
ನವದೆಹಲಿ: ಬ್ರೆಕ್ಸಿಟ್ ಮತ್ತು ಚೀನಾ ಷೇರುಮಾರುಕಟ್ಟೆ ಪತನದ ನಂತರವೂ ಭಾರತದ ಆರ್ಥಿಕತೆ ಬಲಿಷ್ಟವಾಗಿದೆ ಎಂದು ಆರ್ಥಿಕ ತಜ್ಞ ಜನಮತ ವರದಿಯೊಂದು ತಿಳಿಸಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ನಡೆಸಿದ ಆರ್ಥಿಕ ಜನಮತ ಸಂಗ್ರಹದಲ್ಲಿ ವಿಶ್ವದ ಖ್ಯಾತ ಆರ್ಥಿಕ ತಜ್ಞರು ಪಾಲ್ಗೊಂಡು ತಮ್ಮ-ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಪೈಕಿ ವಿಶ್ವದ ಇತರೆ ದೇಶಗಳ ಆರ್ಥಿಕತೆ ಹೋಲಿಸಿದರೆ ಭಾರತದ ಆರ್ಥಿಕತೆ ಬಲಿಷ್ಟ ಮತ್ತು ಸಮಗ್ರವಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ ವಿಶ್ವ 30ಕ್ಕೂ ಅಧಿಕ ಆರ್ಥಿಕ ತಜ್ಞರು ಪಾಲ್ಗೊಂಡಿದ್ದು, ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕ ದೇಶ ಭಾರತದ ಆರ್ಥಿಕತೆಯಲ್ಲಿ ಶೇ.7.8ರಷ್ಟು ಏರಿಕೆಯಾಗಿದೆ ಎಂಬ ಅಂಶವನ್ನು ಹೊರಹಾಕಿದ್ದಾರೆ.
2017 ವಿತ್ತೀಯ ವರ್ಷದ ಅಂತ್ಯಕ್ಕೆ ಭಾರತದ ಆರ್ಥಿಕತೆ ದೊಡ್ಡ ಮತ್ತು ವೇಗದ ಆರ್ಥಿಕತೆ ಎಂಬ ಖ್ಯಾತಿಗೆ ಒಳಗಾಗಲಿದೆ ಎಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ನಡೆದ ಬ್ರೆಕ್ಸಿಟ್ ಜನಾಭಿಪ್ರಾಯ ಮತ್ತು ಚೀನಾ ಷೇರುಮಾರುಕಟ್ಟೆ ಪತನಾನಂತರವೂ ಭಾರತದ ಆರ್ಥಿಕತೆ ಸ್ಥಿರವಾಗಿದ್ದು, ಈ ದೇಶಗಳ ಆರ್ಥಿಕ ಪರಿಣಾಮ ಭಾರತದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ ಎಂಬ ಅಭಿಪ್ರಾಯವೂ ಕೂಡ ಸಮೀಕ್ಷೆಯಲ್ಲಿ ಹೊರಬಿದ್ದಿದೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ತನ್ನ ವರದಿಯಲ್ಲಿ ಭಾರತದ ಆರ್ಥಿಕತೆ 7.4ರಷ್ಟು ಅಭಿವೃದ್ಧಿಯಾಗಿದೆ ಎಂದು ವರದಿ ನೀಡಿತ್ತು. ಇನ್ನು ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ಪಡೆಯಲು ಯತ್ನಿಸುತ್ತಿರುವ ಜಿಎಸ್ ಟಿ ಮಸೂದೆ ಕುರಿತಾಗಿ ಆಶಾಭಾವ ವ್ಯಕ್ತವಾಗುತ್ತಿದ್ದು, ಇದೇ ವರ್ಷಾಂತ್ಯದೊಳದೆ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಜಿಎಸ್ ಟಿ ಮಸೂದೆ ಜಾರಿಯಾಗಿದ್ದೇ ಆದರೆ ಭಾರತದ ಆರ್ಥಿಕತೆ ಅಭಿವೃದ್ಧಿ ವೇಗಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಭಾರತದ ಹಣದುಬ್ಬರದಲ್ಲಿ ಕೂಡ ಸ್ಥಿರತೆ ಕಾಣುತ್ತಿದ್ದು, ಕಳೆದ ವರ್ಷದಲ್ಲಿ ಅತ್ಯಂತ ಕಡಿಮೆ ಅಂದರೆ 3.69ರಷ್ಟಿದ್ದ ಹಣದುಬ್ಬರ ಪ್ರಮಾಣ ಪ್ರಸಕ್ತ ಸಾಲಿನಲ್ಲಿ 5.77ಕ್ಕೇರಿದೆ ಎಂದು ಏಪ್ರಿಲ್ ನಡೆದಿದ್ದ ಸಮೀಕ್ಷೆಯಿಂದ ತಿಳಿದುಬಂದಿತ್ತು. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ 2017ರ ಮಾರ್ಚ್ ಗೆ ಶೇ.5ರಷ್ಟು ಹಣದುಬ್ಬರ ಪ್ರಮಾಣ ಹೊಂದುವ ಗುರಿ ಹೊಂದಿದ್ದು, ದರ ಕಡಿತದತ್ತ ಚಿಂತಿಸುವ ಸಾಧ್ಯತೆಗಳ ಕೂಡ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ದರ ಕಡಿತ ವೇನಿದ್ದರೂ ಆಗಸ್ಟ್ ತಿಂಗಳ ಬಳಿಕವೇ ಸಾಧ್ಯ ಎಂಬ ಮತ್ತೊಂದು ವಾದ ಕೂಡ ಸಮೀಕ್ಷೆಯಲ್ಲಿ ಕೇಳಿ ಬಂದಿದೆ.
ಇನ್ನು ಪ್ರಸಕ್ತ ಸಾಲಿನಲ್ಲಿ ಮುಂಗಾರು ಉತ್ತಮವಾಗಿರಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಗಳು ಮುಂದಿನ ದಿನಗಳಲ್ಲಿ ಆಹಾರ ವಲಯದ ಹಣದುಬ್ಬರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಕೃಷಿ ವಲಯ ಹಾಗೂ ಕೃಷಿ ಉತ್ಪನ್ನಾಧಾರಿತ ಕೈಗಾರಿಕಾ ವಲಯಗಳ ಮೇಲೆ ಇದು ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಆರ್ಥಿಕತೆ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆಯಾದರೂ, ಖಾಸಗಿ ಬಂಡವಾಳ ಹೂಡಿಕೆ ವಲಯದಲ್ಲಿ ಮಾತ್ರ ಇನ್ನೂ ಚಿಂತಾಜನಕ ಸ್ಥಿತಿ ಇದ್ದು, ಈ ವಿಭಾಗದಲ್ಲಿ ಭಾರತ ಚೇತರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement