ತಯಾರಿಕೆ ಕ್ಷೇತ್ರವೂ ಹಿನ್ನಡೆ

ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಕುಸಿದ ಬೆನ್ನಲ್ಲೇ ಕೈಗಾರಿಕಾ ಉತ್ಪಾದನೆಯೂ ಹಿನ್ನಡೆ ಕಂಡಿರುವ ವರದಿಗಳು ಬಿಡುಗಡೆಯಾಗಿವೆ...
ಭಾರತೀಯ ಉತ್ಪಾದನಾ ವಿಭಾಗ (ಸಾಂದರ್ಭಿಕ ಚಿತ್ರ)
ಭಾರತೀಯ ಉತ್ಪಾದನಾ ವಿಭಾಗ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಕುಸಿದ ಬೆನ್ನಲ್ಲೇ ಕೈಗಾರಿಕಾ ಉತ್ಪಾದನೆಯೂ ಹಿನ್ನಡೆ ಕಂಡಿರುವ ವರದಿಗಳು ಬಿಡುಗಡೆಯಾಗಿವೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಕಳೆದ ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಇಳಿಮುಖ ಕಂಡಿದೆ. ದೇಶದ ಕೈಗಾರಿಕಾ ಕ್ಷೇತ್ರದ ಪ್ರಗತಿಯನ್ನು ಸೂಚಿಸುವ ನಿಕ್ಕಿ ಇಂಡಿಯಾ ಪರ್ಚೇಸ್  ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಜುಲೈನಲ್ಲಿ 52.7ರಷ್ಟು ಇದ್ದದು ಆಗಸ್ಟ್ ನಲ್ಲಿ 52.3ಕ್ಕೆ ಇಳಿದಿದೆ. ಆಗಸ್ಟ್ ತಿಂಗಳಲ್ಲಿ ಮೂಲ ಸೌಕರ್ಯ ಕ್ಷೇತ್ರವೂ ಕುಸಿದಿತ್ತು. ಈಗ ಕೈಗಾರಿಕಾ ಕ್ಷೇತ್ರದ  ಪ್ರಗತಿಯೂ ನಿರಾಶೆ ಮೂಡಿಸಿದೆ. ಇದು ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಕುರಿತು ಹಲವು ಅನುಮಾನಗಳನ್ನು ಮೂಡಿಸಿದೆ. ಆದರೂ ಪಿಎಂಐ 50ಕ್ಕಿಂತಲೂ ಹೆಚ್ಚಾಗಿರುವುದು ಸಮಾಧಾನ  ತಂದಿದೆ. ಪಿಎಂಐ 50ಕ್ಕಿಂತಲೂ ಹೆಚ್ಚಾಗಿದ್ದರೆ ಕ್ಷೇತ್ರ ಪ್ರಗತಿ ಹಾದಿಯಲ್ಲಿದೆ ಎಂದಾಗಲಿದೆ. 50ಕ್ಕಿಂತಲೂ ಕಡಿಮೆಯಾದಲ್ಲಿ ಹಿಂಜರಿತದಲ್ಲಿದೆ ಎಂದು ಲೆಕ್ಕ ಹಾಕಲಾಗುವುದು.

ಮತ್ತೂ ಆಶಾದಾಯಕ ಬೆಳವಣಿಗೆ ಎಂದರೆ ಕಾರ್ಖಾನೆಗಳಲ್ಲಿ ಸಿದ್ಧ ಉತ್ಪನ್ನಗಳ ದಾಸ್ತಾನು ಇಳಿಮುಖ ಕಾಣುತ್ತಿದೆ. ಇದು ಮುಂದಿನ ದಿನಗಳಲ್ಲಿ ತಯಾರಿಕಾ ಕ್ಷೇತ್ರ ಪ್ರಗತಿಯತ್ತ ಸಾಗಲಿದೆ ಎಂಬ  ನಿರೀಕ್ಷೆಗಳನ್ನು ಹೆಚ್ಚಿಸಿದೆ. ಒಟ್ಟಾರೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಂಠಿತಗೊಂಡಿರುವುದರಿಂದ ಆಗಸ್ಟ್ ತಿಂಗಳಲ್ಲಿ ಕೈಗಾರಿಕಾ ಕ್ಷೇತ್ರದ ಪ್ರಗತಿ ಹಿನ್ನಡೆ ಕಂಡಿದೆ.  ಇದರಿಂದ ಕಂಪನಿಗಳು ಹೊಸ ನೇಮಕಾತಿಗೆ ಮುಂದಾಗಿಲ್ಲ ಎಂದು ಪಿಎಂಐ ಸೂಚ್ಯಂಕ ಸಿದ್ಧಪಡಿಸುವ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಮಾರ್ಕಿಟ್‍ನ ಆರ್ಥಿಕ ತಜ್ಞರಾದ ಪೊಲಿಯಾನ ಡಿ ಲಿಮಾ  ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಇಳಿಮುಖ ಕಂಡಿರುವುದರಿಂದ ವೆಚ್ಚದ ಹೊರೆ ಕಡಿಮೆಯಾಗಿ ಹಣದುಬ್ಬರ ದರ ಸಂಯಮದ ಮಟ್ಟದಲ್ಲಿದೆ. ಇದರಿಂದ ಕಂಪನಿಗಳು ದರ ಚೌಕಾಸಿ  ಮಾಡಲು ಅವಕಾಶ ಕಲ್ಪಿಸಿದೆ ಎಂದು ವರದಿ ಹೇಳಿದೆ. ಹಣದುಬ್ಬರ ಆತಂಕ ಕಡಿಮೆಯಾಗಿರುವುದರಿಂದ ಮತ್ತು ಬೇಡಿಕೆ ಕುಂಠಿತಗೊಂಡಿರುವುದರಿಂದ ಆರ್ ಬಿಐ ಬಡ್ಡಿದರಗಳನ್ನು  ಕಡಿತಗೊಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಲಿಮಾ ಅಭಿಪ್ರಾಯಪಟ್ಟಿದ್ದಾರೆ.

ಬಡ್ಡಿದರಗಳನ್ನು ಕಡಿತಗೊಳಿಸುವಂತೆ ಆರ್‍ಬಿಐ ಮೇಲೆ ಉದ್ಯಮ ಸೇರಿದಂತೆ ಎಲ್ಲ  ವಲಯಗಳಿಂದಲೂ ಒತ್ತಡ ಹೆಚ್ಚಿದೆ. ಹಣದುಬ್ಬರ ಮತ್ತು ಇತರ ಕ್ಷೇತ್ರಗಳ ಪ್ರಗತಿಯ ಅಂಕಿಅಂಶಗಳ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಸಹ  ಹೇಳಿದ್ದಾರೆ. ಆರ್‍ಬಿಐ ಈ ವರ್ಷದಲ್ಲಿ ಇದುವರೆಗೂ ಮೂರು  ಬಾರಿ ತಲಾ 25 ಅಂಶಗಳಷ್ಟು ಬಡ್ಡಿದರ ಕಡಿತಗೊಳಿಸಿದೆ. ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನಾ ಸಭೆ ಈ ತಿಂಗಳ  29ರಂದು ನಡೆಯಲಿದ್ದು ಬಡ್ಡಿದರ ಮತ್ತಷ್ಟು ಕಡಿತಗೊಳಿಸುವ ನಿರೀಕ್ಷೆಗಳು ದಟ್ಟವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com