
ನವದೆಹಲಿ: ಕರೆ ಕಡಿತದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ಗರಿಷ್ಠ ದಂಡವನ್ನು ರು.50 ಸಾವಿರದಿಂದ ರು10 ಲಕ್ಷಕ್ಕೆ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಹಕರು ಕರೆ ಮಾಡಿದ್ದ ಸಂದರ್ಭದಲ್ಲಿ ಕರೆ ಕಡಿತವಾದರೆ ಟೆಲಿಕಾಂ ಸಂಸ್ಥೆಗಳಿಗೆ ವಿಧಿಸುವ ದಂಡ ಪ್ರಮಾಣವನ್ನು ಟ್ರಾಯ್ ಭಾರಿ ಮಟ್ಟದಲ್ಲಿ ಏರಿಕೆ ಮಾಡಿದೆ. ಈಗಾಗಲೇ ಕರೆ ಕಡಿತ ಸಮಸ್ಯೆ ನಿವಾರಣೆಗೆ 9 ತಿಂಗಳ ಗಡುವು ನೀಡಿರುವ ಟ್ರಾಯ್, ಒಂದು ವೇಳೆ ಸತತ 3 ತ್ರೈಮಾಸಿಕದಲ್ಲಿ (9 ತಿಂಗಳು) ಸಮಸ್ಯೆ ನಿವಾರಿಸಿಕೊಳ್ಳದಿದ್ದರೆ, ಗರಿಷ್ಠ ರು.10 ಲಕ್ಷದವರೆಗೂ ದಂಡ ವಿಧಿಸುವುದಾಗಿ ಟೆಲಿಕಾಂ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಈ ಹಿಂದಿನ ಗುಣಮಟ್ಟ ಸೇವಾ ನಿಯಮಾವಳಿಗಳ ಅನ್ವಯ ಪ್ರತಿ ಬಾರಿ ನಿಯಮ ಉಲ್ಲಂಘನೆಗೆ ರು.50,000 ದಂಡ ವಿಧಿಸಲಾಗುತ್ತಿತ್ತು. ಅದನ್ನು ಈಗ ರು.1 ಲಕ್ಷದಿಂದ ರು.10 ಲಕ್ಷ ರುಗಳವರೆಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಕರೆ ಕಡಿತದ ಪ್ರಮಾಣದ ಮೇಲೆ ದಂಡದ ಮೊತ್ತ ನಿರ್ಧಾರವಾಗುತ್ತದೆ. ಈ ಹಿಂದೆ ವಲಯ ಮಟ್ಟದಲ್ಲಿ ಈ ದಂಡವನ್ನು ನಿರ್ಧರಿಸಲಾಗುತ್ತಿತ್ತು. ಇನ್ನು ಮುಂದೆ ಅದನ್ನು ದೂರವಾಣಿ ಗೋಪುರದ ಮಟ್ಟ (ಟವರ್ ಲೊಕೇಷನ್)ದಲ್ಲಿ ನಿರ್ಧರಿಸಲಾಗುತ್ತದೆ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್. ಶರ್ಮಾ ತಿಳಿಸಿದ್ದಾರೆ.
ಇನ್ನು ಪ್ರಸ್ತುತ ಕಾಲ್ ಡ್ರಾಪ್ ಸಮಸ್ಯೆ ನಿಯಂತ್ರಿಸಲು ‘ಟ್ರಾಯ್’ ಶುಕ್ರವಾರ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಅತ್ಯಂತ ಕಠಿಣವಾಗಿದ್ದು, ದೂರಸಂಪರ್ಕ ಸಂಸ್ಥೆಗಳಿಗೆ ಅಂಕುಶ ಹಾಕಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Advertisement