ಸೌದಿ ಆರ್ಥಿಕತೆಗೆ ಇಸ್ಲಾಮಿಕ್ ಬಾಂಡ್ ಬುನಾದಿ (ಅವಲೋಕನ)

5-10 ವರ್ಷದ ಹಿಂದೆ ಅಪ್ಪಿತಪ್ಪಿ ಸೌದಿ ಆರ್ಥಿಕತೆಯಲ್ಲಿ ಸತ್ವವಿಲ್ಲ ಎನ್ನುವ ಮಾತನ್ನ ಯಾರಾದರೂ ಆಡಿದ್ದರೆ ಆತನನ್ನ ಹುಚ್ಚ ಅನ್ನುವ ಸ್ಥಿತಿಯಿತ್ತು. ಸಮಯ ಎಂತೆಂತವರನ್ನ ಹೇಗೆ ಮಲಗಿಸಿ ಬಿಡುತ್ತದೆ ಎನ್ನುದಕ್ಕೆ ಸೌದಿ...
ಸೌದಿ ಆರ್ಥಿಕತೆ (ಸಾಂಕೇತಿಕ ಚಿತ್ರ)
ಸೌದಿ ಆರ್ಥಿಕತೆ (ಸಾಂಕೇತಿಕ ಚಿತ್ರ)
ಸೌದಿ ಅಂದ ತಕ್ಷಣ ಅಲ್ಲಿನ ಸಿರಿವಂತಿಕೆ, ಮೆಕ್ಕಾ ಮದೀನಾ, ತಪ್ಪು ಮಾಡಿದವರ ಕೈಕಡಿಯುವುದು, ಕಣ್ಣು ಕೀಳುವುದು,  ಮರಣದಂಡನೆ ವಿಧಿಸುವ ಕಟ್ಟರ್ ಶಿರಿಯಾ ಕಾನೂನು  ಇವೆಲ್ಲಾ ಯೋಚಿಸುವ ಮುನ್ನವೇ ತಲೆಯಲ್ಲಿ ಗಿರಕಿ ಹಾಕುತ್ತವೆ. ಇವೆಲ್ಲಾ ಇಂದಿಗೂ ಸತ್ಯ ಸಿರಿವಂತಿಕೆ ಒಂದನ್ನ ಬಿಟ್ಟು. ! ಹೌದ ಎನ್ನುವ ನಿಮ್ಮ ಉದ್ಘಾರಕ್ಕೆ ಹೌದು ಎನ್ನುವುದು ಉತ್ತರ. 
ಐದೋ ಅಥವಾ ಹತ್ತೋ ವರ್ಷದ ಹಿಂದೆ ಅಪ್ಪಿತಪ್ಪಿ ಸೌದಿ ಆರ್ಥಿಕತೆಯಲ್ಲಿ ಸತ್ವವಿಲ್ಲ ಅವರಲ್ಲಿ ಹಣದ ಕೊರತೆಯಿದೆ ಎನ್ನುವ ಮಾತನ್ನ ಯಾರಾದರೂ ಆಡಿದ್ದರೆ ಆತನನ್ನ ಹುಚ್ಚ ಅನ್ನುವ ಸ್ಥಿತಿಯಿತ್ತು. ಸಮಯ ಎಂತೆಂತವರನ್ನ ಹೇಗೆ ಮಲಗಿಸಿ ಬಿಡುತ್ತದೆ ಎನ್ನುದಕ್ಕೆ ಸೌದಿ ತಾಜಾ ಉದಾಹರಣೆ. ಶತಕೋಟಿ ಡಾಲರ್ ಹಣವನ್ನ ರಿಸರ್ವ್ ನಲ್ಲಿ ಹೊಂದಿರುತ್ತಿದ್ದ ಸೌದಿ ಇಂದು ಹಣದ ಕೊರತೆ ಎದಿರಿಸುತ್ತಿದ್ದೆ. ತನ್ನ ಫಿಸ್ಕಲ್ ಡೆಫಿಸಿಟ್ ಸರಿದೂಗಿಸಲು ಏನೆಲ್ಲಾ ಕಸರತ್ತು ಮಾಡುತ್ತಾ ಇದೆ, ಸೌದಿಯಲ್ಲಾದ ಬದಲಾವಣೆ ಭಾರತಕ್ಕೂ ತಟ್ಟಿದೆಯೇ ? ಇವುಗಳ ಬಗ್ಗೆ ಒಂದಷ್ಟು ಅವಲೋಕಿಸೋಣ. 
ಸಾರ್ವಜನಿಕ ಖರ್ಚು - ವೆಚ್ಚದಲ್ಲಿ  ಭಾರಿ ಕಡಿತ
ಸಾರ್ವಜನಿಕ ವಲಯದಲ್ಲಿ ಸೌದಿ ಸರಕಾರ ಮಾಡುತ್ತಿದ್ದ ಖರ್ಚಿನಲ್ಲಿ ಕಡಿತ ಮಾಡಿದೆ. ಇದರಿಂದ ಹೆಚ್ಚು ಪೆಟ್ಟು ತಿಂದದ್ದು ಕಟ್ಟಡ ಕಾಮಗಾರಿ ವಲಯ. ಈ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸಹಸ್ರಾರು ಭಾರತೀಯರು ರಾತ್ರೋರಾತ್ರಿ ಕೆಲಸ ಕಳೆದು ಕೊಂಡು ಭಾರತದತ್ತ ಮುಖ ಮಾಡಿದ್ದಾರೆ. 2016 ರಲ್ಲಿ ಭಾರತಕ್ಕೆ ವಾಪಸ್ಸು ಬರಲು ಹಣವಿಲ್ಲದೆ ಸೌದಿಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಸಹಸ್ರಾರು ಭಾರತೀಯರನ್ನ ಭಾರತ ಸರಕಾರ ವಾಪಸ್ಸು ಕರೆಸಿಕೊಂಡಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಹಲವಾರು ತಿಂಗಳು ಸಂಬಳ ನೀಡದೆ ಕೆಲಸ ಮಾಡಿಸಿಕೊಂಡು ಅವರನ್ನ ಆ ಸ್ಥಿತಿಗೆ ದೂಡಿತ್ತು ಸೌದಿ ಸನ್ನಿವೇಶ. ಗಮನಿಸಿ ಭಾರತದ ಕೇರಳ ರಾಜ್ಯದ 35 ಪ್ರತಿಶತ ಜಿಡಿಪಿ ಬರುವುದು ಕೊಲ್ಲಿ ದೇಶದಲ್ಲಿ ಕೆಲಸ ಮಾಡಿ ಹಣವನ್ನ ಕೇರಳಕ್ಕೆ ಕಳಿಸುವುದರಿಂದ. 2016 ರಿಂದ ಈಚೆಗೆ ಕೇರಳದಲ್ಲಿ ಸದ್ದಿಲ್ಲದೆ ರಿಸೆಶನ್ ಉಂಟುಮಾಡಿದೆ. 
ತೆರಿಗೆ ಹಾಕಲು ನಿರ್ಧಾರ 
ದಶಕಗಳಿಂದ ಮಾರಾಟ ಮೇಲೆ ಖರೀದಿ ಮೇಲೆ ತೆರಿಗೆಯಿಲ್ಲದೆ ಆರಾಮಾಗಿದ್ದ ಜನರ ಮೇಲೆ ಸೌದಿ ಸರಕಾರ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (VAT ) ಹಾಕಲು ನಿರ್ಧರಿಸಿದೆ. ಈ ಸಂಬಂಧ ಬೇಕಾದ ಎಲ್ಲಾ ರೀತಿಯ ಅನುಮೋದನೆ ಸರಕಾರದ ಪರವಾಗಿ ಸಿಕ್ಕಿದೆ. ಹಾಗೆ ನೋಡಲು ಹೋದರೆ ಅರಬ್ ಸಂಯುಕ್ತ ಸಂಸ್ಥಾನ (UAE) ಯಲ್ಲಿ ಕೂಡ ಯಾವುದೇ ರೀತಿಯ ತೆರಿಗೆ ಇರಲಿಲ್ಲ ಇದೀಗ VAT  ಎಲ್ಲೆಡೆ ಜನವರಿ 1,2018 ರಿಂದ ಜಾರಿಗೆ ಬರಲಿದೆ. ಒಮ್ಮೆಲೇ ಎಲ್ಲೆಡೆ ಇದನ್ನ ಜಾರಿಗೆ ತರುವುದು ತುಸು ಕಷ್ಟವೇ ಸರಿ. ಹೀಗಾಗಿ 2018 ಜನವರಿಯಿಂದ ರ 2019 ಜನವರಿವರೆಗೆ ಸಮಯ ನೀಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಜನವರಿ 2018 ರಿಂದ ಇದು ಶುರುವಾಗಲಿದೆ. ಪ್ರಾಯೋಗಿಕವಾಗಿ 5 ಪ್ರತಿಶತ ತೆರಿಗೆಯನ್ನ ವಿಧಿಸಲು ಯೋಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ಇದು ಬದಲಾಗುವ ಸಾಧ್ಯತೆ ಇದೆ. 
ಇಸ್ಲಾಮಿಕ್ ಡೆಟ್ ಬಾಂಡ್ ವಿತರಣೆ 
ಇಸ್ಲಾಂ ಧರ್ಮದ ಪ್ರಕಾರ ಸಾಲದ ಮೇಲೆ ಬಡ್ಡಿ ಪಡೆಯುವ ಹಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಭಾರತದಲ್ಲಿ ಚಿಕ್ಕಪುಟ್ಟ ಕಾರಣಗಳಿಗೆ ಫತ್ವಾ ಹೊರಡಿಸುವ ಕಟ್ಟರ್ ಇಮಾಮ್ ಗಳಿಗೇನು ಕೊರತೆಯಿಲ್ಲ. ಹೇಳಿಕೇಳಿ ಸೌದಿ ಇಂತ ಕಟ್ಟರ್ ವಾದದ ನಾಯಕ. ಅಂತ ಸೌದಿ ಡೆಟ್ ಬಾಂಡ್ ಅಂದರೆ ಸಾಲ ಪತ್ರ ಹೊರಡಿಸಿದೆ, ಮಾರಾಟ ಮಾಡಿದೆ ಎಂದರೆ ಆಶ್ಚರ್ಯವಲ್ಲದೆ ಮತ್ತೇನು? ಸಾಲ ಪತ್ರ ಕೊಂಡವರು ಬಡ್ಡಿಯಿಲ್ಲದೆ ಸುಮ್ಮನೆ ಸಾಲ ಕೊಟ್ಟಿದಾರೆಯೇ ?ಯಾಕೆ ಯಾರು ಫತ್ವಾ ಹೊರಡಿಸಿಲ್ಲ ? ಮಜಾ ಇರುವುದು ಇಲ್ಲೇ, ಸೌದಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಇಸ್ಲಾಮಿಕ್ ಬಾಂಡ್ ಮಾರಾಟ ಮಾಡಿ 9 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿದೆ. ಇವುಗಳಲ್ಲಿ ಕೆಲವು ಐದು ವರ್ಷಕ್ಕೆ ಪಾವತಿಸಬೇಕಾದ ಬಾಂಡ್ಗಳು ಇವುಗಳು 2. 93 ಪ್ರತಿಶತ ಗಳಿಕೆ ನೀಡಲಿವೆ (ಬಡ್ಡಿ) ಇನ್ನುಳಿದವು ಹತ್ತು ವರ್ಷದಲ್ಲಿ ಮರುಪಾವತಿಸಬೇಕಾದ ಸಾಲ ಅವುಗಳು 3.65 ಪ್ರತಿಶತ ಹೂಡಿಕೆ ಮೇಲೆ ಲಾಭ ನೀಡಲಿವೆ. ಇಸ್ಲಾಂ ನಲ್ಲಿ ಬಡ್ಡಿಯನ್ನ ಹರಾಮ್ (ಕೆಟ್ಟದ್ದು) ಅನ್ನಲಾಗುತ್ತೆ. ಮತ್ತೆಗೆ ಈ ಬಾಂಡ್ ? ಇದಕ್ಕೆ ಉತ್ತರ ಸುಕುಕ್ (SUKUK ). 
ಏನಿದು ಸುಕುಕ್? 
ಇತರ ಮುಸ್ಲಿಮೇತರ ದೇಶಗಳಂತೆ ರಿಬಾ (riba, ಅಂದರೆ ಬಡ್ಡಿ) ಹಾಕಲು ಸಾಧ್ಯವಿಲ್ಲದ ಕಾರಣ ಶರಿಯಾ ಧಾರ್ಮಿಕತೆಗೆ ಕುಂದು ಬರದಂತೆ ವಿತರಿಸಲ್ಪಟ್ಟ ಹಣಕಾಸು ಪತ್ರ (ಫೈನಾನ್ಸಿಯಲ್ ಸರ್ಟಿಫಿಕೇಟ್) ಕ್ಕೆ ಸುಕುಕ್ ಎನ್ನುತ್ತಾರೆ. ಹೀಗೆ ಹಣಕಾಸು ಪತ್ರ ವಿತರಣೆಯಿಂದ ಬಂದ ಹಣವನ್ನ ಆಸ್ತಿ ಅಥವಾ ವ್ಯಾಪಾರ ಖರೀದಿಯಲ್ಲಿ ತೊಡಗಿಸಲಾಗುತ್ತದೆ. ಮತ್ತು ಹೂಡಿಕೆದಾರರನ್ನ ಪಾಲುದಾರ ಎನ್ನಲಾಗುತ್ತದೆ. ಹೀಗಾಗಿ ಹೂಡಿಕೆಗಿಂತ ಹೆಚ್ಚು ಹಣ ಹಿಂದಿರುಗಿಸಿದರೆ ಅದನ್ನ ಲಾಭಂಶ ಎನ್ನಲಾಗುತ್ತದೆ. ಅದನ್ನ ರಿಬಾ ಎನ್ನುವುದಿಲ್ಲ . ಮತ್ತು ನಿಗದಿತ ವರ್ಷಗಳ ನಂತರ (5/10 ವರ್ಷ ) ಮುಖಬೆಲೆಗೆ ಹಣಕಾಸು ಪತ್ರವನ್ನ ಸರಕಾರ ಕೊಳ್ಳುತ್ತದೆ. ಉದಾಹರಣೆ ನೋಡೋಣ. 
ಸೌದಿ ಸರಕಾರ ಹೊರಡಿಸಿದ ಸುಕುಕ್ ಅನ್ನು ಭಾರತದ ಒಬ್ಬ ಪ್ರಜೆ 1000 ರುಪಾಯಿಗೆ ಕೊಳ್ಳುತ್ತಾನೆ ಎಂದುಕೊಳ್ಳಿ. ಸೌದಿ ಸರಕಾರ ಸಂಗ್ರಹಿಸಿದ ಒಟ್ಟು ಮೊತ್ತ 1 ಲಕ್ಷ ರೂಪಾಯಿ ಎಂದು ಕೊಂಡರೆ ಭಾರತೀಯ ಪ್ರಜೆ ಅದರಲ್ಲಿ 1 ಪ್ರತಿಶತ ಪಾಲುದಾರ. ಐದು ವರ್ಷದಲ್ಲಿ ಆತನಿಗೆ 200 ರೂಪಾಯಿ ಸಿಕ್ಕಿತು ಎಂದು ಕೊಂಡರೆ ಅದು ಪಾಲುದಾರಿಕೆಯಲ್ಲಿ ಬಂದ ಲಾಭಂಶ ಎಂದು ಪರಿಗಣಿಸಲಾಗುತ್ತದೆ. ಐದು ವರ್ಷದ ನಂತರ ಸೌದಿ ಸರಕಾರ 1000 ರೂಪಾಯಿ ಭಾರತೀಯ ಪ್ರಜೆಗೆ ವಾಪಸ್ಸು ನೀಡಿ ತನ್ನ ಪತ್ರವನ್ನ ವಾಪಸ್ಸು ಪಡೆಯುತ್ತದೆ. ಇಲ್ಲೇಲ್ಲೂ ಬಡ್ಡಿ ಪದದ ಉಪಯೋಗಿಸುವುದಿಲ್ಲ ಅನ್ನುವುದು ಬಿಟ್ಟರೆ ವ್ಯಾವಹಾರಿಕ ದೃಷ್ಟಿಯಿಂದ ಆಗುವುದು ಮಾತ್ರ ಇತರ ದೇಶಗಳಂತೆಯೇ ! ದುಡ್ಡಿನ ಮುಂದೆ ಯಾವ ಧರ್ಮ ಯಾವ ರಾಜಕೀಯ ? 
ಆರ್ಥಿಕವಾಗಿ ಪ್ರಭಲವಾಗಿದೆ ಸೌದಿ ಸೊರಗಿದ್ದೇಕೆ ? 
2014 ರಿಂದ ಕುಸಿಯಲು ಶುರುವಾದ ತೈಲ ಬೆಲೆ ಸೌದಿ ಆರ್ಥಿಕತೆ ಕುಸಿಯಲು ಬಹುಮುಖ್ಯ ಕಾರಣ. ನೆನಪಿರಲಿ ಸೌದಿ ಆರ್ಥಿಕತೆ ಪೂರ್ಣ ತೈಲೋದ್ಯಮವನ್ನ ಅವಲಂಬಿಸಿದೆ. ಕುಸಿದ ತೈಲದ ಬೆಲೆ ಸೌದಿ ಆರ್ಥಿಕತೆಯನ್ನ ಕುಸಿಯುವಂತೆ ಮಾಡಿದೆ. ಸಿರಿಯಾ ಮೇಲೆ ಅಮೇರಿಕಾ ದಾಳಿ ಮಾಡಿದ್ದು ಮತ್ತು ಅಲ್ಲಿನ ತೈಲವನ್ನ ಕಾಳಸಂತೆಯಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆಯಲ್ಲಿ ಮಾರಿದ್ದು ಮತ್ತು ಬಂದ ಹಣವನ್ನ ಯುದ್ಧದ ಖರ್ಚು ಎಂದು ತೋರಿಸಿ ಬಹಳಷ್ಟು ಜನ ಜೋಬು ತುಂಬಿಸಿಕೊಂಡು ಜಾಗ ಖಾಲಿಮಾಡಿದರು. ಮಧ್ಯದಲ್ಲಿ ತನ್ನ ತೈಲದ ಬೆಲೆ ಕುಸಿದದಿಂದ ಕುಸಿದದ್ದು ಮಾತ್ರ ಸೌದಿ. 2016 ಸೌದಿ ಪಾಲಿಗೆ ಕರಾಳವರ್ಷ. 2017 ಅದಕ್ಕಿಂತ ಕೆಟ್ಟದಾಗುವ ಸಾಧ್ಯತೆ ದಟ್ಟವಾಗಿದೆ. ಇಸ್ರೇಲ್ ಬಗ್ಗೆ ತನ್ನ ಓಲುವನ್ನ ಟ್ರಂಪ್ ಜಗತ್ಜಾಹಿರಾತು ಮಾಡಿಯಾಗಿದೆ. ಮುಂಬರುವ ದಿನಗಳಲ್ಲಿ ಅಮೆರಿಕನ್ ಡಾಲರ್ ಅಪಮೌಲ್ಯ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ತೈಲದ ಬೆಲೆಯನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಳೆಯುವುದು ಡಾಲರ್ ನಲ್ಲಿ. ಡಾಲರ್ ಮೌಲ್ಯ ಕುಸಿದರೆ ತೈಲದ ಬೆಲೆಯೂ ಕುಸಿಯುತ್ತದೆ. ಇದು ಸೌದಿ ಪಾಲಿಗಂತೂ ಸಿಹಿಸುದ್ದಿಯಲ್ಲ. 
ಭಾರತವನ್ನ ಒಂದು ದೇಶವಾಗಿ ನೋಡಿದರೆ ಕುಸಿದ ತೈಲಬೆಲೆ ನಮಗೆ ವರದಾನವಾಗಲಿದೆ. ಹಾಗೆ ನೋಡಿದರೆ ಮೋದಿ ಸರಕಾರ ಬಹಳ ಅದೃಷ್ಟವಂತ ಸರಕಾರ ಎನ್ನಬಹದು 2014 ರಿಂದ ಇಲ್ಲಿಯತನಕ ತೈಲಬೆಲೆಯಲ್ಲಿ ಆದ ಕುಸಿತ ಸರಕಾರದ ಹಲವು ಆರ್ಥಿಕ ನೀತಿಗೆ ಸಹಾಯಕವಾಗಿದೆ. ಮುಂಬರುವ ದಿನಗಲ್ಲಿ ಇದರಿಂದ ಇನ್ನಷ್ಟು ಲಾಭ ಪಡೆಯಬಹದು. ಕೇರಳ ಮತ್ತು ತಮಿಳುನಾಡಿನಿಂದ ಕೊಲ್ಲಿ ದೇಶಕ್ಕೆ ಕೆಲಸಕ್ಕೆ ಹೋದವರು ಕೆಲವಿಲ್ಲದೆ ಕೂರುವಂತಾಗಿದೆ. ಪರ್ಯಾಯ ದಿನಒಪ್ಪೊತ್ತಿನಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಕೇರಳದ ಆರ್ಥಿಕತೆಗೆ ಮಂಕು ಹಿಡಿದು ವರ್ಷವೇ ಕಳೆದಿದೆ ಅದು ಇನ್ನೂ ಮುಂದುವರಿಯಲಿದೆ. ಕೇವಲ ತೈಲವನ್ನ ನಂಬಿ ಇತರ ಆರ್ಥಿಕ ಮೂಲವನ್ನ ಸೃಷ್ಟಿಸಿಕೊಳ್ಳದೆ ಇದ್ದದ್ದು ಸೌದಿಯ ಇಂದಿನ ಸ್ಥಿತಿಗೆ ಮುಖ್ಯ ಕಾರಣ. ಉಳಿದ ಬಾಹ್ಯ ಕಾರಣಗಳು ಸತ್ತವರಿಗೆ ತರ್ಪಣ ಬಿಟ್ಟಹಾಗಿದೆ ಅಷ್ಟೇ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com