ಎಲ್ ಪಿಜಿ ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ: ಎನ್ ಪಿಸಿಐಗೆ ಏರ್ ಟೆಲ್ ಮಾಹಿತಿ

ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಎಲ್ ಪಿಜಿ ಸಬ್ಸಿಡಿಯನ್ನು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖ್ಯಾತೆಗೆ ವರ್ಗಾವಣೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಏರ್ಟೆಲ್ ಸಂಸ್ಥೆ, ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮರು ವರ್ಗಾವಣೆ ಮಾಡುವುದಾಗಿ ಹೇಳಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಸುಮಾರು 167.7 ಕೋಟಿ ರುಪಾಯಿ ಎಲ್ ಪಿಜಿ ಸಬ್ಸಿಡಿಯನ್ನು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖ್ಯಾತೆಗೆ ವರ್ಗಾವಣೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ  ನೀಡಿರುವ ಏರ್ ಟೆಲ್ ಸಂಸ್ಥೆ, ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮರು ವರ್ಗಾವಣೆ ಮಾಡುವುದಾಗಿ ಹೇಳಿಕೆ ನೀಡಿದೆ.
ಈ ಬಗ್ಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಏರ್ ಟೆಲ್ ಪತ್ರವೊಂದನ್ನು ಬರೆದಿದ್ದು. ತನ್ನ ಪತ್ರದಲ್ಲಿ ಕೂಡಲೇ ಎಲ್ಲ ಗ್ರಾಹಕರ ಎಲ್ ಪಿಜಿ ಸಬ್ಸಿಡಿ ಮೊತ್ತವನ್ನು ಮೂಲ ಬ್ಯಾಂಕ್ ಖಾತೆಗಳಿದೆ ಮರು ವರ್ಗಾವಣೆ  ಮಾಡುವುದಾಗಿ ಹೇಳಿದೆ.
ಇನ್ನು ಈ ಹಿಂದೆ ಸುಮಾರು 37.21 ಲಕ್ಷ ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಸುಮಾರು 167.7 ಕೋಟಿ ರುಪಾಯಿ ಎಲ್ ಪಿಜಿ ಸಬ್ಸಿಡಿಯನ್ನು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖ್ಯಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರದ  ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಬಹಿರಂಗ ಪಡಿಸಿದ್ದರು. ನವೆಂಬರ್ ತಿಂಗಳ ಅಂತ್ಯದಲ್ಲಿ ಒಟ್ಟು 167.77 ಕೋಟಿ ರುಪಾಯಿ ಎಲ್ ಪಿಜಿ ಸಬ್ಸಿಡಿಯನ್ನು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು  37.21 ಲಕ್ಷ ಗ್ರಾಹಕರ ಖಾತೆಗೆ ಆ ಹಣ ಜಮೆ ಆಗಿದೆ ಎಂದು ಅವರು ಹೇಳಿದ್ದರು.
ಗ್ರಾಹಕರು ಮಾತ್ರವಲ್ಲದೇ ಸ್ವತಃ ಇಂಧನ ಸಂಸ್ಥೆಗಳಾದ ಹೆಚ್ ಪಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ ಪೆಟ್ರೋಲಿಯಂ ಸೇರಿದಂತೆ ಪ್ರಮುಖ ಪೆಟ್ರೋಲಿಯಂ ಸಂಸ್ಥೆಗಳಿಗೂ ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು,  ಈ ಬಗ್ಗೆ ಪೆಟ್ರೋಲಿಯಂ ಸಂಸ್ಥೆಗಳು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಮಾಹಿತಿ ನೀಡಿದ್ದವು. 
ಇದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ, ಆಧಾರ್ ಸಂಸ್ಥೆ ಹಾಗೂ ಬ್ಯಾಂಕ್ ಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಕಳೆದ ಶನಿವಾರವಷ್ಟೇ ಭಾರ್ತಿ ಏರ್ಟೆಲ್ ಮತ್ತು ಪೇಮೆಂಟ್ಸ್ ಬ್ಯಾಂಕ್ ನ ಆಧಾರ್ ಆಧಾರಿತ ಸಿಮ್  ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಾತ್ಕಾಲಿಕ ತಡೆ ನೀಡಿತ್ತು. ತನ್ನ ಗ್ರಾಹಕರಿಗೆ ಮಾಹಿತಿ ನೀಡದೆ ಭಾರ್ತಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿದೆ ಎಂಬ ಆರೋಪಗಳು  ಕೇಳಿಬಂದ ಹಿನ್ನೆಲೆಯಲ್ಲಿ ಯುಐಡಿಎಐ ಈ ಕ್ರಮ ತೆಗೆದುಕೊಂಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇ-ಕೆವೈಸಿ ಹಾಗೂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರ ಕೆವೈಸಿ ಪ್ರಕ್ರಿಯೆಯನ್ನು ಸ್ಥಗತಗೊಳಿಸುವಂತೆ ಸೂಚಿಸಿದೆ.
ಅಂತೆಯೇ ಆಧಾರ್‌ ಕಾಯ್ದೆ ಉಲ್ಲಂಘನೆ ಆರೋಪದ ಕುರಿತು ಭಾರ್ತಿ ಏರ್‌ಟೆಲ್‌ ವಿರುದ್ಧ ಪ್ರಾಧಿಕಾರ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು. ಮೊಬೈಲ್‌ ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಯನ್ನೇ ಬಳಸಿ ಗ್ರಾಹಕರಿಗೆ ಅರಿವಿಲ್ಲದಂತೆ  ಅವರ ಹೆಸರಿಗೆ ಪೇಮೆಂಟ್‌ ಬ್ಯಾಂಕ್‌ ಖಾತೆಗಳನ್ನು ತೆರೆಯುತ್ತಿರುವ ಬಗ್ಗೆ ದೂರು ನೀಡಲಾಗಿತ್ತು. ತಕ್ಷಣದಿಂದಲೇ ಈ ಅಕ್ರಮ ನಿಲ್ಲಿಸದಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾದೀತು ಎಂದು ಯುಐಡಿಎಐ ಭಾರ್ತಿ ಏರ್‌ಟೆಲ್‌ಗೆ  ಎಚ್ಚರಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com