ಗ್ರಾಹಕರೇ ಎಚ್ಚರ...32 ಲಕ್ಷಕ್ಕೂ ಅಧಿಕ ಕಾರ್ಡ್ ಗಳ ಪಿನ್ ನಂಬರ್ ಕಳವು!

ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಕದಿಯಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹೆಲಿ: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡುವ ಕುರಿತ ಸುದ್ದಿಯ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಸುದ್ದಿ  ಹೊರಬಿದ್ದಿದ್ದು, ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಕದಿಯಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆ ಭಾರತೀಯ ಬ್ಯಾಂಕ್ ಗಳಿಗೆ ಎಚ್ಚರಿಕೆ ನೀಡಿದೆ. "ದೇಶದ ಬ್ಯಾಕಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ಮಾಹಿತಿ  ಕಳವಾಗಿದ್ದು, ದೇಶದ ಸುಮಾರು 32 ಲಕ್ಷಕ್ಕೂ ಅಧಿಕ ಬ್ಯಾಂಕ್ ಗ್ರಾಹಕರ ಕಾರ್ಡ್ ಗಳ ಪಿನ್ ನಂಬರ್ ಕಳವು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಅಲ್ಲದೆ ತನಗೆ ಬಂದ ದೂರಿನನ್ವಯ ಈ  ವರೆಗೂ ಸುಮಾರು 1.3 ಕೋಟಿ ಹಣವನ್ನು ಕಳವು ಮಾಡಲಾಗಿದೆ ಎಂದು ಎನ್ ಪಿಸಿಐ ಹೇಳಿದೆ.

ಆದರೆ ಕಾರ್ಡ್ ಪಿನ್ ಕಳವು ಪ್ರಕರಣದ ಬಗ್ಗೆ ಯಾವುದೇ ಬ್ಯಾಂಕ್​ಗಳು ಸ್ಪಷ್ಟವಾದ ಮಾಹಿತಿ ನೀಡಿಲ್ಲವಾದ್ದರಿಂದ ಹ್ಯಾಕರ್​ಗಳು ಕೆಲ ಎಟಿಎಂಗಳ ಮಾಹಿತಿ ಮಾತ್ರ ಪಡೆದುಕೊಂಡಿದ್ದಾರೆಯೇ  ಅಥವಾ ಮಾಲ್​ವೇರ್ ಬಳಸಿ ಇಡೀ ಎಟಿಎಂ ಮಷಿನ್​ನಲ್ಲಿರುವ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಆದರೆ ಎನ್ ಪಿಸಿಐ ನೀಡಿರುವ ಮಾಹಿತಿಯನ್ವಯ ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಾದ ಐಸಿಐಸಿಐ, ಎಚ್​ಡಿಎಫ್​ಸಿ, ಎಸ್​ಬಿಐ, ಎಕ್ಸಿಸ್ ಮತ್ತು ಯೆಸ್ ಬ್ಯಾಂಕ್ ಗಳ ಮಾಹಿತಿಗಳನ್ನು  ಕದಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ 26 ಲಕ್ಷ ವೀಸಾ ಹಾಗೂ ಮಾಸ್ಟರ್ ಕಾರ್ಡ್, 6 ಲಕ್ಷ ರುಪೇ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದ್ದು, ಈ ಬೆಳವಣಿಗೆ  ಬೆನ್ನಲ್ಲೇ ಎಸ್​ಬಿಐ ಮುಂಜಾಗ್ರತಾ ಕ್ರಮವಾಗಿ 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಹಿಂಪಡೆದುಕೊಂಡು ಹೊಸ ಕಾರ್ಡ್​ಗಳನ್ನು ನೀಡುತ್ತಿದೆ.

ಮಾಹಿತಿ ಕಳವು ಹಿಂದೆ ಚೀನೀ, ನೈಜಿರಿಯನ್ ಮೂಲದ ಹ್ಯಾಕರ್ಸ್ ಕೈವಾಡ
ಮತ್ತೊಂದು ಆಘಾತಕಾರಿ ಅಂಶವೆಂದರೆ ಭಾರತೀಯ ಡೆಬಿಟ್ ಕಾರ್ಡ್ ಗಳು ಅಮೆರಿಕ ಮತ್ತು ಚೀನಾದೇಶಗಳಲ್ಲಿ ಬಳಕೆಯಾಗಿರುವ ಕುರಿತು ಮಾಹಿತಿ ಬಂದಿದೆ ಎಂದು ಎನ್ ಪಿಸಿಐ ಹೇಳಿದ್ದು, ಪ್ರಮುಖವಾಗಿ ಈ ಬ್ಯಾಂಕಿಂಗ್ ಕ್ಷೇತ್ರದ ದತ್ತಾಂಶ ಸೋರಿಕೆ ಹಿಂದೆ ಚೀನಾ ಮೂಲದ ಹ್ಯಾಕರ್ಸ್ ಗಳ ಕೈವಾಡದ ಕುರಿತು ಶಂಕೆ ವ್ಯಕ್ತಪಡಿಸಿದೆ. ಕುಳಿತಲ್ಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುವ  ವಿದೇಶಿಯರ ಪೈಕಿ ನೈಜೀರಿಯನ್ನರು ಎತ್ತಿದ ಕೈ. ತಮ್ಮ ತಮ್ಮ ಮನೆಯಲ್ಲೇ ಕುಳಿತು ವಂಚನೆಯ ಮಾರ್ಗ ಹಿಡಿಯುತ್ತಿರುವ ನೈಜೀರಿಯನ್ನರು, ಪಿನ್ ನಂಬರ್ ಬಳಕೆ ಮಾಡಿ ಹಣ  ಲಪಟಾಯಿಸುತ್ತಿದ್ದಾರೆ. ಹೀಗಾಗಿ ಎಟಿಎಂ ಪಿನ್ ಕಳವಿನ ಹಿಂದೆ ನೈಜೀರಿಯನ್ನರ ಕೈವಾಡ ಇರುವ ಕುರಿತು ಶಂಕೆ ಮೂಡುತ್ತಿದೆ. ಹೀಗಾಗಿ ಎಟಿಎಂ ಕಾರ್ಡ್ ಗಳ ಪಿನ್ ಸಂಖ್ಯೆಗಳಷ್ಟೇ  ಕಳವಾಗಿದೆಯೇ ಅಥವಾ ಬ್ಯಾಂಕುಗಳಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳು ಕೂಡ ಹ್ಯಾಕರ್​ಗಳ ಕೈ ಸೇರಿವೆಯೇ ಎಂಬ ಅಂಶದ ಕುರಿತು ತನಿಖೆ ನಡೆಸಲಾಗುತ್ತಿದೆ.

ಮಾಹಿತಿ ಕೇಳಿದ ಕೇಂದ್ರ ವಿತ್ತ ಸಚಿವಾಲಯ

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿತ್ತ ಸಚಿವಾಲಯ, ಮಾಹಿತಿ ಕಳವಾಗಿರುವ ಬ್ಯಾಂಕ್ ಗಳಿಂದ ಮಾಹಿತಿ ಕೇಳಿದೆ ಎಂದು ತಿಳಿಬಂದಿದೆ. ಮಾಹಿತಿ  ಸೋರಿಕೆಯಾಗಿರುವ ಕಾರ್ಡ್ ಗಳ ಸಂಪೂರ್ಣ ಮಾಹಿತಿ ನೀಡುವಂತೆ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಪ್ರಮುಖವಾಗಿ ಹಿಟಾಚಿ ಸಂಸ್ಥೆಗೆ ಸೇರಿದ ಎಟಿಎಂ ಮಿಷನ್ ಗಳಿಂದಲೇ  ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪದ ಮೇರೆಗೆ ಹಿಟಾಚಿ ಸಂಸ್ಥೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com