ಮುಂಬೈ: ಟೀಕಾಕಾರರಿಗೆ ಮಂಗಳವಾರ ತಿರುಗೇಟು ನೀಡಿರುವ ಆರ್ ಬಿಐ ಗವರ್ನರ್ ರುಘುರಾಮ್ ರಾಜನ್ ಅವರು, ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆ ಕಾಪಾಡಲು ಪ್ರಚೋದಿತ ಟೀಕೆಗಳ ಹಿಂದಿರುವ ಉದ್ದೇಶವನ್ನು ಗಮನಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದ ಅಭಿವೃದ್ಧಿ ದರಕ್ಕೆ ಆರ್ ಬಿಐ ಅಡ್ಡಿಯಾಗುತ್ತಿದೆ ಎಂಬ ಟೀಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನಿರ್ಗಮಿತ ಆರ್ ಬಿಐ ಮುಖ್ಯಸ್ಥ, ಅದೃಷ್ಟವಶಾತ್ ಹಣದುಬ್ಬರ ಬಹಳಷ್ಟು ಕಡಿಮೆಯಾಗಿದೆ. ಆದರೆ ಇದಕ್ಕೆ ಆರ್ ಬಿಐ ನೀತಿ ಕಾರಣವಲ್ಲ. ತೈಲ ಬೆಲೆ ಇಳಿಕೆ ಕಾರಣ ಎಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಒಂದು ಗಮನಾರ್ಹ ಅಂಶವಾದರೂ ಸರ್ಕಾರ ಅದರ ಲಾಭವನ್ನು ಸ್ಥಳೀಯವಾಗಿ ವರ್ಗಾಯಿಸದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ ಎಂದು ರಘುರಾಮ್ ರಾಜನ್ ಅವರು ಹೇಳಿದ್ದಾರೆ.
ಎರಡನೇ ಅವಧಿಗೆ ಆರ್ ಬಿಐ ಗವರ್ನರ್ ಆಗಿ ಮುಂದುವರೆಯಲು ನಿರಾಕರಿಸಿರುವ ರಾಜನ್ ಅವರು ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳನ್ನು ಸಹ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಹಣದುಬ್ಬರವನ್ನು ಗಮದಲ್ಲಿಟ್ಟುಕೊಂಡು ಬಡ್ಡಿದರ ಕಡಿಮೆ ಮಾಡದ ರಘುರಾಮ್ ರಾಜನ್ ಮಾನಸಿಕರಾಗಿ ಭಾರತೀಯರಾಗಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆರೋಪ ಮಾಡಿದ್ದರು. ಅಲ್ಲದೆ ರಘುರಾಮ್ ರಾಜನ್ ಕಾಂಗ್ರೆಸ್ ನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದರು.