ನ್ಯಾನೊ ಸಂಬಂಧ ರತನ್ ಟಾಟಾರೊಂದಿಗೆ ಭಿನ್ನಾಭಿಪ್ರಾಯವಿತ್ತು: ನುಸ್ಲಿ ವಾಡಿಯಾ

ಟಾಟಾ ಸಂಸ್ಥೆಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ ತಮ್ಮ ಮತ್ತು ರತನ್ ಟಾಟಾರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಹೇಳಿದ್ದಾರೆ.
ನುಸ್ಲಿ ವಾಡಿಯಾ ಮತ್ತು ರತನ್ ಟಾಟಾ (ಸಂಗ್ರಹ ಚಿತ್ರ)
ನುಸ್ಲಿ ವಾಡಿಯಾ ಮತ್ತು ರತನ್ ಟಾಟಾ (ಸಂಗ್ರಹ ಚಿತ್ರ)

ನವದೆಹಲಿ: ಟಾಟಾ ಸಂಸ್ಥೆಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ ತಮ್ಮ ಮತ್ತು ರತನ್ ಟಾಟಾರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಸಂಸ್ಥೆಯ ಸ್ವತಂತ್ರ್ಯ ನಿರ್ದೇಶಕರೂ ಕೂಡ ಆಗಿರುವ ನುಸ್ಲಿ ವಾಡಿಯಾ ಅವರು, ಸಂಸ್ಥೆಯ ಷೇರುದಾರರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಮತ್ತು ರತನ್ ಟಾಟಾ ನಡುವಿನ ಭಿನ್ನಾಭಿಪ್ರಾಯಗಳ  ಕುರಿತು ಮಾಹಿತಿ ನೀಡಿರುವ ಅವರು, ಟಾಟಾ ನ್ಯಾನೊ ಯೋಜನೆಯಿಂದಾಗಿ ಸಂಸ್ಥೆ ಬೊಕ್ಕಸ ಖಾಲಿಯಾಗಿತ್ತು. ಈ ಬಗ್ಗೆ ನನ್ನ ಮತ್ತು ರತನ್ ಟಾಟಾ ನಡುವೆ ಭಿನ್ನಾಭಿಪ್ರಾಯಗಳಿದ್ದವು. ನ್ಯಾನೊ ಯೋಜನೆಯಿಂದಾಗಿ ಸಂಸ್ಥೆಗೆ  ಸಾಕಷ್ಟು ನಷ್ಟವಾಗಿದೆ. ಹೀಗಾಗಿ ನ್ಯಾನೊ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿದ್ದೆ. ಆದರೆ ಇದಕ್ಕೆ ರತನ್ ಟಾಟಾ ಅವರು ವಿರೋಧಿಸಿದ್ದರು ಎಂದು ನುಸ್ಲಿ ವಾಡಿಯಾ ಹೇಳಿದ್ದಾರೆ.

ಇದೇ ಡಿಸೆಂಬರ್ 22ರಂದು ಟಾಟಾ ಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಭೆಗೂ ಮುನ್ನವೇ ನುಸ್ಲಿ ವಾಡಿಯಾ ತಮ್ಮ ಸಂಸ್ಥೆಯ ಸುಮಾರು 64,884 ಷೇರುದಾರರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಸಂಸ್ಥೆಯಲ್ಲಿನ  ಭಿನ್ನಾಭಿಪ್ರಾಯಗಳನ್ನು ನುಸ್ಲಿ ವಾಡಿಯಾ ತೆರೆದಿಟ್ಟಿದ್ದು, ನ್ಯಾನೊ ಯೋಜನೆಯಿಂದಾಗಿ ಸಂಸ್ಥೆಗೆ ನೂರಾರು ಕೋಟಿ ರು. ಹಣ ನಷ್ಟವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನ್ಯಾನೊ ಯೋಜನೆ ಸ್ಥಗಿತಕ್ಕೆ ತಾವೇಕೆ ಒಲುವು  ತೋರಿಸುತ್ತಿದ್ದೇನೆ ಎಂದು ವಿವರಿಸಿರುವ ನುಸ್ಲಿ ವಾಡಿಯಾ ಅವರು, 2008ರಲ್ಲಿ ಟಾಟಾ ಸಂಸ್ಥೆ ತನ್ನ ಪ್ರತಿಷ್ಟಿತ 1 ಲಕ್ಷಕ್ಕೆ ಕಾರು ನೀಡುವ ಯೋಜನೆ ಆರಂಭಿಸಿತ್ತು. ಆದರೆ ಬಳಿಕ ಅದೇ ದರವನ್ನು ನಿರ್ವಹಣೆ ಮಾಡಲಾಗದೆ ಕ್ರಮೇಣ ಕಾರಿನ ಬೆಲೆಯನ್ನು ಏರಿಕೆ ಮಾಡಲಾಯಿತು. ಈಗ ನ್ಯಾನೊ ಕಾರು 2.25 ಮಾರಾಟ ಮಾಡಲಾಗುತ್ತಿದೆ. ಯೋಜನೆ ಆರಂಭವಾದಾಗಿನಿಂದ ಈಗಿನ ವರೆಗೂ ಕಾರಿನ ಮಾರಾಟದಲ್ಲಿ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ.  ಬದಲಿಗೆ ಘಟಕ ನಿರ್ವಹಣೆ ವೆಚ್ಚ ದುಬಾರಿಯಾಗಿದ್ದು, ಯೋಜನೆಯಿಂದಾಗಿ ಸಂಸ್ಥೆಗೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಹೀಗಾಗಿ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿದ್ದೆ ಎಂದು ನುಸ್ಲಿ ವಾಡಿಯಾ ಹೇಳಿದ್ದಾರೆ.

ನ್ಯಾನೊ ಯೋಜನೆ ಮುಂದುವರೆಕೆಯಿಂದಾಗಿ ಭವಿಷ್ಯದಲ್ಲಿ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಯೋಜನೆಯನ್ನು ವಿರೋಧಿಸಿದ್ದೆ. ಆದರೆ ಯೋಜನೆಯನ್ನು ರತನ್ ಟಾಟಾ ಮತ್ತು ಅವರ ಕುಟುಂಬ ಭಾವನಾತ್ಮಕವಾಗಿ ಪರಿಗಣಿಸಿತ್ತು. ಹೀಗಾಗಿ ತಮ್ಮ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿದ್ದ ರತನ್ ಟಾಟಾ ಬೆಂಬಲಿತ ಸದಸ್ಯರು ಕೂಡ ವಿರೋಧಿಸಿದ್ದರು ಎಂದು ಹೇಳಿದ್ದಾರೆ.

ಅಂತೆಯೇ ಸಂಸ್ಥೆಯಿಂದ ತಮ್ಮನ್ನು ವಜಾ ಮಾಡಲು ನನ್ನ ಅಸಮರ್ಥತೆ ಕಾರಣವಲ್ಲ. ಅಥವಾ ನನ್ನ ಕೆಲಸದಲ್ಲಿನ ಲೋಪದೋಷಗಳು ಕಾರಣವಲ್ಲ. ಬದಲಿಗೆ ನನ್ನ ಮತ್ತು ರತನ್ ಟಾಟಾ ನಡುವಿನ ಭಿನ್ನಾಭಿಪ್ರಾಯವೇ ಕಾರಣ  ಎಂದೂ ನುಸ್ಲಿ ವಾಡಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com