
ಮುಂಬೈ: ಮುಂಬೈ ಷೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 100 ಅಂಕಗಳಷ್ಟು ಏರಿಕೆ ಕಂಡುಬಂದರೂ ಸಹ ಐಟಿ ವಲಯದ ಷೇರುಗಳಲ್ಲಿ ಕುಸಿತ ಕಂಡುಬಂದು ಸದ್ಯದ ವರದಿ ಬಂದಾಗ 23 ಅಂಕಗಳ ಇಳಿಕೆಯೊಂದಿಗೆ 24 ಸಾವಿರದ 652ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 4 ಅಂಕಗಳ ಇಳಿಕೆಯೊಂದಿಗೆ 7 ಸಾವಿರದ 551ರಲ್ಲಿ ವಹಿವಾಟು ನಡೆಸುತ್ತಿದೆ.
ಪ್ರಮುಖ ಐಟಿ ಕಂಪೆನಿಗಳಾದ ಟಿಸಿಎಸ್, ಟೆಕ್ ಮಹೀಂದ್ರ, ವಿಪ್ರೋ, ಹೆಚ್ ಸಿಎಲ್ ಟೆಕ್ನೋಲಜೀಸ್, ಮೈಂಡ್ ಟ್ರೀ, ಒಎಫ್ಎಸ್ಎಸ್ ಮತ್ತು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಗಳಲ್ಲಿ ಇಳಿಕೆ ಕಂಡುಬಂದದ್ದೇ ಇಂದಿನ ವಹಿವಾಟಿನ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಏಷ್ಯಾ ಷೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಇಳಿಕೆ ಕಂಡುಬಂದಿದೆ.
ಈ ವಾರದಲ್ಲಿ ಏಪ್ರಿಲ್ 14ರ ಗುರುವಾರ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ಎ.15ರಂದು ರಾಮ ನವಮಿ ಪ್ರಯುಕ್ತ ಷೇರು ಮಾರುಕಟ್ಟೆಗೆ ರಜೆ ಇರುವುದರಿಂದ ಹೂಡಿಕೆದಾರರು ಈ ವಾರದ ಮೊದಲ ಮೂರು ದಿನಗಳಿಗೆ ವ್ಯವಹಾರ ಸೀಮಿತವಾಗಿರುವುದನ್ನು ದೃಷ್ಟಿಯಲ್ಲಿರಿಸಿಕೊಂಡು ಎಚ್ಚರಿಕೆಯ ನಡೆ ಇರಿಸುತ್ತಿರುವುದು ಕಂಡುಬಂದಿದೆ.
ಜಪಾನ್ ನ ನಿಕ್ಕಿ ಶೇಕಡಾ 1.56ರಷ್ಟು ಕುಸಿತ ಕಂಡುಬಂದರೆ, ಹಾಂಗ್ ಕಾಂಗ್ ನ ಹಾಂಗ್ ಸೆಂಗ್ ಶೇಕಡಾ 0.13ರಷ್ಟು, ತೈವಾನ್ ನ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಶೇಕಡಾ 0.15ರಷ್ಟು ಕುಸಿತ ಕಂಡುಬಂದಿದೆ. ಇನ್ನೊಂದೆಡೆ ಚೀನಾದ ಶಾಂಗೈ ಷೇರು ಮಾರುಕಟ್ಟೆ ಶೇಕಡಾ 1.6ರಷ್ಟು ಕುಸಿದಿದೆ.
ನಿಫ್ಟಿ ಸಹ ಸಿಂಗಾಪೂರ ವಿನಿಮಯ ಮಾರುಕಟ್ಟೆಯಲ್ಲಿ 15 ಅಂಕಗಳ ಕುಸಿತ ಕಂಡುಬಂದು 7 ಸಾವಿರದ 566ರಲ್ಲಿ ವಹಿವಾಟು ನಡೆಸಿತು.
Advertisement