ನೋಟು ನಿಷೇಧ ಎಫೆಕ್ಟ್; ಅಗ್ಗದ ಗೃಹ ಸಾಲ ಇನ್ನು ಧಾರಾಳ!

ಹೊಸ ಮನೆ ಕಟ್ಟುವ ಆಲೋಚನೆಯಲ್ಲಿರುವವರಿಗೆ ಇಲ್ಲೊಂದು ಸಿಹಿ ಸುದ್ದಿಇದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಕುರಿತು ಚಿಂತನೆಯಲ್ಲಿ ತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹೊಸ ಮನೆ ಕಟ್ಟುವ ಆಲೋಚನೆಯಲ್ಲಿರುವವರಿಗೆ ಇಲ್ಲೊಂದು ಸಿಹಿ ಸುದ್ದಿಇದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಕುರಿತು ಚಿಂತನೆಯಲ್ಲಿ ತೊಡಗಿದೆ.

ಮೂಲಗಳ ಪ್ರಕಾರ ನೋಟು ನಿಷೇಧದ ಬಳಿಕ ಭಾರತೀಯ ಬ್ಯಾಂಕ್ ಗಳಿಗೆ ಅಪಾರ ಪ್ರಮಾಣದಲ್ಲಿ ಠೇವಣಿ ಹರಿದು ಬರುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಗೃಹಸಾಲದ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಲು  ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಳಧನಿಕರು ಸಲ್ಲಿಕೆ ಮಾಡುವ ಅಪಾರ ಪ್ರಮಾಣದ ತೆರಿಗೆಯ ಲಾಭಾಂಶವನ್ನು ಜನರಿಗೆ ನೀಡುವ ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಸೂಕ್ತ ಫಲಾನುಭವಿಗಳಿಗೆ ಹೆಚ್ಚು ಸಾಲ  ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಕಪ್ಪುಹಣ ಘೋಷಣೆಯಿಂದ ಹರಿದುಬಂದಿರುವ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸರ್ವರಿಗೂ ಸೂರು ಎಂಬ ಯೋಜನೆಯನ್ನು ಜಾರಿಗೆ ತಂದು ಅದರ ಮೂಲಕ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡಲು ನಿರ್ಧರಿಸಿದೆ. ಇದಕ್ಕಾಗಿ  2017ರ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ಹೊಸ ಯೋಜನೆ ರೂಪಿಸಲು ನಿರ್ಧರಿಸಿದೆ. ಈ ಉದ್ದೇಶಿತ ಯೋಜನೆ ಅನ್ವಯ ಸ್ವಂತ ಮನೆಗಳಿಲ್ಲದವರು ಯೋಜನೆಯಡಿಯಲ್ಲಿ ಬ್ಯಾಂಕ್ ಗಳಿಂದ ಸಾಲ  ಪಡೆದು ಮನೆ ನಿರ್ಮಿಸಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ಚರ್ಚೆ
ಇನ್ನು ಈ ವಿಶಿಷ್ಠ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಈಗಾಗಲೇ ವಿತ್ತ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸುತ್ತಿದ್ದು. ಸಾಲದ ನಿಯಮಾವಳಿಗಳು, ಬಡ್ಡಿದರ ನಿಗದಿ ಕುರಿತಂತೆ  ಅಧಿಕಾರಿಗಳೊಂದಿಗೆ ಆರ್ ಬಿಐನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಯಾರಿಗೆ ಅನ್ವಯ?
ಪ್ರಸ್ತುತ ದೊರೆತಿರುವ ಮಾಹಿತಿಗಳ ಪ್ರಕಾರ ಈಗಾಗಲೇ ಗೃಹಸಾಲ ಪಡೆದಿರುವವರನ್ನು ಬಿಟ್ಟು, ಮೊದಲ ಬಾರಿಗೆ ಮನೆ ನಿರ್ಮಾಣ ಮಾಡುತ್ತಿರುವವರಿಗಷ್ಟೇ ಸಾಲ ನೀಡಲಾಗುತ್ತದೆಯಂತೆ. ಅಂತೆಯೇ ಈ ಯೋಜನೆಯ  ಫಲಾನುಭವಿಗಳು 50 ಲಕ್ಷ ರು.ಗಿಂತ ಕಡಿಮೆ ಮೊತ್ತದ ಮನೆಯನ್ನು ಮಾತ್ರ ಖರೀದಿಸಬಹುದಾಗಿದೆ. ಈ ಮಹತ್ವದ ಯೋಜನೆ ಇನ್ನೂ ಸಿದ್ಧತೆ ಹಂತದಲ್ಲಿದ್ದು, ಅಂತಿಮವಾಗಿ ನಿಯಮಾವಳಿಗಳು ಬದಲಾಗುವ ಸಾಧ್ಯತೆ ಕೂಡ ಇದೆ  ಎಂದು ಹೇಳಲಾಗುತ್ತಿದೆ.

ಎಷ್ಟು ಕಡಿಮೆಯಾಗಬಹುದು ಇಎಂಐ?
ಒಂದು ಉದಾಹರಣೆಯ ಪ್ರಕಾರ ಹೇಳುವುದಾದರೆ ಪ್ರಸ್ತುತ ಇರುವ ಶೇ.9.5ರಷ್ಟು ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ ನೀವು 25 ಲಕ್ಷ ರು.ಗೃಹಸಾಲ ಪಡೆದಿದ್ದರೆ ನೀವು ಪ್ರತೀ ತಿಂಗಳು 23, 303 ರು. ಹಣ ಪಾವತಿ  ಮಾಡಬೇಕಿರುತ್ತದೆ. ಆದರೆ ನೀವು ಇದೇ ಮೊತ್ತವನ್ನು ನೂತನ ಗೃಹಸಾಲ ಯೋಜನೆಯಡಿಯಲ್ಲಿ ಅಂದರೆ ಶೇ.6ರಷ್ಟು ಬಡ್ಡಿದರದಲ್ಲಿ ಪಡೆದರೆ ಮಾಸಿಕ ನೀವು ಕೇವಲ 17, 911ರು. ಹಣವನ್ನು ಮಾತ್ರ ಪಾವತಿ ಮಾಡಬೇಕಿರುತ್ತದೆ.  ಅಂದರೆ ಪ್ರತೀ ತಿಂಗಳಿಗೆ 5392ರು. ನಂತೆ 20 ವರ್ಷಗಳಲ್ಲಿ 12.94 ಲಕ್ಷ ರು. ಹಣ ಉಳಿತಾಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com