ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಎರಡು ಹಂತಗಳಲ್ಲಿ ಮಾಡಲಾಗುವುದು. ಮೊದಲನೆಯದಾಗಿ ಫೆಬ್ರವರಿ 20ರಿಂದ ವಿತ್ ಡ್ರಾ ಮಿತಿ ವಾರಕ್ಕೆ 24,000ದಿಂದ 50,000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 8ರಂದು ನೋಟು ನಿಷೇಧದ ನಂತರ ದೇಶದಲ್ಲಿ ಹೊಸ 500 ಮತ್ತು 2000ದ ನೋಟುಗಳು ಸೇರಿ ಜನವರಿ 27 ಕ್ಕೆ ಒಟ್ಟು 9.92 ಲಕ್ಷ ಕೋಟಿ ರೂಪಾಯಿ ಕರೆನ್ಸಿ ಚಲಾವಣೆಯಲ್ಲಿದ್ದವು ಎಂದು ಹೇಳಿದ್ದಾರೆ.
ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಆಸ್ತಿಗಳ ಮೌಲ್ಯವನ್ನು ಶೀಘ್ರವಾಗಿ ಮತ್ತು ದಕ್ಷತೆಯಿಂದ ಬಗೆಹರಿಸಿದರೆ ನೀತಿ ದರಗಳು ಸಕಾಲದಲ್ಲಿ ಪ್ರಸರಣವಾಗಿ ಬ್ಯಾಂಕು ನೀಡುವ ಸಾಲದ ಮೊತ್ತ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ದೃಢವಾಗಿದ್ದು ಕೆಲ ತಪ್ಪು ಘಟನೆಗಳಿಂದಾಗಿ ನ್ಯೂನತೆಗಳಿವೆ ಎಂದರು.
ಹೊಸ 2000 ಮತ್ತು 500ರ ನೋಟುಗಳು ನಕಲು ಮಾಡಲು ಕಷ್ಟ, ಅದರ ಛಾಯಾಪ್ರತಿ ಸಿಗಬಹುದಷ್ಟೆ ಎಂದು ಹೇಳಿದರು.
2016-17ನೇ ಸಾಲಿನ ಹಣಕಾಸು ವರ್ಷದ ಕೊನೆ ಮಾರ್ಚ್ ತಿಂಗಳಿನಲ್ಲಿ ಶೇಕಡಾ 6.9 ಬೆಳವಣಿಗೆಯ ನಿರೀಕ್ಷೆಯಿದೆ ಎಂದು ಅವರು ಹೇಳಿದರು.ನಿಯಮಗಳ ಜಾರಿಗೆ ಪ್ರತ್ಯೇಕ ಜಾರಿ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.