
ಚೆನ್ನೈ: ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಎಫ್ ಡಿಐ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಧಿಕ ವಿದೇಶಿ ನೇರ ಬಂಡವಾಳ ಹೂಡಿಕೆ ದೇಶದ ಚಾಲ್ತಿ ಖಾತೆ ಕೊರತೆಯನ್ನು ಇಳಿಕೆ ಮಾಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ವಿದೇಶಿ ನೇರ ಬಂಡಬಾಳ ಹೂಡಿಕೆ ಹೆಚ್ಚುತ್ತಿರುವುದರ ಪರಿಣಾಮ ಚಾಲ್ತಿ ಕೊರತೆ ಕಡಿಮೆಯಾಗುವುದಷ್ಟೇ ಅಲ್ಲದೇ ಹೊರಗಿನಿಂದ ಆರ್ಥಿಕ ನೆರವು ಪಡೆಯುವ ಅಗತ್ಯವನ್ನು ಕಡಿಮೆಯಾಗಲಿದೆ ಎಂದು ಮೂಡೀಸ್ ಹೇಳಿಕೆ ಬಿಡುಗಡೆ ಮಾಡಿದೆ. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಮಿತಿ ಸಡಿಲಗೊಳಿಸಿರುವುದರಿಂದ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚುತ್ತಿದ್ದು ಸಕಾರಾತ್ಮಕ ವಾತಾವರಣ ಮೂಡಿಸಿದೆ. ಪರಿಣಾಮ ಜಾಗತಿಕವಾಗಿ ಆರ್ಥಿಕ ಸ್ಥಿತಿ ದುರ್ಬಲಗೊಂಡಿದ್ದರೂ ಭಾರತದ ಆರ್ಥಿಕತೆ ಬಾಹ್ಯ ಒತ್ತಡಗಳನ್ನು ಎದುರಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸಲಿದೆ ಎಂದು ಮೂಡೀಸ್ ಅಭಿಪ್ರಾಯಪಟ್ಟಿದೆ.
ಇನ್ನು ಬಜೆಟ್ ನಲ್ಲಿ ಚಿನ್ನದ ಮೇಲೆ ಅಬಕಾರಿ ತೆರಿಗೆ ವಿಧಿಸಿರುವುದು ಚಿನ್ನದ ಆಮದನ್ನು ಕಡಿಮೆಗೊಳಿಸಲಿದೆ ಎಂದಿರುವ ಮೂಡೀಸ್, ಮಂದ ಗತಿಯಲ್ಲಿರುವ ಜಾಗತಿಕ ಆರ್ಥಿಕ ಚಟುವಟಿಕೆ (ಪ್ರಮುಖವಾಗಿ ಗಲ್ಫ್ ರಾಜ್ಯಗಳದ್ದು) ಭಾರತಕ್ಕೆ ಹಣಕಾಸಿನ ಒಳಹರಿವನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
Advertisement