ಹೆಚ್ಚು ಸಾಲ ಬಾಕಿ ಉಳಿಸಿಕೊಂಡವರ ಪಟ್ಟಿ ನೀಡಿ: ಆರ್ ಬಿಐಗೆ "ಸುಪ್ರೀಂ" ಸೂಚನೆ

500 ಕೋಟಿ ರುಪಾಯಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವವರ ವಿವರ ನೀಡುವಂತೆ ಮಂಗಳವಾರ ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚಿಸಿದೆ...
ಸುಪ್ರೀಂ ಕೋರ್ಟ್ ಮತ್ತು ಆರ್ ಬಿಐ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ ಮತ್ತು ಆರ್ ಬಿಐ (ಸಂಗ್ರಹ ಚಿತ್ರ)

ನವದೆಹಲಿ: 500 ಕೋಟಿ ರುಪಾಯಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವವರ ವಿವರ ನೀಡುವಂತೆ ಮಂಗಳವಾರ ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚಿಸಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ತಾವು ನೀಡಿರುವ ಸಾಲ ಮರುಪಾವತಿಯಾಗದೇ ಸಾಲದ ಹೊರೆಯಿಂದ ಬಳಲುತ್ತಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಆತಂಕ ಸೃಷ್ಟಿಯಾಗಿರುವ ಮಧ್ಯೆಯೇ   ಅತಿ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವವರು ಯಾರು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಅಂತೆಯೇ ಸಾಲ ಮರುಪಾವತಿ ಮಾಡದವರ ಪಟ್ಟಿ ಸಲ್ಲಿಸಲು ಆರ್ ಬಿಐಗೆ 6 ವಾರಗಳ  ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ.

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ನೇತೃತ್ವದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಸಂಸ್ಥೆ 2005ರಲ್ಲಿ ಈ ಸಂಬಂಧ ಕೋರ್ಟ್ ನಲ್ಲಿ ದೂರು ದಾಖಲಿಸಿತ್ತು. ಸರ್ಕಾರಿ  ಸ್ವಾಮ್ಯದ ಹುಡ್ಕೊ ಸಂಸ್ಥೆಯು ಹಲವು ಕಂಪನಿಗಳಿಗೆ ಸಾಲ ನೀಡಿದ್ದು, ಇದು ಈ ವರೆಗೂ ಮರುಪಾವತಿಯಾಗಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಈ ಕಂಪನಿಗಳಿಗೆ ಯಾಕೆ ನೀಡಲಾಗುತ್ತಿದೆ  ಎಂದು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದರು. ಇದೀಗ ಈ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾ. ಆರ್.ಭಾನುಮತಿ ಮತ್ತು  ನ್ಯಾ. ಯು.ಯು.ಲಲಿತ್ ನೇತೃತ್ವದ ತ್ರಿ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಇನ್ನು ಸಂಸ್ಥೆಯ ಪರವಾಗಿ ವಾದಿಸಿದ ಪ್ರಶಾಂತ್ ಭೂಷಣ್, 2015ರಲ್ಲಿ ಕಾರ್ಪೋರೇಟ್ ಕಂಪನಿಗಳ 40 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಮರುಪಾವತಿಯಾಗದ ಸಾಲದಿಂದಾಗಿ ನಷ್ಟದಲ್ಲಿರುವುದನ್ನು ಬಹಿರಂಗಗೊಳಿಸಿದ್ದವು. 2017  ರೊಳಗೆ ತಮ್ಮಲ್ಲಿರುವ ಎಲ್ಲ ಮರುಪಾವತಿಯಾಗದ ಸಾಲಗಳನ್ನೂ ಗುರುತಿಸಿ ಪ್ರಕಟಿಸಬೇಕೆಂದು ಆರ್‌ಬಿಐ ಸೂಚಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ನಿರ್ಧಾರ ಕೈಗೊಂಡಿದ್ದವು.  ಸದ್ಯ ಸುಪ್ರೀಂಕೋರ್ಟ್‌ನ ಆದೇಶ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, 6 ವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆರ್ ಬಿಐಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com