ಫೋರ್ಬ್ಸ್ ಏಷ್ಯಾದ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿ: ನೀತಾ ಅಂಬಾನಿಗೆ ಮೊದಲ ಸ್ಥಾನ

ಏಷ್ಯಾದ 50 ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಈ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯಕಾರಿ ನಿರ್ದೇಶಕಿ ನೀತಾ ಅಂಬಾನಿ...
ನೀತಾ ಅಂಬಾನಿ ಮತ್ತು ಅರುಂಧನಿ ಭಟ್ಟಾಚಾರ್ಯ
ನೀತಾ ಅಂಬಾನಿ ಮತ್ತು ಅರುಂಧನಿ ಭಟ್ಟಾಚಾರ್ಯ

ಮುಂಬೈ: ಏಷ್ಯಾದ 50 ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಈ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯಕಾರಿ ನಿರ್ದೇಶಕಿ ನೀತಾ ಅಂಬಾನಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಮೊದಲ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರ ಜೊತೆ ಇತರ ಎಂಟು ಮಂದಿ ಭಾರತೀಯ ಮಹಿಳೆಯರು ಕೂಡ ಸ್ಥಾನ ಪಡೆದಿದ್ದಾರೆ.

ವಿವಿಧ ಉದ್ಯಮಗಳಾದ ಬ್ಯಾಂಕಿಂಗ್, ಬಯೋಟೆಕ್, ಡಾಟಾ ಅನಾಲಿಸಿಸ್, ವಸ್ತ್ರೋದ್ಯಮ, ಔಷಧಿ ಮತ್ತು ಸೌಂದರ್ಯ ಕ್ಷೇತ್ರಗಳ ಉದ್ಯಮದಲ್ಲಿ ತೊಡಗಿರುವ ಮಹಿಳೆಯರ ಕಾರ್ಯಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಕೋಟ್ಯಾಧೀಶರರ ಪತ್ನಿಯರು ತಮ್ಮ ಗಂಡನ ನೆರಳಿನಡಿ ಇರುವುದನ್ನು ಕಾಣುವ ಭಾರತದಂತಹ ದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ನೀತಾ ಅಂಬಾನಿಯವರ ಸಾಧನೆ ನಿಜಕ್ಕೂ ವಿಶೇಷ. ಅವರ ಈ ಸಾಧನೆಯೇ ಈ ವರ್ಷದ ಏಷ್ಯಾದ ಪ್ರಭಾವಶಾಲಿ ಮಹಿಳಾ ಉದ್ಯಮಿಗಳ ಪೈಕಿ ಮೊದಲ ಸ್ಥಾನಕ್ಕೇರಿಸಿದೆ. ಅವರು ಭಾರತದ ವಾಣಿಜ್ಯ ಕ್ಷೇತ್ರದ ಮೊದಲ ಮಹಿಳೆ ಎಂದು ಫೋರ್ಬ್ಸ್ ಮ್ಯಾಗಜೀನ್ ಶ್ಲಾಘಿಸಿದೆ. ನೀತಾ ಅಂಬಾನಿ ಕುರಿತು ಪ್ರತ್ಯೇಕ ಲೇಖನವನ್ನು ಅದು ಪ್ರಕಟಿಸಿದೆ.

ರಿಲಯನ್ಸ್ ನ ಕಾರ್ಯಕಾರಿ ನಿರ್ದೇಶಕಿಯಾಗಿ ತಮ್ಮ ಪತಿಯ ಕೆಲಸಗಳಲ್ಲಿ ಅವರು ಔಪಚಾರಿಕವಾಗಿ ತೊಡಗಿಕೊಂಡಿಲ್ಲ. ಆದರೆ ಕಂಪೆನಿಯಲ್ಲಿ, ಅಲ್ಲಿನ ಉದ್ಯೋಗಿಗಳ ಪಾಲಿಗೆ ನೀತಾ ಅವರು ಪ್ರಭಾವಿ ಮಹಿಳೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಉದ್ಯಮದಲ್ಲಿ ಮಾತ್ರವಲ್ಲದೆ ನೀತಾ ಅಂಬಾನಿಯವರು ಐಪಿಎಲ್ ಮೂಲಕ ಕ್ರಿಕೆಟ್ ಪಂದ್ಯದಲ್ಲಿಯೂ ಬಂಡವಾಳ ಹೂಡಿ ಗೆದ್ದಿದ್ದಾರೆ.

ಉಳಿದಂತೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಹಿವಾಟನ್ನು ಲಾಭದತ್ತ ಕೊಂಡೊಯ್ದ ಅದರ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಟೆಕ್ ಉದ್ಯಮವಾದ ಮು ಸಿಗ್ಮಾದ ಮುಖ್ಯ ಕಾರ್ಯನಿರ್ವಾಹಕಿ ಅಂಬಿಗಾ ಧೀರಜ್, ವಸ್ತ್ರೋದ್ಯಮ ಕಂಪೆನಿಯಾದ ವೆಲ್ಸ್ಪನ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕಿ ದಿಪಾಲಿ ಗೋಯೆಂಕಾ, ಔಷಧ ಕಂಪೆನಿ ಲುಪಿನ್ ನ ಮುಖ್ಯ ಕಾರ್ಯನಿರ್ವಾಹಕಿ ವಿನಿತಾ ಗುಪ್ತಾ, ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್, ವಿಎಲ್ ಸಿಸಿ ಹೆಲ್ತ್ ಕೇರ್ ನ ಉಪಾಧ್ಯಕ್ಷೆ ವಂದನಾ ಲೂತ್ರ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ 2016ನೇ ಸಾಲಿನ 50 ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com