
ನವದೆಹಲಿ: ತಪ್ಪು ಮಾಹಿತಿ ನೀಡುವ ಜಾಹಿರಾತುಗಳ ಪಟ್ಟಿಯನ್ನು ಗ್ರಾಹಕರ ದೂರುಗಳ ಕೌನ್ಸಿಲ್ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆಯ ಆ್ಯಪಲ್, ತಂಪು ಪಾನೀಯ ಸಂಸ್ಥೆ ಕೋಕ ಕೋಲ ಮತ್ತು ಖ್ಯಾತ ಮೊಬೈಲ್ ಸೇವಾ ಸಂಸ್ಥೆ ಏರ್ ಟೆಲ್ ಸೇರಿದಂತೆ ಹಲವು ಸಂಸ್ಥೆಗಳ ವಿರುದ್ಧ ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಕೇವಲ ಆ್ಯಪಲ್, ಕೋಕ್, ಏರ್ ಟೆಲ್ ಮಾತ್ರವಲ್ಲದೇ ಮೊಬಿ ಕ್ವಿಕ್, ಹೆಚ್ ಯು ಎಲ್, ನಿವಿಯಾ, ಅಮುಲ್, ಒಪೆರಾ, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಪೆರ್ನಾಡ್ ರಿಕಾರ್ಡ್ ಸಂಸ್ಥೆಗಳ ಜಾಹಿರಾತುಗಳು ಕೂಡ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಹಲವು ದೂರುಗಳು ಬಂದಿವೆ. ಈ ಎಲ್ಲ ಸಂಸ್ಥೆಗಳ ವಿರುದ್ಧ ಕಳೆದ ಜನವರಿ ಒಂದೇ ತಿಂಗಳಲ್ಲಿ ಒಟ್ಟು 191 ದೂರುಗಳು ಬಂದಿದ್ದು, ಭಾರತೀಯ ಜಾಹಿರಾತು ಗುಣಮಟ್ಟ ಸಮಿತಿಯ ಗ್ರಾಹಕರ ದೂರುಗಳ ಕೌನ್ಸಿಲ್ ಗೆ ದೂರು ಬಂದಿದೆ.
ಈ 192 ,ದೂರುಗಳ ಪೈಕಿ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ 102 ದೂರುಗಳು ದಾಖಲಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದ 20 ದೂರುಗಳು, ವೈಯುಕ್ತಿಕ ಆರೈಕೆ ವಿಭಾಗದಲ್ಲಿ 7 ದೂರು ಮತ್ತು ಆಹಾರ ಮತ್ತು ತಂಪುಪಾನೀಯ ವಿಭಾಗಕ್ಕೆ ಸಂಬಂಧಿಸಿದಂತೆ ಆರು ದೂರುಗಳು, ಮತ್ತ ಇತರೆ ವಿಭಾಗದಲ್ಲಿ 8 ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಇನ್ನು ಕೋಕ ಕೋಲಾ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಜಾಹಿರಾತಿನಲ್ಲಿ ಕೋಕ್ ಕುಡಿಯುವ ಸಲುವಾಗಿ ನಟ ಅತೀ ವೇಗವಾಗಿ ಬೈಕ್ ಚಲಾಯಿಸುತ್ತಾನೆ. ಆದರೆ ಅದು ರೀಲ್ ನಲ್ಲಿ.. ಅದನ್ನೇ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಅಂದರೆ ಅತ್ಯಂತ ವೇಗವಾಗಿ ಬೈಕ್ ಚಲಾಯಿಸಿದರೆ ಅದು ಅಪಾಯ ಹಾಗೂ ಅಪರಾಧ ಎಂದು ದೂರು ನೀಡಲಾಗಿದೆ. ಇನ್ನು ಈ ಬಗ್ಗೆ ಕೋಕಕೋಲಾ ಸಂಸ್ಥೆಯ ಭಾರತದ ವಕ್ತಾರರನ್ನು ಸಂಪರ್ಕಿಸಿದಾಗ ಟಿವಿ ಜಾಹಿರಾತುಗಳಿಂದ ತಪ್ಪು ಮಾಹಿತಿಯಾಗದಂತೆ ಜಾಹಿರಾತು ಮಾರ್ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತನ್ನ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಗಳನ್ನು ಯಥೇಚ್ಛವಾಗಿ ಮಾರಾಟ ಮಾಡುವ ಸಲುವಾಗಿ ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್, ಕ್ರೆಡಿಟಾ ಕಾರ್ಡ್ ಬಳಕೆ ಮೇಲೆ ಶೇ.10ವರೆಗೂ ಕ್ಯಾಶ್ ಬ್ಯಾಕ್ ಘೋಷಣೆ ಮಾಡಿತ್ತು. ಆದರೆ ಈ ಕ್ಯಾಶ್ ಬ್ಯಾಕ್ ಆಫರ್ ಕೇವಲ 10 ಸಾವಿರ ರುಗಳ ಮಿತಿ ಹೊಂದಿದ್ದು, ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಜಾಹಿರಾತು "ತಪ್ಪು ಮಾಹಿತಿ ನೀಡುತ್ತಿದ್ದು ಮತ್ತು ಗ್ರಾಹಕರ ದಾರಿ ತಪ್ಪಿಸುವ ಜಾಹಿರಾತಾಗಿದೆ ಎಂದು ಗ್ರಾಹಕರೊಬ್ಬರು ದೂರಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕ್ಯಾಶ್ ಬ್ಯಾಕ್ ಲಿಮಿಟ್ ಬಗ್ಗೆ ವಿವಿಧ ಸಂಪರ್ಕ ವಾಹಿನಗಳ ಮೂಲಕ ಗ್ರಾಹಕರಿಗೆ ತಿಳಿಸಲಾಗಿದೆ ಎಂದು ವಾದಿಸಿದ್ದಾರೆ.
ಒಟ್ಟಾರೆ ಎಲ್ಲ ಸಂಸ್ಥೆಗಳೂ ತಮ್ಮ ಲಾಭಾಂಶ ವೃದ್ಧಿಗಾಗಿ ಜಾಹಿರಾತುಗಳ ಮೂಲಕ ಗ್ರಾಹಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.
Advertisement