ಆಟೊಮೇಷನ್ ನಿಂದ 2025 ರ ವೇಳೆಗೆ 20 ಕೋಟಿ ಯುವಕರ ಉದ್ಯೋಗಕ್ಕೆ ಕತ್ತರಿ: ಮೋಹನ್ ದಾಸ್ ಪೈ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಟೋಮೇಷನಿಂದ 2025 ರ ವೇಳೆಗೆ ಮಧ್ಯಮವರ್ಗದ ಸುಮಾರು 20 ಕೋಟಿ ಯುವಕರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಮೋಹನ್ ದಾಸ್ ಪೈ
ಮೋಹನ್ ದಾಸ್ ಪೈ
Updated on
ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಟೋಮೇಷನ್ ಹಾಗೂ ತಂತ್ರಜ್ಞಾನದ ಬೆಳವಣಿಯಿಂದ 2025 ರ ವೇಳೆಗೆ  ಮಧ್ಯಮವರ್ಗದ ಸುಮಾರು 20 ಕೋಟಿ ಯುವಕರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ. 
2025 ರ ವೇಳೆಗೆ 21-41 ವಯಸ್ಸಿನ 20 ಕೋಟಿ ಯುವಕರು ಕೆಲಸ ಕಳೆದುಕೊಳ್ಳುವ ಅಥವಾ ಕೆಲಸ ಇಲ್ಲದೇ ಇರುವ ಪರಿಸ್ಥಿತಿ ಎದುರಿಸಲಿದ್ದಾರೆ. 200 ಮಿಲಿಯನ್ ನಿರುದ್ಯೋಗಿ ಯುವಕರನ್ನು ಏನು ಮಾಡುವುದು ಎಂದು ಯಾರಿಗೂ ತಿಳಿದಿಲ್ಲ, ಸರಿಯಾದ ಡಾಟಾ ಇಲ್ಲವಾದ ಕಾರಣ ಸರ್ಕಾರದ ನೀತಿಗಳಿಗೂ ಈ ಬಗ್ಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ನ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದ್ದಾರೆ. 
ರಾಷ್ಟ್ರೀಯ ಹೆಚ್ಆರ್ ಎಂ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಮೊಹನ್ ದಾಸ್ ಪೈ, ಕಳೆದ ದಶಕ (10 ವರ್ಷ)ದಲ್ಲಿ ಶೇ.62 ರಷ್ಟು ಜನರು ಕೃಷಿ ಮಾಡುತ್ತಿದ್ದರು. ಕೃಷಿ ಮಾಡುತ್ತಿದ್ದ ಜನರ ಸಂಖ್ಯೆ ಈಗ ಶೇ.52 ಕ್ಕೆ ಇಳಿಕೆಯಾಗಿದೆ. ಆದರೆ ಸೇವೆ ಮತ್ತು ಕೈಗಾರಿಕೆಗಳ ಮೇಲೆ ಅವಲಂಬಿತವಾಗಿರುವ ಜನಸಂಖ್ಯೆ ಶೇ.10 ರಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದಿದ್ದಾರೆ ಮೋಹನ್ ದಾಸ್ ಪೈ. 
ಸೇವಾ ಉದ್ಯಮದಲ್ಲಿರುವವರ ಸಂಖ್ಯೆ ಹಾಗೂ ಕೃಷಿಯಲ್ಲಿರುವವರ ಸಂಖ್ಯೆಯ ನಡುವಿನ ಅಂತರ ಹೆಚ್ಚುತ್ತಿದೆ. ಇದೇ ವೇಳೆ ಕಂಪನಿಗಳು ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಟೊಮೇಷನ್ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ನಿಯಮಾಧಾರಿತ ಕೆಲಸಗಳನ್ನು ಆಲ್ಗರಿದಂ ಗಳು ಮಾಡುವ ಸಾಧ್ಯತೆ ಹೆಚ್ಚಿದ್ದು ಮಧ್ಯಮವರ್ಗದವರು ಹೆಚ್ಚಿರುವ ನಿಯಮ ಆಧಾರಿತ ಕೆಲಸಗಳು ಅಸ್ಥಿತ್ವವನ್ನೇ ಕಳೆದುಕೊಳ್ಳಲಿದೆ. ಯಂತ್ರಗಳು ಇನ್ನೂ ಸೃಜನಶೀಲವಾಗಿಲ್ಲ, ಸೃಜನಶೀಲ ವ್ಯಕ್ತಿಗಳು ಮಾತ್ರ ಉಳಿದುಕೊಳ್ಳಲಿದ್ದಾರೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. 
ಈಗಾಗಲೇ ಫಾಕ್ಸ್ ಕಾನ್ ನಂತಹ ಸಂಸ್ಥೆಗಳು ಕೆಲಸಗಳಿಗೆ ರೊಬೋಟ್ ಗಳನ್ನು ನಿಯೋಜಿಸಿದ್ದು, ಚಾಲಕ ರಹಿತ ಕಾರು, ಟ್ರಕ್ ಗಳನ್ನು ನಿರ್ಮಿಸಲಾಗುತ್ತಿದೆ. ರೊಬೋಟ್ ಗಳು ವೇತನ ಪರಿಷ್ಕರಣೆ ಕೇಳುವುದಿಲ್ಲ. 24 ಗಂಟೆಗಳು ಕೆಲಸ ಮಾಡಲಿವೆ ಇದರಿಂದಾಗಿ ಉದ್ಯೋಗಗಳ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಉಂಟಾಗಲಿದೆ ಎಂದು ಪೈ ಹೇಳಿದ್ದಾರೆ. 
ಇನ್ನು ಬ್ಯಾಂಕಿಂಗ್ ಸೆಕ್ಟರ್ ನಲ್ಲೂ ಉದ್ಯೋಗ ಕಡಿತವಾಗುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಮೋಹನ್ ದಾಸ್ ಪೈ, ಎಟಿಎಂ, ಡಿಜಿಟಲ್ ಪೇಮೆಂಟ್ ಗಳ ಸಹಾಯದಿಂದ ಹಣಪಾವತಿಯೂ ಯಾಂತ್ರೀಕೃತಗೊಂಡಿದೆ. ಅಮೆರಿಕಾದಲ್ಲಿರುವ ಬ್ಯಾಂಕ್ ಬ್ರಾಂಚ್ ಗಳು ಹಾಗೂ ಅಲ್ಲಿನ ಉದ್ಯೋಗಾವಕಾಶಗಳು ಕುಸಿಯುತ್ತಿದೆ. ಭಾರತದಲ್ಲೂ ಶೀಘ್ರವೇ ರೋಬೋ ಫೈನಾನ್ಸ್ ವ್ಯವಸ್ಥೆ ಜಾರಿಗೆ ಬರಲಿದ್ದು, ಬ್ಯಾಂಕ್ ಸಾಲ ಪಡೆಯುವ ವ್ಯಕ್ತಿಗೆ ಅರ್ಧ ಗಂಟೆಯಲ್ಲಿ ಎಲ್ಲಾ ಪೋರ್ಟಲ್ ಗಳನ್ನು ಜಾಲಾಡಿ ಬ್ಯಾಂಕ್ ಸಾಲದ ಬಗ್ಗೆ ಉಲ್ಲೇಖ ನೀಡಲಿದೆ. ಉದ್ಯೋಗ ಕಡಿತದಿಂದ ಕೆಲಸ ಹುಡುಕುವವರ ವರ್ಗ ಹೆಚ್ಚಲಿದ್ದು, ಹೆಚ್ ಆರ್ ಮ್ಯಾನೇಜರ್ ಗಳು ಈ ಸಮಸ್ಯೆಯನ್ನು ಬಗೆಹರಿಸುವ ಸವಾಲು ಸ್ವೀಕರಿಸಬೇಕಿದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com