
ನವದೆಹಲಿ: ವಿಶ್ವದ ಅತ್ಯಂತ ಕಡಿಮೆ ಬೆಲೆ ಸ್ಮಾರ್ಟ್ ಫೋನ್ ಎಂದೇ ಖ್ಯಾತಿಗಳಿಸಿದ ಫ್ರೀಡಂ 251 ಮೊಬೈಲ್ ತಯಾರಿಕೆ ಕುರಿತು ಇತ್ತೀಚೆಗೆ ಯಾವುದೇ ಸುದ್ದಿಗಳಿಲ್ಲ. ಇದೀಗ ಈ ಫೋನ್ ತಯಾರಿಕೆ ಕುರಿತು ಮಾಹಿತಿ ಆರಿಸಿ ಹೊರಟಾಗ ತಿಳಿದುಬಂದ ವಿಚಾರಗಳು ಗ್ರಾಹಕರಿಗೆ ಖಂಡಿತಾ ನಿರಾಸೆ ಮೂಡಿಸುತ್ತದೆ.
ನೋಯ್ಡಾ ಮೂಲದ ಸಂಸ್ಥೆಯೊಂದು ಕೇವಲ 251 ರು.ಗೆ ಸ್ಮಾರ್ಟ್ ಫೋನ್ ಮಾರಾಟ ಮಾಡುವುದಾಗಿ ಹೇಳಿ ವಿಶ್ವಾದ್ಯಂತ ಭಾರಿ ಪ್ರಚಾರ ಪಡೆದುಕೊಂಡಿತ್ತು. ಆದರೆ ಈ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಅಗ್ಗದ ಸ್ಮಾರ್ಟ್ ಫೋನ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಗ್ಗದ ದರದ ಫೋನ್ ಮಾರಾಟ ಪ್ರಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಫೋನ್ ಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದರು. ಆದರೆ ಬಳಿಕದ ದಿನಗಳಲ್ಲಿ ಸಂಸ್ಥೆ ಗ್ರಾಹಕರಿಗೆ ಫೋನ್ ಮಾರಾಟ ಮಾಡಿದ ಕುರಿತು ಯಾವುದೇ ಸುದ್ದಿ ನೀಡಿಲ್ಲ. ಫೋನ್ ಆಶ್ವಾಸನೆಯೇ ಈಡೇರಿರಲಿಲ್ಲ ಅದಾಗಲೇ ಇದೇ ಸಂಸ್ಥೆ ಮತ್ತೊಂದು ಘೋಷಣೆ ಮೂಲಕ ಸುದ್ದಿಗೆ ಗ್ರಾಸವಾಗಿತ್ತು, ಸ್ಮಾರ್ಟ್ ಫೋನ್ ಬೆನ್ನಲ್ಲೇ ಅಗ್ಗದ ದರದ ಸ್ಮಾರ್ಟ್ ಟಿವಿಗಳನ್ನು ಕೂಡ ತಯಾರಿಸುವುದಾಗಿ ಹೇಳಿ ಸಂಸ್ಥೆ ಮತ್ತೆ ಪುಕ್ಕಟೆ ಪ್ರಚಾರ ಪಡೆದಿತ್ತು.
ಇನ್ನು ಈ ಹಿಂದೆ ತಾನು ಜುಲೈ ಕಳೆದ ಅಂತ್ಯದ ವೇಳೆಗೆ 5 ಸಾವಿರ ಫೋನ್ ಗಳನ್ನು ವಿತರಣೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಅಂತೆಯೇ ಮತ್ತಷ್ಟು ಫೋನ್ ಗಳನ್ನು ವಿತರಣೆ ಮಾಡುವುದಾಗಿಯೂ ಸುಮಾರು 65 ಸಾವಿರ ಬುಕ್ಕಿಂಗ್ ಗಳು ಕ್ಯಾಶ್ ಆನ್ ಡೆಲಿವರಿ ಮೋಡ್ ನಲ್ಲಿದ್ದು, ಇವುಗಳನ್ನೂ ಶೀಘ್ರ ಪೂರೈಕೆ ಮಾಡುವುದಾಗಿ ಹೇಳಿತ್ತು. ಈ ಘೋಷಣೆಗಳಾಗಿ ವರ್ಷವೇ ಕಳೆದರೂ ಘೋಷಣೆ ಈಡೇರಿದ ಯಾವುದೇ ಸುದ್ದಿಗಳಲ್ಲಿ.
ಇನ್ನು ಸಂಸ್ಥೆಯ ಈ ನಡೆಯನ್ನು ತಂತ್ರಜ್ಞಾನ ವಲಯದ ದೊಡ್ಡ ನಿರಾಶೆ ಎಂದು ತಜ್ಞರು ಬಣ್ಣಿ ಸಿದ್ದಾರೆ. ತಂತ್ರಜ್ಞಾನ ತಜ್ಞರ ಪ್ರಕಾರ ಕನಿಷ್ಠ 2000 ರು.ಗಳೊಳಗೆ ಯಾವುದೇ ರೀತಿಯ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲು ಸಾಧ್ಯವೇ ಇಲ್ಲವಂತೆ. ಆದರೂ ಸಂಸ್ಥೆ ಘೋಷಣೆ ಮಾಡಿದಾಗ ನಂಬಿದವರ ಪೈಕಿ ನಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತೆಯೇ ಅಗ್ಗದ ದರದ ಸ್ಮಾರ್ಟ್ ಫೋನ್ ಹೇಗಿರಬಹುದು ಎಂಬ ಕುತೂಹಲದಿಂದಾಗಿ ಅಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್ ಗಾಗಿ ಆನ್ ಲೈನ್ ಅರ್ಜಿ ತುಂಬಿದ್ದರು. ಡಿಜಿಟಲ್ ಲೋಕದ ಅತ್ಯಂತ ದೊಡ್ಡ ಮೋಸ ಇದು... ಎಂದು ಸೈಬರ್ ಮೀಡಿಯಾ ಸಂಶೋಧಕ ಫೈಸಲ್ ಕಾವೂಸ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಸಂಸ್ಥೆಯ ವಕ್ತಾರರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು, ಸಂಸ್ಥೆಯ ವಸ್ತುಗಳನ್ನು ವಿತರಣೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ದೇಶಾದ್ಯಂತ 200 ಜಿಲ್ಲೆಗಳಲ್ಲಿ 230 ವಿತರಕರನ್ನು ದೇಶಾದ್ಯಂತ ನೇಮಿಸಿಕೊಳ್ಳಲಾಗಿದ್ದು, ಸಂಸ್ಥೆಯ ವಸ್ತುಗಳನ್ನು ಮಾರಾಟ ಮಾಡಲು ಕ್ರಮ ಕೈಗೊಂಡಿದ್ದೇವೆ. ಸಂಸ್ಥೆ ಅಗ್ಗದ ದರದ ಮೊಬೈಲ್ ಘೋಷಣೆ ಮಾಡಿದ ಬಳಿಕ ಸುಮಾರು ಒಂದೂವರೆ ಲಕ್ಷ ವಸ್ತುಗಳನ್ನು ಮಾರಾಟ ಮಾಡಿದ್ದೇವೆ. ಇನ್ನೂಶೇ.25 ರಷ್ಟು ಬೇಡಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ವಸ್ತುಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಮ್ಮ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಸರ್ಕಾರವೇ ಅಗ್ಗದ ದರದಲ್ಲಿ ಮೊಬೈಲ್ ತಯಾರಿಸಬಹುದು. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಭವಿಷ್ಯದಲ್ಲಿ ಭಾರತದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಸಾಮಾಜಿಕ ಜಾಲತಾಣ, ವಿಡಿಯೋ ವೀಕ್ಷಣೆಗೆ ಜನರು ಸ್ಮಾರ್ಟ್ ಫೋನ್ ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಹೀಗಾಗಿ ನಮ್ಮ ಯೋಜನೆ ಸರ್ಕಾರಕ್ಕೆ ಸಹಕಾರಿಯಾಗಲಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥೆಯ ಸಿಇಎ ಗೋಯೆಲ್ ಹೇಳಿದ್ದಾರೆ.
ಒಟ್ಟಾರೆ ತಜ್ಞರು ಅಭಿಪ್ರಾಯಪಟ್ಟಿರುವಂತೆ ಅಗ್ಗದ ಸ್ಮಾರ್ಟ್ ಫೋನ್ ಆಸೆ ತೋರಿಸಿದ ರಿಂಗಿಂಗ್ ಬೆಲ್ಸ್ ಸಂಸ್ಥೆಯ ಆಶ್ವಾಸನೆಗಳು, ಆಶ್ವಾಸನೆಯಾಗಿಯೇ ಮುಂದುವರೆಯಲಿದೆ. ಸಂಸ್ಥೆ ತನ್ನ ಆಶ್ವಾಸನೆ ಈಡೇರಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಇದು ಟೆಕ್ ಲೋಕದ ಅತ್ಯಂತ ದೊಡ್ಡ ಮೋಸ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement