
ಬೆಂಗಳೂರು: ರಾಜ್ಯದ ಜವಳಿ ಹಾಗೂ ಉಕ್ಕು ಉದ್ಯಮದಲ್ಲಿ ಎರಡು ಪ್ರತಿಷ್ಠಿತ ಕಂಪನಿಗಳು ಸುಮಾರು ರು.558.72 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೈಗಾರಿಕಾ ಇಲಾಖೆಯ 40ನೇ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಜವಳಿ ಉದ್ಯಮ ಕ್ಷೇತ್ರದ ಅಗ್ರ ಸಂಸ್ಥೆ ಈಕೋ ಮೈಸ್ಟರ್ ಬೀಡ್ಸ್ ಇಂಡಿಯಾ ಸಂಸ್ಥೆ ರು.148 ಕೋಟಿ ಹಾಗೂ ಉಕ್ಕು ಉದ್ಯಮದಲ್ಲಿ ಟಯೋಟಾ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ ಸರು.410 ಕೋಟಿ ಹೂಡಿಕೆಗೆ ತೀರ್ಮಾನಿಸಿವೆ. ಈ ಸಂಸ್ಥೆಗಳ ಪ್ರಸ್ತಾಪಗಳಿಗೂ ಒಪ್ಪಿಗೆ ನೀಡಲು ಸಮಿತಿ ಅನುಮೋದನೆ ದೊರೆತಿದೆ.
ಈಕೋ ಮೈಸ್ಟರ್ ಬೀಡ್ಸ್ ಇಂಡಿಯಾ ಸಂಸ್ಥೆ ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿ ಸ್ಲಾಗ್ ಬಾಲ್ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಟಯೋಟಾ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಉತ್ಪಾದನೆ ಯಂತ್ರೋಪಕರಣಗಳ ತಯಾರಿಕಾ ಘಟಕ ಆರಂಭಿಸಲು ಮುಂದಾಗಿದೆ.
ಈ ಎರಡೂ ಯೋಜನೆಗಳಿಂದ 932 ಉದ್ಯೋಗ ಸೃಷ್ಟಿಯಾಗಲಿದ್ದು, ಜವಳಿ ಉದ್ಯಮ ಬೆಳೆಯಲಿದೆ. ಈ ಯೋಜನೆ ಸೇರಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 78 ಯೋಜನೆ-ಗಳಿಗೆ ಅನುಮತಿ ನೀಡಿದಂತಾಗಿದೆ. ಇದರಿಂದ ರು.24,-018 ಕೋಟಿ ಹೂಡಿಕೆಯಾಗಲಿದ್ದು, 16,328 ಉದ್ಯೋಗ ಲಭಿಸಲಿದೆ.
ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಮೂಲಸೌಕರ್ಯ ಸಚಿವ ರೋಷನ್ ಬೇಗ್, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ರತ್ನಪ್ರಭ, ಜವಳಿ ಇಲಾಖೆ ಕಾರ್ಯದರ್ಶಿ ರಾಜು ಇದ್ದರು.
Advertisement