
ವಾಷಿಂಗ್ಟನ್: ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿಯಾಗಿ ಮುಂದಿನ ಐದು ವರ್ಷಗಳವರೆಗೆ ಕ್ರಿಸ್ಟಿನ್ ಲಗಾರ್ಡೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.ಜೂನ್ 5ರಿಂದ ಅವರ ಅಧಿಕಾರಾವಧಿ ಪ್ರಾರಂಭವಾಗಲಿದೆ. ಐಎಂಎಫ್ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೆಸರು ಘೋಷಣೆ ಬಳಿಕ ಮಾತನಾಡಿದ ಲಗಾರ್ಡೆ, ಎರಡನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿರುವುದು ಅತೀವ ಸಂತಸ ತಂದಿದೆ. ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿಯ ಮತ್ತು 188 ಸದಸ್ಯ ರಾಷ್ಟ್ರಗಳ ನಿರಂತರ ನಂಬಿಕೆ ಮತ್ತು ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
ಲಗಾರ್ಡೆಯವರ ಮೊದಲ ಐದು ವರ್ಷಗಳ ಆಡಳಿತ ವೈಖರಿಯನ್ನು ಐಎಂಎಫ್ ಶ್ಲಾಘಿಸಿದೆ. ''ಲಗಾರ್ಡೆಯವರು ಐಎಂಎಫ್ ನ ಸದಸ್ಯ ರಾಷ್ಟ್ರಗಳಿಗೆ ಆರ್ಥಿಕ ಮತ್ತು ಇತರ ಸಹಕಾರಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ನಿಧಿಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸುವಲ್ಲಿ ಲಗಾರ್ಡೆಯವರ ಪಾತ್ರ ಮಹತ್ವದ್ದು ಎಂದು ಐಎಂಎಫ್ ಮಂಡಳಿಯ ಡೀನ್ ಅಲೆಕ್ಸಿ ಮೊಜ್ಹಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಗರಣದ ಮಧ್ಯೆ ರಾಜೀನಾಮೆ ನೀಡಿದ್ದ ಡೊಮಿನಿಕ್ ಸ್ಟ್ರಾಸ್ಸ್ ಕಾಹ್ನ್ ಅವರ ರಾಜೀನಾಮೆ ಬಳಿಕ ಫ್ರಾನ್ಸ್ ನ ಮಾಜಿ ಹಣಕಾಸು ಸಚಿವರಾಗಿರುವ ಲಗಾರ್ಡೆ ಐಎಂಎಫ್ ಮುಖ್ಯಸ್ಥರಾಗಿ 2011ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮೊದಲ ಮಹಿಳೆ ಲಗಾರ್ಡೆಯವರಾಗಿದ್ದಾರೆ.
Advertisement