ತುರ್ತು ಚಿಕಿತ್ಸೆ ವೇಳೆ ಇಪಿಎಫ್ ವಿತ್ ಡ್ರಾಗೆ ವೈದ್ಯರ ಪ್ರಮಾಣ ಪತ್ರ ಬೇಕಿಲ್ಲ!

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಮಿಕರ ನೆರವಿಗಾಗಿ ಇಪಿಎಫ್ ಹಣ ವಿತ್ ಡ್ರಾ ನಿಯಮವನ್ನು ಸಡಿಲಗೊಳಿಸಲಾಗಿದ್ದು, ತುರ್ತು ಚಿಕಿತ್ಸೆ ವೇಳೆ ಇಪಿಎಫ್ ವಿತ್ ಡ್ರಾಗೆ ವೈದ್ಯರ ಪ್ರಮಾಣ ಪತ್ರ ಅವಶ್ಯಕತೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಮಿಕರ ನೆರವಿಗಾಗಿ ಇಪಿಎಫ್ ಹಣ ವಿತ್ ಡ್ರಾ ನಿಯಮವನ್ನು ಸಡಿಲಗೊಳಿಸಲಾಗಿದ್ದು, ತುರ್ತು ಚಿಕಿತ್ಸೆ ವೇಳೆ ಇಪಿಎಫ್ ವಿತ್ ಡ್ರಾಗೆ ವೈದ್ಯರ ಪ್ರಮಾಣ ಪತ್ರ  ಅವಶ್ಯಕತೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಗಂಭೀರವಾದ ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ತೆಗೆದುಕೊಳ್ಳಬೇಕಾದ ಸನ್ನಿವೇಶದಲ್ಲಿ ಭವಿಷ್ಯ ನಿಧಿಯ ಹಣ ತೆಗೆದುಕೊಳ್ಳುವುದಕ್ಕೆ ಉದ್ಯೋಗ ಸಂಸ್ಥೆಗಳ ಅನುಮತಿ ಅಥವಾ ವೈದ್ಯರ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಕಾರ್ಮಿಕ  ಸಚಿವಾಲಯವು ಗುರುವಾರ ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮಾವಳಿ ಪ್ರಕಾರ ಉದ್ಯೋಗಿಗಳು ಕಾಂಪೋಸಿಟ್ ಅರ್ಜಿಯನ್ನು ತುಂಬಿ ತೀರಾ ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಸ್ವಯಂ ಘೋಷಣಾ  ಅರ್ಜಿಯನ್ನು ಸಲ್ಲಿಸಿ, ಭವಿಷ್ಯನಿಧಿಯಿಂದ ಹಣ ತೆಗೆದುಕೊಳ್ಳಬಹುದಾಗಿದೆ.

ಒಂದು ವೇಳೆ ಉದ್ಯೋಗಿಯು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾದ ಸನ್ನಿವೇಶ ಸೃಷ್ಟಿಯಾದರೆ, ಪ್ರಮುಖ ಶಸ್ತ್ರಚಿಕಿತ್ಸೆ ವೇಳೆ 6 ತಿಂಗಳ ಸಂಬಳದಷ್ಟು ಹಣವನ್ನು ಇಪಿಎಫ್ ನಿಂದ ತೆಗೆಯಬಹುದು. ಟಿಬಿ, ಕುಷ್ಠರೋಗ,  ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆ ಹಾಗೂ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇನ್ನು ಅಂಗವೈಕಲ್ಯ ಇರುವವರು ವೈದ್ಯರಿಂದ ಪ್ರಮಾಣ ಪತ್ರ ಪಡೆದು, ಅದನ್ನು ಸಲ್ಲಿಸಿದರೆ ಅಗತ್ಯ ಸಲಕರಣೆಗಳನ್ನು ಖರೀದಿಸುವುದಕ್ಕೆ, ಚಿಕಿತ್ಸೆಗಾಗಿ ಹಣ ವಿಥ್ ಡ್ರಾ ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com