ಕೂಡಲೇ ಬಾಕಿ ಸಾಲ ಪಾವತಿ ಮಾಡದಿದ್ದರೆ ಸಂಸ್ಥೆ ಮೇಲೆ ಇತರರ ನಿಯಂತ್ರಣ: ಅರುಣ್ ಜೇಟ್ಲಿ ಎಚ್ಚರಿಕೆ

ವಾಣಿಜ್ಯೋದ್ಯಮದ ಉದ್ದೇಶದಿಂದ ಬ್ಯಾಂಕ್ ಗಳಿಂದ ಸಾಲ ಪಡೆದು ಇನ್ನೂ ತೀರಿಸದ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದು,...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾಣಿಜ್ಯೋದ್ಯಮದ ಉದ್ದೇಶದಿಂದ ಬ್ಯಾಂಕ್ ಗಳಿಂದ ಸಾಲ ಪಡೆದು ಇನ್ನೂ ತೀರಿಸದ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದು, ಸಾಲ ಬಾಕಿ ಪಾವತಿ ಮಾಡದಿದ್ದರೆ ಸಂಸ್ಥೆಯ ಆಡಳಿತ ಜವಾಬ್ದಾರಿಯನ್ನು ಇತರರಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸ್ವತಃ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉದ್ಯಮಿಗಳಿಗೆ ಎಚ್ಚರಿಕೆ ನೀಡಿದ್ದು, ಬ್ಯಾಂಕ್ ಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ಸಾಲ ಪಡೆದಿರುವ ಉದ್ಯಮಿಗಳು ಇನ್ನೂ ಸಾಲ ಬಾಕಿ ಪಾವತಿ ಮಾಡಿಲ್ಲ. ಪ್ರಸಕ್ತ ಕಂತಿನವರೆಗೂ ಉದ್ಯಮಿಗಳು ಬಾಕಿ ಪಾವತಿ ಮಾಡಲೇ ಬೇಕಿದ್ದು, ಬಾಕಿ ಪಾವತಿ ಮಾಡದಿದ್ದರೆ ಹೊಸ ಬ್ಯಾಂಕ್ ದಿವಾಳಿತನ ಕಾನೂನಿನ ಅನ್ವಯ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಇತರರಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂಲಗಳ ಪ್ರಕಾರ ದೇಶದಲ್ಲಿ 12 ಪ್ರಮುಖ ಉಧ್ಯಮಿಗಳು ಸುಮಾರು 2 ಲಕ್ಷ ಕೋಟಿ ವರೆಗೂ ಸಾಲ ಬಾಕಿ ಪಾವತಿ ಉಳಿಸಿಕೊಂಡಿದ್ದು, ಇದಲ್ಲದೆ ಸಾಲ ಬಾಕಿ ಉಳಿಸಿಕೊಂಡಿರುವ ಮತ್ತಷ್ಟು ಉಧ್ಯಮಿಗಳನ್ನು ಗುರುತಿಸಲಾಗುತ್ತಿದೆ

ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ. ಇದೇ ನಿಟ್ಟಿನಲ್ಲಿ ಬ್ಯಾಂಕ್ ಗಳ ಮೇಲಿನ ಸಾಲದ ಒತ್ತಡ ನಿವಾರಣೆಗಾಗಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಬಾಕಿ ಪಾವತಿ ಉಳಿಸಿಕೊಂಡಿರುವ ಉದ್ಯಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ.

ಒಂದು ವೇಳೆ ಉದ್ಯಮಿಗಳು ಸಾಲ ಬಾಕಿ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಅವರನ್ನು ಆಡಳಿತ ಮಂಡಳಿಯಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಅರ್ಹತೆ ಇರುವ ಇತರರನ್ನು ಕೂರಿಸಬೇಕಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಬಾಕಿ ಸಾಲ ಪಾವತಿ ವಿಳಂಬದಿಂದ ಆರ್ಥಿಕ ಅಭಿವೃದ್ಧಿ ಮೇಲೆ ಹೊಡೆತ ಬೀಳುತ್ತಿದೆ ಎಂದು ಅಭಿಪ್ರಾಯ ಪಟ್ಟ ಜೇಟ್ಲಿ, ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಲಾಗದ ಉದ್ಯಮಿಗಳು ಪಕ್ಕಕ್ಕೆ ಸರಿದು ಇತರರು ಬೆಳೆಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಸರ್ಕಾರವೇ ಆ ಕಾರ್ಯ ಮಾಡಬೇಕಾಗುತ್ತದೆ ಎಂದು ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ಬ್ಯಾಂಕ್ ಗಳ ವಿಲೀನ ಕ್ರಮವನ್ನು ಸಮರ್ಥಿಸಿಕೊಂಡ ಜೇಟ್ಲಿ, ಬ್ಯಾಂಕ್ ಗಳ ವಿಲೀನ ಕ್ರಮದಿಂದ ಬ್ಯಾಂಕ್ ಗಳ ಬಂಡವಾಳ ಕೊರತೆ ನೀಗಿಸಿದಂತಾಗುತ್ತದೆ. ಅಂತೆಯೇ ಬ್ಯಾಂಕ್ ಗಳ ದಕ್ಷತೆ ಹೆಚ್ಚಿ, ಸಾಂಸ್ಥಿಕ ಆಡಳಿತದ ಗುಣಮಟ್ಟದಲ್ಲಿ ಚೇತರಿಕೆ ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com