ಸಬ್ಸಿಡಿಯ ನೇರ ವರ್ಗಾವಣೆ ಪ್ರಭಾವ, 3 ವರ್ಷಗಳಲ್ಲಿ 50 ಸಾವಿರ ಕೋಟಿ ಉಳಿತಾಯ!

ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡುವ ಕ್ರಮವನ್ನು ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು 3 ವರ್ಷಗಳಲ್ಲಿ ದಾಖಲೆಯ 50 ಸಾವಿರ ಕೋಟಿ ರೂ ಹಣವನ್ನು ಉಳಿತಾಯ ಮಾಡಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡುವ ಕ್ರಮವನ್ನು ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು 3 ವರ್ಷಗಳಲ್ಲಿ ದಾಖಲೆಯ 50 ಸಾವಿರ ಕೋಟಿ ರೂ ಹಣವನ್ನು ಉಳಿತಾಯ ಮಾಡಿದೆ. ಈ ಮೊತ್ತ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೊಡಲಾಗುವ ಸಬ್ಸಿಡಿಯ ಒಟ್ಟು ಮೊತ್ತಕ್ಕೆ ಸಮನಾಗಿದ್ದು, ಬೃಹತ್ ಪ್ರಮಾಣದಲ್ಲಿ ಸಬ್ಸಿಡಿ ಸೋರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಡೆಗಟ್ಟಿದೆ. 
ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಡಿ.31, 2016 ರ ವರೆಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದ್ದು, ನಕಲಿ ಫಲಾನುಭವಿಗಳಿಗೆ ಹೋಗುತ್ತಿದ್ದ, ಮಧ್ಯವರ್ತಿಗಳ ಕೈ ಸೇರುತ್ತಿದ್ದ ಹಣವನ್ನು ತಡೆಗಟ್ಟಿರುವುದರಿಂದ  ಒಂದು ವರ್ಷದ ಸಬ್ಸಿಡಿ ಮೊತ್ತವನ್ನು ಉಳಿತಾಯ ಮಾಡಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಕೇಂದ್ರ ಸರ್ಕಾರದಿಂದ ಸಬ್ಸಿಡಿ ಪಾವತಿಯಾಗುವ ಒಟ್ಟು 533 ಯೋಜನೆಗಳ ಪೈಕಿ 17 ಸಚಿವಾಲಯಗಳ 84 ಯೋಜನೆಗಳ ಸಬ್ಸಿಡಿಯನ್ನು ನೇರ ವರ್ಗಾವಣೆ ವ್ಯವಸ್ಥೆಯಡಿ ಪಾವತಿ ಮಾಡಲಾಗುತ್ತಿದೆ. 2018 ರ ಮಾರ್ಚ್ 31 ರ ವೇಳೆಗೆ 64 ಸಚಿವಾಲಯಗಳ ಯೋಜನೆಗಳ ಸಬ್ಸಿಡಿಯನ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆಗೆ ಒಳಪಡಿಸಲಾಗುವುದರಿಂದ ಮುಂದಿನ ವರ್ಷ ಉಳಿತಾಯ ಮತ್ತಷ್ಟು ಹೆಚ್ಚಲಿದೆ. 
"ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಲಕ್ಷ ಕೋಟಿಗಳಷ್ಟು ಹಗರಣಗಳು ನಡೆಯುತ್ತಿದ್ದವು. ಆದರೆ ಈಗ ಯಾವುದೇ ಹಗರಣಗಳು ನಡೆಯುತ್ತಿಲ್ಲ. ನಿಜವಾದ ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುವುದರಿಂದ ನಕಲಿ ಫಲಾನುಭವಿಗಳಿಗೆ ಹೋಗುತ್ತಿದ್ದ ಹಣವನ್ನು ಸಂಪೂರ್ಣ ಬಂದ್ ಮಾಡಾಲಾಗಿದೆ ವಿವಿಧ ಯೋಜನೆಗಳ ವ್ಯಾಪ್ತಿಯಲ್ಲಿ ಒಟ್ಟು 33 ಕೋಟಿ ಜನರು ಸಬ್ಸಿಡಿ ಪಡೆಯುತ್ತಿದ್ದಾರೆ" ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದನ್ನು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com