಕುಸಿತ ಕಂಡರೆ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತ ತನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಣುವಲ್ಲಿ ಹೂಡಿಕೆ ಅತಿ ಪ್ರಮುಖ ಅಂಶ. ಆದರೆ ಈ ಹೂಡಿಕೆ ದುರ್ಬಲವಾಗಿದ್ದು ಕಾರ್ಖಾನೆಗಳು ತಮ್ಮ ಸಾಮಥ್ರ್ಯಕ್ಕಿಂತಲೂ ಶೇ.30ರಷ್ಟು ಕಡಿಮೆ ಕಾರ್ಯಾಚರಣೆ ನಡೆಸುತ್ತಿವೆ.
ಖಾಸಗಿ ಕಂಪನಿಗಳು ಹೊಸ ಹೂಡಿಕೆ ಮಾಡಲು ನಿರುತ್ಸಾಹ ತೋರುತ್ತಿದ್ದಾರೆ ಎಂದು ರಾಜನ್ ಎಚ್ಚರಿಸಿದ್ದಾರೆ. ಹೂಡಿಕೆ ಮತ್ತು ಆರ್ಥಿಕ ಪ್ರಗತಿ ನಿಧಾನವಾಗಿರುವ ನಡುವೆಯೂ ಹೆಚ್ಚಿನ ವಿದೇಶಿ ನೇರ ಹೂಡಿಕೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿನ ಕಂಡುಬರುತ್ತಿರುವ ಚಲನೆ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಸಾಧ್ಯತೆಗಳಿವೆ ಎಂದಿದ್ದಾರೆ. ಆದರೂ ಚೀನಾ ಆರ್ಥಿಕ ಪ್ರಗತಿಗೆ ಹೋಲಿಸಿದರೆ ಭಾರತದ ಅಭಿವೃದ್ಧಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದರು.
ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಅಗತ್ಯ. ಖಾಸಗಿ ಹೂಡಿಕೆ ಹಿನ್ನಡೆ ಕಂಡಾಗ ಸರ್ಕಾರವೇ ಬಂಡವಾಳ ತೊಡಗಿಸಬೇಕಾದ್ದು ಅತಿಮುಖ್ಯ.
-ರಘುರಾಂ ರಾಜನ್, ಆರ್‍ಬಿಐ ಗವರ್ನರ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ