ಇ-ಕೆವೈಸಿ ಮೂಲಕ ಕೇವಲ 15 ನಿಮಿಷದಲ್ಲಿ ರಿಲಯನ್ಸ್ ಜಿಯೋ ಸಿಮ್ ಆಕ್ಟಿವೇಷನ್!

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸಿಮ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಸುಲಭವಾಗಿ ಚಾಲ್ತಿಗೊಳಿಸಬಹುದು ಎಂದು ಸಂಸ್ಥೆ ಹೇಳಿದೆ.
ರಿಲಯನ್ಸ್ ಜಿಯೋ ಹಾಗೂ ಇ-ಕೆವೈಸಿ (ಸಂಗ್ರಹ ಚಿತ್ರ)
ರಿಲಯನ್ಸ್ ಜಿಯೋ ಹಾಗೂ ಇ-ಕೆವೈಸಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸಿಮ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ  ಸುಲಭವಾಗಿ ಚಾಲ್ತಿಗೊಳಿಸಬಹುದು ಎಂದು ಸಂಸ್ಥೆ ಹೇಳಿದೆ.

ಇಷ್ಟು ದಿನ ಹೊಸ ಸಿಮ್ ಕಾರ್ಡ್ ಪಡೆದರೆ ಅದರ ಚಾಸ್ತಿ ಪ್ರಕ್ರಿಯೆಗಾಗಿ 2-3 ದಿನಗಳ ಕಾಲ ಕಾಯಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನೂತನ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಮೂಲಕ  ಸಿಮ್ ಕಾರ್ಡ್ ಗಳನ್ನು ಕೆಲವೇ ನಿಮಿಷಗಳಲ್ಲಿ ಆ್ಯಕ್ಟಿವೇಟ್ ಮಾಡಬಹುದಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಕಾಗದ ರೂಪದಲ್ಲಿರುವ ದಾಖಲೆಗಳ ಪರಿಶೀಲನೆಯ ಬದಲಿಗೆ ಆಧಾರ್ ಮತ್ತು ಬೆರಳು ಗುರುತು ನೀಡಿ ಹೊಸ ಸಂಪರ್ಕ ಪಡೆಯುವ ಸಂಬಂಧ ಇ-ಕೆವೈಸಿ  ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ ಎಲ್ಲ ಮೊಬೈಲ್ ಸೇವಾ ಗ್ರಾಹಕರು ಈ ಇ-ಕೆವೈಸಿ ಸೇವೆ ಮೂಲಕ ತಮ್ಮ ತಮ್ಮ ಸಿಮ್ ಕಾರ್ಡ್ ಗಳನ್ನು  ಚಾಲ್ತಿಗೊಳಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಟೆಲಿಕಾಂ ಕಂಪೆನಿಗಳು ಈ ಇ-ಕೆವೈಸಿ ಸೇವೆಯನ್ನು ನೀಡಲಿದೆ. ಇದಕ್ಕೆ ಇತ್ತೀಚೆಗೆ ಮಾರುಕಟ್ಟೆಗೆ ಆಗಮಿಸಿರುವ ನೂತನ ರಿಲಯನ್ಸ್  ಜಿಯೋ ಸಿಮ್ ಕೂಡ ಹೊರತಾಗಿಲ್ಲ. ಈಗಾಗಲೇ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಪಡೆದಿರುವ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಅನ್ನು  ಚಾಲ್ತಿಗೊಳಿಸಬಹುದಾಗಿದೆ.

ಏನಿದು ಇ-ಕೆವೈಸಿ?

ನೋ ಯುವರ್ ಕಸ್ಟಮರ್-ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಇದು ಸರ್ಕಾರದ ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯಾಗಿದೆ. ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ನೀಡಿದರೆ ಸಿಮ್  ಆಕ್ಟಿವೇಶನ್ ಆಗಬೇಕಾದರೆ ಕಂಪೆನಿಯ ಕರೆ  ಸ್ವೀಕರಿಸಿ ಫೋನ್ ಮೂಲಕ ವೋಟರ್ ಐಡಿ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ಒತ್ತಿ ಸಿಮ್ ಕಾರ್ಡ್ ಆನ್ನು ಆಕ್ಟಿವೇಟ್  ಮಾಡಬಹುದಿತ್ತು. ಈ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆಯಾದರೂ ಕೊಂಚ ಕಾಲಾವಕಾಶ ಬೇಕಾಗುತ್ತದೆ.

ಆದರೆ ರಿಲಯನ್ಸ್ ಜಿಯೋ ಸಿಮ್ ಪಡೆಯಲು ಇಷ್ಟೆಲ್ಲ ಕಷ್ಟ ಪಡಬೇಕಿಲ್ಲ. ನೀವು ಆಧಾರ್ ಕಾರ್ಡ್‍ನೊಂದಿಗೆ ನೇರವಾಗಿ ರಿಲಯನ್ಸ್ ಸ್ಟೋರ್ ಗೆ ಹೋಗಿ ಅಲ್ಲಿರುವ ಸ್ಕ್ಯಾನರ್‍ ನಲ್ಲಿ ನೀವು ಕೈ  ಬೆರಳನ್ನು ಒತ್ತಿದರೆ ಆಯ್ತು. ನಿಮ್ಮ ಆಧಾರ್ ಕಾರ್ಡ್‍ನಲ್ಲಿರುವ ಬೆರಳಚ್ಚಿಗೂ ರಿಲಯನ್ಸ್ ಮಳಿಗೆಯಲ್ಲಿ ಒತ್ತಿದ ಬೆರಳಚ್ಚಿಗೆ ತಾಳೆಯಾದರೆ ಕೆಲವೇ ನಿಮಿಷಗಳಲ್ಲಿ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.  ಆದರೆ ಆರಂಭದಲ್ಲಿ ರಿಲಯನ್ಸ್ ಇ ಕೆವೈಸಿ ಸೇವೆ ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ನಗರಗಳಲ್ಲಿ ಈ ಸೇವೆ ಆರಂಭಿಸುವುದಾಗಿ  ರಿಲಯನ್ಸ್ ಜಿಯೋ ಇನ್ಫೋಕಾಂ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com