
ನವದೆಹಲಿ: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಇಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಡ್ಡಿದರವನ್ನು ಕಡಿತಗೊಳಿಸಿರುವುದರ ಹೊರತಾಗಿಯೂ ಅವುಗಳ ಬಡ್ಡಿದರ ಈಗಲೂ ಅಧಿಕವಾಗಿದೆ ಮತ್ತು ವಾಸ್ತವವಾಗಿ ಜಗತ್ತಿನಲ್ಲಿಯೇ ಅತಿ ಹೆಚ್ಚಿನದಾಗಿದೆ ಎಂದರು.
ಹಲವು ವರ್ಷಗಳಿಂದ ಹಳೆ ಸೂತ್ರವೇ ಇನ್ನೂ ನಡೆದುಕೊಂಡು ಹೋಗುತ್ತಿದೆ. ಅದರಂತೆ ಜನಸಾಮಾನ್ಯರ ಸಣ್ಣ ಉಳಿತಾಯಗಳ ಮೇಲೆ ಮಾರುಕಟ್ಟೆ ನಿಗದಿಪಡಿಸಿದಂತೆ ಬಡ್ಡಿದರಗಳ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಸರ್ಕಾರದ ಯೋಜನೆಗಳಿಗೆ ಮಾರುಕಟ್ಟೆ ದರದಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ. ಇದು ಮಾರುಕಟ್ಟೆಗೆ ಪೂರಕವಾದ ಬಡ್ಡಿ ದರವಾಗಿದ್ದು, ಬಜೆಟ್ ನಿಂದ ನೀಡಲಾಗುತ್ತದೆ.
ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಸಾಲದ ದರ ಇಳಿಸಲು ಮತ್ತು ಠೇವಣಿದರ ಹೆಚ್ಚಾಗಲು ಬಿಡುವುದಿಲ್ಲ. ಈ ಮಧ್ಯೆ ಬಡ್ಡಿದರ ಹೆಚ್ಚಾದ್ದರಿಂದ ಸರ್ಕಾರದ ಸಾಲವೂ ಜಾಸ್ತಿಯಾಗತೊಡಗಿತು. ಈಗ ಬಡ್ಡಿದರ ಇಳಿಕೆಯಾಗಿದೆ. ಹಾಗಾಗಿ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ.ಇದರಿಂದ ಸರ್ಕಾರದ ಭದ್ರತೆಗಳಲ್ಲಿ ಕೂಡ ಬಡ್ಡಿ ಕಳೆದ ಕೆಲ ತಿಂಗಳಲ್ಲಿ ಕಡಿಮೆಯಾಗಿದೆ. ಒಂದೇ ವ್ಯತ್ಯಾಸವೆಂದರೆ, ಈ ಹಿಂದೆ ಬಡ್ಡಿದರವನ್ನು ವಾರ್ಷಿಕವಾಗಿ ನಿಗದಿಪಡಿಸಲಾಗುತ್ತಿತ್ತು, ಆದರೆ ಇಂದು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಮೂರು ತಿಂಗಳಿಗೊಮ್ಮೆ ಬಡ್ಡಿದರ ನಿರ್ಧರಿಸಲಾಗುತ್ತದೆ ಎಂದು ಹಣಕಾಸು ಸಚಿವರು ವಿವರಿಸಿದರು.
Advertisement