ಬ್ರಿಟನ್ ರಿಸೆಶನ್ ಗೆ ಸದ್ಯಕ್ಕಿಲ್ಲ ಸಲ್ಯೂಷನ್ !

ಇತ್ತೀಚಿಗೆ ಬ್ರಿಟನ್ ಹಣಕಾಸು ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮಾತು 'ಬ್ರಿಟನ್ ಆರ್ಥಿಕವಾಗಿ ಕುಸಿದಿದೆ, ರಿಸೆಶನ್ ನಲ್ಲಿದೆ' ಎಂದು ಧೈರ್ಯವಾಗಿ ಪ್ರಥಮವಾಗಿ ಹೇಳುವ ಆರ್ಥಿಕ ತಜ್ಞ ಯಾರು?ಎನ್ನುವುದು.
ರಿಸೆಶನ್
ರಿಸೆಶನ್
ಬ್ರೆಕ್ಸಿಟ್ ಎನ್ನುವ ಪದ ಇಂದಿನ ದಿನಗಳಲ್ಲಿ ಕೇಳದೆ ಇರುವರಾರು? ಯೂರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರಹೋಗುವ ಪ್ರಕ್ರಿಯೆಯೆಗೆ 'ಬ್ರೆಕ್ಸಿಟ್ ' ಎಂದು ಹೆಸರಿಸಿದ್ದಾರೆ. ಇದೀಗ ಬ್ರಿಟನ್ ಯುರೋ ಜೋನ್ ನಿಂದ ಹೊರಹೋಗುವುದು ಸ್ಪಷ್ಟವಾಗಿದೆ.
ಮಾರ್ಚ್ 2019 ರಲ್ಲಿ ಬ್ರಿಟನ್ ಯುರೋ ಜೋನ್ ನಿಂದ ಬೇರ್ಪಡಲಿದೆ ಥೆರೆಸಾ ಮೇ ಸರಕಾರ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳ ಮಾಡಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿರತ್ತಿರ ಇಪ್ಪತ್ತು ಅಂಶ ಬ್ರಿಟನ್ ಕರೆನ್ಸಿ ಕುಸಿತ ಕಂಡಿದೆ. ಇದು ಇನ್ನಷ್ಟು ಹೆಚ್ಚಾಗಲಿದೆ. ಬ್ರಿಟನ್ ನಲ್ಲಿ  ಯಾವಾಗಲೂ ಮೋಡ ಮುಸುಕಿದ ವಾತಾವರಣ ಇರುತ್ತದೆ. ಜನ ಅದಕ್ಕೆ ಒಗ್ಗಿಕೊಂಡಿದ್ದಾರೆ ಆದರೆ ಹಣಕಾಸಿನ ಕಾರ್ಮೋಡ ಅವರನ್ನ ಭಾದಿಸುತ್ತಿದೆ. ಇತ್ತೀಚಿಗೆ ಬ್ರಿಟನ್ ಹಣಕಾಸು ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮಾತು 'ಬ್ರಿಟನ್ ಆರ್ಥಿಕವಾಗಿ ಕುಸಿದಿದೆ, ರಿಸೆಶನ್ ನಲ್ಲಿದೆ' ಎಂದು ಧೈರ್ಯವಾಗಿ ಪ್ರಥಮವಾಗಿ ಹೇಳುವ ಆರ್ಥಿಕ ತಜ್ಞ ಯಾರು?ಎನ್ನುವುದು.
ಅಂದರೆ ಇದರರ್ಥ ಇಷ್ಟೇ ಎಲ್ಲರಿಗೂ ಸತ್ಯದ ಅರಿವಿದೆ ಆದರೆ ಯಾರೂ ಅದನ್ನ ಬಾಯಿ ಬಿಟ್ಟು ಹೇಳಲು ತಯಾರಿಲ್ಲ. ಈ ವರ್ಷ ಬ್ರಿಟನ್ ಯುರೋ ಜೋನ್ ನಲ್ಲಿ ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆಯ ದೇಶವಾಗಿದೆ. ಗ್ರೀಸ್ ಮತ್ತು ಪೋರ್ಚುಗಲ್ ಹಣಕಾಸು ಸ್ಥಿತಿ ಅರಿವಿರುವರಿಗೆ ಈ ವಿಷಯ ಕೇಳಿ ಆಶ್ಚರ್ಯವಾಗಬಹದು. ಆದರಿದು ನಿಜ. ಅಂದರೆ ಬ್ರಿಟನ್ ಆರ್ಥಿಕತೆ ಇನ್ನೆಷ್ಟು ಹದಗೆಟ್ಟಿರಬಹದು ನೀವೇ ಊಹಿಸಿಕೊಳ್ಳಿ. 
28 ದೇಶಗಳ ಒಕ್ಕೊಟ ಯೂರೋಪಿಯನ್ ಯೂನಿಯನ್, ಬ್ರಿಟನ್ ಈ ಯೂನಿಯನ್ ನ ಸದಸ್ಯ ರಾಷ್ಟ್ರವಾಗಿತ್ತು. ಇಂದು ಒಕ್ಕೊಟದ ಸದಸ್ಯ ಬಲ 27 ಕ್ಕೆ ಇಳಿದಿದೆ.  ಹಾಗೆ ನೋಡಿದರೆ ಬ್ರಿಟನ್ ಎಂದೂ ಪೂರ್ಣವಾಗಿ ಯೂರೋಪಿಯನ್ ಯೂನಿಯನ್ ನಲ್ಲಿ ಬೆರೆತಿತ್ತು ಎಂದು ಹೇಳಲು ಆಗದು ಅದಕ್ಕೆ ಕಾರಣ ಅದು 'ಯುರೋ ' ಕರೆನ್ಸಿ ಒಪ್ಪದೇ ತನ್ನ 'ಪೌಂಡ್' ಕರೆನ್ಸಿ ಆಗಿ ಉಳಿಸಿಕೊಂಡದ್ದು . ಅದಕ್ಕೆ ಅದು ಕೊಟ್ಟ ಕಾರಣ 'ಟ್ರಡಿಶನ್'. ಪೌಂಡ್ ಬಿಡಲು ಅದಕ್ಕೆ ತನ್ನ ಟ್ರಡಿಶನ್ ಅಡ್ಡಿ ಬಂದಿತು, ಇದು ಹೇಗೆಂದರೆ 'ನೆಂಟರ ಮೇಲೆ ಪ್ರೀತಿ ಅಕ್ಕಿಯ ಮೇಲೆ ಆಸೆ' ಎನ್ನುವ ತರದ್ದು. ಗಮನಿಸಿ ಉಳಿದೆಲ್ಲಾ ಸದಸ್ಯ ರಾಷ್ಟ್ರಗಳು ತಮ್ಮ ಮೂಲ ಕರೆನ್ಸಿ ಬಿಟ್ಟು 'ಯುರೋ' ವನ್ನು ತಮ್ಮ ಹೊಸ ಕರೆನ್ಸಿ ಎಂದು ಒಪ್ಪಿಕೊಂಡಿವೆ. 
ಯಾವುದೇ ಒಂದು ಒಕ್ಕೊಟಕ್ಕೆ ಸೇರ್ಪಡೆ ಆಗುವುದು ಸದಸ್ಯ ರಾಷ್ಟ್ರಗಳಲ್ಲಿ ಸಮ್ಮತಿ ಇಂದ ಉನ್ನತಿ ಕಡೆ ನೆಡೆಯಲು, ಬ್ರಿಟನ್ ಒಕ್ಕೊಟ ಸೇರಿದ ದಿನದಿಂದ ತನಗೇನು ಲಾಭ ಎಂದು ಯೋಚಿಸಿತೇ ಹೊರತು, ಹೇಗೆ ಒಂದು ಒಕ್ಕೊಟವಾಗಿ ಮುನ್ನೆಡೆಯಬಹದು ಎನ್ನುವದರ ಬಗ್ಗೆ ಅಲ್ಲವೇ ಅಲ್ಲ. ಹೀಗೆ ಎಷ್ಟು ದಿನ 'ಆಟಕುಂಟು ಲೆಕ್ಕಕ್ಕಿಲ್ಲ' ನೆಡೆದೀತು? ಇಷ್ಟೆಲ್ಲಾ ಏಕೆ ಹೇಳಬೇಕಾಯಿತು ಎಂದರೆ 'ಬ್ರೆಕ್ಸಿಟ್' ಒಂದು ದಿನದಲ್ಲಿ ಹುಟ್ಟಿದ ಕೂಗಲ್ಲ ಎನ್ನುವುದ ತಿಳಿಸಲು.
ಬ್ರಿಟನ್ ಯೂರೋಪಿಯನ್ ಒಕ್ಕೊಟದಿಂದ ಹೊರ ಹೋದರೆ ಕೆಲಸದ ಗತಿ ಏನು?  
ಒಬ್ಬ ಸಾಮಾನ್ಯ ನಾಗರಿಕನ ಮನಸ್ಸಿನಲ್ಲಿ ಮೊದಲು ಮೂಡುವ ಪ್ರಶ್ನೆ ಇದು. ಬ್ರಿಟನ್ ನಲ್ಲಿ 3 ಮಿಲಿಯನ್ ಕೆಲಸ ಸೃಷ್ಟಿ ಆಗಿರುವುದು ಯೂರೋಪಿಯನ್ ಯೂನಿಯನ್ ನೊಂದಿಗಿನ ವ್ಯಾಪಾರ ವಹಿವಾಟಿನಿಂದ. ಇದು ನೇರವಾಗಿ ಲೆಕ್ಕಕ್ಕೆ ಸಿಕ್ಕ ಅಂಕಿ-ಅಂಶ. ಅನೇಕ ಅರ್ಥಿಕ ತಜ್ಞರ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಒಂದೇ ದಿನದಲ್ಲಿ ಒಕ್ಕೋಟದ ಎಲ್ಲಾ ವ್ಯವಹಾರ ಕೊನೆಗೊಳುತ್ತದೆ ಎಂದಲ್ಲ ನಿಧಾನವಾಗಿಯಾದರೂ ಸರಿ ಕೆಲಸ ಕಡಿಮೆಯಾಗುವುದು ತಪ್ಪುವುದಿಲ್ಲ. ಹೊಸ ಕೆಲಸದ ಸೃಷ್ಟಿ ಬಹಳ ನಿಧಾನವಾಗಿ ಕೆಲಸದಿಂದ ಕೆಲಸಕ್ಕೆ ಜಿಗಿಯುವ ಅವಕಾಶ ಕಡಿಮೆಯಾಗುತ್ತದೆ. ಸಾಮಾನ್ಯ ನಾಗರಿಕ  ಹೊಸ  ಅವಕಾಶಗಳಿಂದ ವಂಚಿತನಾಗಿ ಇದ್ದದರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. 
ವಸ್ತುಗಳ ಬೆಲೆ ಏರಿಕೆ ಆಗುತ್ತದೆಯೇ? ಮುಖ್ಯವಾಗಿ ಆಹಾರ ಪದಾರ್ಥಗಳದ್ದು? 
ಇದು ಎರಡು ಅಲುಗಿನ ಕತ್ತಿಯಂತೆ ಏಕೆಂದರೆ ಹಲವು ಪದಾರ್ಥಗಳ ಮೇಲೆ ಯೂರೋಪಿಯನ್ ಯೂನಿಯನ್ ಹಾಕುತಿದ್ದ ತೆರಿಗೆ ಬ್ರಿಟನ್ ತೆರೆವು ಗೊಳಿಸಬಹುದು ಬೆಲೆ ಏರುವ ಬದಲು ಕಡಿಮೆ ಆಗಬಹುದು! ಆದರೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆದ ವಸ್ತುಗಳ ಕೊಳ್ಳಲು ಹಣವೇ ಇರದಿದ್ದರೆ ಏನು ಪ್ರಯೋಜನ? ಜನರ ಬಳಿ ಮಾಡಲು ಕೆಲಸವಿಲ್ಲದಿದ್ದರೆ, ಸಂಬಳ ಇರದಿದ್ದರೆ ಕಡಿಮೆ ಬೆಲೆ ಇದ್ದೂ ವ್ಯರ್ಥ. ಅಥವಾ ಹೆಚ್ಚಿದ ಖರ್ಚು ವೆಚ್ಚ ತೂಗಿಸಲು ಬ್ರಿಟನ್ ಸರಕಾರ ಹೊಸ ತೆರಿಗೆ ವಿಧಿಸಿದರೆ ಬೆಲೆಯೂ ಹೆಚ್ಚುತ್ತದೆ ಸಾಲದಕ್ಕೆ ಜನರ ಬಳಿ ಖರೀದಿಸುವ ಶಕ್ತಿಯೂ ಕುಗ್ಗುತ್ತದೆ. ಹೀಗಾದರೆ ಜನ ಸಾಮಾನ್ಯನ ಬದುಕು ಮತ್ತಷ್ಟು ಬಿಗಡಾಯಿಸುತ್ತದೆ. 
ಮನೆ ಖರೀದಿ ಅಥವಾ ಬಾಡಿಗೆ ಏನಾಗಬಹುದು? 
ಆಕಸ್ಮಾತ್ ಬ್ರಿಟನ್ ಒಕ್ಕೊಟದಿಂದ  ಹೊರ ನಡೆದರೆ 10 ರಿಂದ 18 ಪ್ರತಿಶತ ಮನೆಯ ಬೆಲೆ ಇಳಿಯುವ ಸಾಧ್ಯತೆ ಇದೆ, ಆದರೆ ಇದರ ಲಾಭ ಗ್ರಾಹಕನಿಗೆ ಆಗುವ ಸಾಧ್ಯತೆ ತೀರಾ ಕಡಿಮೆ, ಹೆಚ್ಚಿದ ಹಣದುಬ್ಬರ ಮನೆಯ ಮೇಲಿನ ಸಾಲದ ಮೇಲೆ ಕಟ್ಟುವ ಬಡ್ಡಿ ಹೆಚ್ಚಿಸುತ್ತದೆ. ಅಲ್ಲದೆ ಇಲ್ಲಿ ಇನ್ನೊಂದು ವಿಷಯವೂ ತಳುಕು ಹಾಕಿಕೊಂಡಿದೆ ಅದೇ ವಲಸೆ ನೀತಿ. ಒಕ್ಕೊಟದಿಂದ ಹೊರ ಹೋದ ನಂತರ ಬ್ರಿಟನ್ ಯಾವ ವಲಸೆ ನೀತಿ ಅನುಸರಿಸುತ್ತದೆ ಎನ್ನುವುದರ ಮೇಲೆ ಹೌಸಿಂಗ್ ಸೆಕ್ಟರ್ ಅಳಿವು ಉಳಿವು ನಿಂತಿದೆ. ಈಸ್ಟ್ರೇನ್ ಯೂರೋಪಿನ ಬಡ ದೇಶಗಳಿಂದ ಬಂದು ಬ್ರಿಟನ್ ಪೂರ ಆಕ್ರಮಿಸಿರುವ ವಲಸಿಗರಿಂದ ಮೂಲ ಬ್ರಿಟನ್ ನಿವಾಸಿ ಬೇಸತಿದ್ದಾನೆ. ಹಾಗೊಮ್ಮೆ ವಲಸಿಗರನ್ನ ಮರಳಿ ನಿಮ್ಮ ದೇಶಕ್ಕೆ ಹೋಗಿ ಎಂದರೆ ಮುಂಬರುವ ದಿನಗಳಲ್ಲಿ ಹೌಸಿಂಗ್ ಸೆಕ್ಟರ್ ನ ಭವಿಷ್ಯ ಮಂಕಾಗಲಿದೆ, ಇದು ಒಂದು ಸರಪಳಿ ಇದ್ದಂತೆ ಒಂದರ ಮೇಲೆ ಅದ ಪರಿಣಾಮ ಇನ್ನೊಂದಕ್ಕೆ ತಗಲುತ್ತದೆ.  ಈ ಚೈನ್ ರಿಯಾಕ್ಷನ್ ನಿಂದ ಡಿಮ್ಯಾಂಡ್ ಕಡಿಮೆ ಆಗುತ್ತದೆ. 
ವೈದ್ಯಕೀಯ ಸೌಲಬ್ಯ ದ ಕಥೆ ಏನು? 
ಯೂರೋಪಿಯನ್ ಒಕ್ಕೊಟದಿಂದ ಹೊರ ಬಂದರೆ ಯೂರೋಪಿಯನ್ ಯೂನಿಯನ್ ಗೆ ಕಟ್ಟುತಿದ್ದ ಸದಸ್ಯ  ಶುಲ್ಕ 8 ಬಿಲಿಯನ್ ಪೌಂಡ್ ಉಳಿತಾಯ ಮಾಡಬಹುದು ಹಾಗೂ ಇದನ್ನ ಶಿಕ್ಷಣ ಮತ್ತು ಆರೋಗ್ಯದಂತ ಮೂಲ ಸೌಕರ್ಯಗಳ ಒದಗಿಸಲು ಉಪಯೋಗಿಸಬಹುದು ಎನ್ನುವುದು ಮೇಲೆ ಕಾಣುವ ಅವಕಾಶ  ಆದರೆ ಬ್ರಿಟನ್ ಹಾಗು ಯೂರೋಪಿನ ಇತರ ಅರ್ಥ ಶಾಸ್ತ್ರಜ್ಞರ ಲೆಕ್ಕಾಚಾರವೇ ಬೇರೆ ಅವರ ಪ್ರಕಾರ ಉಳಿತಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತದೆ, ಹೇಗೆಂದರೆ, 2014 ರಲ್ಲಿ ಬ್ರಿಟನ್ ಆರ್ಥಿಕತೆ 1817 ಬಿಲಿಯನ್ ಪೌಂಡ್. ಬ್ರಿಟನ್ ಒಕ್ಕೋಟಕ್ಕೆ ಮೆಂಬರ್ ಶಿಪ್ ಫೀಸ್ ಕೊಡುವುದು, ಒಕ್ಕೋಟ ಬ್ರಿಟನ್ ಗೆ ಅಭಿವೃದ್ದಿಗೆ ಕೊಡುವ ಹಣ ಕಳೆದರೆ ಬ್ರಿಟನ್ ಜೇಬಿನಿಂದ ವಾರ್ಷಿಕ  8 ಬಿಲಿಯನ್ ಹೋಗುತ್ತದೆ, ಒಕ್ಕೋಟದಿಂದ ಹೊರ ಬಂದರೆ 0.4 ಪ್ರತಿಶತ ಉಳಿತಾಯ. ಆದರೆ ಒಕ್ಕೋಟ ಬ್ರಿಟನ್ ನೊಂದಿಗೆ ವ್ಯಾಪಾರ ವಹಿವಾಟು ಅರ್ಧದಷ್ಟು ಇಳಿಸಿದರೂ ಬ್ರಿಟನ್ ತೆರುವ ಬೆಲೆ ಉಳಿತಾಯಕ್ಕಿಂತ ಹಲವು ಪಟ್ಟು ಹೆಚ್ಚು. ನ್ಯಾಷನಲ್ ಹೆಲ್ತ್ ಸರ್ವಿಸ್(NHS ) ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ 5 ಪ್ರತಿಶತ ಯೂರೋಪಿನ ಇತರ ದೇಶದ ಪ್ರಜೆಗಳು ಇವರ ಕೆಲಸ ಬದುಕು ವಲಸೆ ನೀತಿ ಅವಲಂಬಿಸಿದೆ, ಒಕ್ಕೊಟದಿಂದ  ಹೊರ ಬಂದ ನಂತರ  ವಲಸೆ ನೀತಿ ಬದಲಾದರೆ, 5 ಪ್ರತಿಶತ ಸಿಬ್ಬಂದಿ ತಮ್ಮ ದೇಶಕ್ಕೆ ಮರಳಿದರೆ, ಹೆಲ್ತ್ ಸರ್ವಿಸ್ ನಲ್ಲಿ ಅಸಮತೋಲನ ಏರ್ಪಡುವುದು ತಪ್ಪಿಸಲಾಗುವುದಿಲ್ಲ. 
ವಲಸೆ ನೀತಿಯ ಗತಿ ಏನು?  
ಬ್ರಿಟನ್ ನಲ್ಲಿ ಸರಿ ಸುಮಾರು 3 ಮಿಲಿಯನ್ ಯೂರೋಪಿನ ಇತರ ದೇಶದ ಜನರು ವಾಸಿಸುತ್ತಿದ್ದಾರೆ. ಹಾಗೆಯೇ ಬ್ರಿಟನ್ ನಲ್ಲಿ ಜನಿಸಿದ 1.3 ಮಿಲಯನ್ ಬ್ರಿಟಿಷರು ಯೂರೋಪಿನ ಇತರ ದೇಶದಲ್ಲಿ ಬದುಕು ಕಂಡು ಕೊಂಡಿದ್ದಾರೆ. ಅಂದರೆ ಒಕ್ಕೊಟದಿಂದ ಹೊರ ಹೋಗುವ ನಿರ್ಧಾರ ಸರಿ ಸುಮಾರು 5 ಮಿಲಿಯನ್ ಬದುಕಲ್ಲಿ ತಲ್ಲಣ ತರಲಿದೆ. ಇಲ್ಲಿಯವರ ಅಲ್ಲಿಗೆ ವಾಪಸ್ಸು ಕಳಿಸುವುದು, ಅಲ್ಲಿನವರ ಇಲ್ಲಿಗೆ ಕರೆಸಿಕೊಳ್ಳುವುದು ಸುಲುಬದ ಮಾತಲ್ಲ.
ವ್ಯಾಪಾರ-ವಹಿವಾಟು ಹೇಳುವ ಕತೆಯೇನು ?
ಬ್ರಿಟನ್ ನಲ್ಲಿ ಉತ್ಪಾದಿಸಲಾಗುವ 45 ರಿಂದ 50 ಭಾಗ ವಸ್ತುಗಳ ಗ್ರಾಹಕ ಯೂರೋಪಿಯನ್ ಯೂನಿಯನ್! ಅಂದರೆ ಬ್ರಿಟನ್ ನ ಅರ್ಧ ದಷ್ಟು ಎಕ್ಸ್ಪೋರ್ಟ್ ಪಾಲುದಾರ ಒಕ್ಕೋಟದ ದೇಶಗಳು. ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಆಜುಬಾಜು ಅಷ್ಟೇ ಪ್ರಮಾಣದಲ್ಲಿ  ಆಮದು ಮಾಡಿಕೊಳ್ಳುತ್ತದೆ. ಇದು ಅಂಕಿ ಅಂಶ. ತೊರೆದು ಹೋದ ಸದಸ್ಯ ರಾಷ್ಟ್ರದೊಂದಿಗೆ ಒಕ್ಕೋಟ ವ್ಯವಹಾರ ಏಕೆ ನಡೆಸುತ್ತದೆ, ಒಮ್ಮೆಲೇ ಟ್ರೇಡ್ ಆಫ್ ಆಗುತ್ತದೆ ಅನ್ನುವ ಸಿನಿಕತೆ ಇಲ್ಲದಿದ್ದರೂ ಮೊದಲಿನ ಸುಲಲಿತ ಸಂಬಂಧ ಇರುತ್ತದೆಯೇ? ಎನ್ನುವುದು ಚಿಂತಿಸುವ ವಿಷಯ. ವ್ಯಾಪಾರ ವಹಿವಾಟು ಕುಸಿಯುವುದಂತೂ ದಿಟ. ಜರ್ಮನ್ bmw ಕಾರು ಉತ್ಪಾದಕ ಸಂಸ್ಥೆ ತನ್ನ ಎಲೆಕ್ಟ್ರಾನಿಕ್ ಕಾರುಗಳನ್ನ ಬ್ರಿಟನ್ ನಲ್ಲಿ ಉತ್ಪಾದನೆ ಮಾಡಲು ಆಸಕ್ತಿ ತೋರುತ್ತಿಲ್ಲ. ಬಜೆಟ್ ಏರ್ಲೈನ್ ರಯಾನ್ ಏರ್ ಬ್ರಿಟನ್ ನಿಂದ ಹೊರಹೋಗುವುದಾಗಿ ಆಗಲೇ ಹೇಳಿಕೆ ಕೊಟ್ಟಿದೆ. ಹಲವಾರು ಬ್ಯಾಂಕ್ಗಳು ಕೂಡ ಬ್ರಿಟನ್ ನಿಂದ ಹೊರಹೋಗಲು ಸಿದ್ಧತೆ ನೆಡೆಸುತ್ತಿವೆ. ಈ ಎಲ್ಲಾ ಕಾರಣಗಳಿಂದ ವ್ಯಾಪಾರ - ಕೆಲಸ ಎರಡೂ ಕುಸಿಯಲಿದೆ. 
ಬ್ರೆಕ್ಸಿಟ್  ಬ್ರಿಟನ್ ಮಟ್ಟಿಗಂತೂ ಒಳ್ಳೆಯದಲ್ಲ ಎನ್ನುವುದು ಸಾದೃಶ. ಇದರಿಂದ ಭಾರತದ ಮೇಲೆ ಆಗುವ ಪರಿಣಾಮ ಏನು? 
ಭಾರತದ ಮೇಲೆ  ಆಗುವ ತಾತ್ಕಾಲಿಕ ಪರಿಣಾಮ ' ಪೌಂಡ್ ' ಕರೆನ್ಸಿ ಯಲ್ಲಿ ಆಗುವ ಬದಲಾವಣೆ ನಾವು ಬ್ರಿಟನ್ ಗೆ ರಪ್ತು ಮಾಡುವುದಕಿಂತ ಅವರಿಂದ ಆಮದು ಮಾಡಿಕೊಳ್ಳುವುದು ಹೆಚ್ಚು . ವಿನಿಮಯ ವ್ಯತ್ಯಾಸ  ರಿಸೆರ್ವ್ ಫಂಡ್ಸ್ ಮತ್ತು ಟ್ರೇಡ್ ಫಂಡ್ಸ್ ಎರಡರ ಮೇಲೂ ಪರಿಣಾಮ ಬೀರಲಿದೆ. 
ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ಹೊಸ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೋಟದ ನಾಗರೀಕರು ಪ್ರಪಂಚದ ಇತರ ನಾಗರೀಕರು ಒಂದೇ ಎಂದು ಭಾವಿಸಿದಲ್ಲಿ  ಹೆಲ್ತ್ ಸೆಕ್ಟರ್ ನಲ್ಲಿ ಭಾರತೀಯರು ಹೆಚ್ಚು ಕೆಲಸ ಪಡೆಯುವ ಸಾಧ್ಯತೆ ಇದೆ. 
ಹಲವು ಬ್ರಿಟನ್ ಅರ್ಥ ಶಾಸ್ತ್ರಜ್ಞರ ಪ್ರಕಾರ ಬ್ರಿಟನ್ ಭಾರತದೊಂದಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಲು EU ಒಂದು ಕಂಟಕ , ಒಕ್ಕೋಟದಿಂದ ಹೊರ ಬಂದ ನಂತರ ಬ್ರಿಟನ್ ಮತ್ತು ಭಾರತದ ಭಾಂದವ್ಯ ಇನ್ನಷ್ಟು ಹೆಚ್ಚಲಿದೆ . ಮೂರು ಮಿಲಿಯನ್ ಮೀರಿದ ಭಾರತೀಯ ಮೂಲದ ಬ್ರಿಟಿಷರು ಭಾರತದೊಂದಿಗೆ ಹೆಚ್ಚು ವ್ಯವಹರಿಸಲು ಉತ್ಸುಕರಾಗಿದ್ದಾರೆ .ಬಹಳಷ್ಟು ವ್ಯವಹಾರ ಒಪ್ಪಂದಗಳು ಯುರೋಪಿಯನ್ ಯೂನಿಯನ್ ಜೊತೆಗಿದೆ ,  ಬ್ರೆಕ್ಸಿಟ್ ನಂತರ ನಾವು ಭಾರತ ದೊಂದಿಗೆ ಹೆಚ್ಚಿನ ವ್ಯಾಪಾರ ಮಾಡುತ್ತೇವೆ ಎನ್ನುವುದು ಬ್ರಿಟನ್ ನಿಲುವು , ಭಾರತ ಒಂದೇ ಅಲ್ಲದೆ ಉಳಿದ ಕಾಮನ್ವೆಲ್ತ್ ದೇಶಗಳ ಸಹಾಯ ಪಡೆಯುವ ಉದ್ದೇಶ ಕೂಡ ಬ್ರಿಟನ್ ಸರಕಾರದ್ದು . ಒಂದು ಕಾಲದಲ್ಲಿ ತಾನು ರಾಜ್ಯಭಾರ ಮಾಡಿದ ದೇಶಗಳು ನನ್ನ ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯೆ ? ಅಥವಾ ಕುಸಿದ ಪೌಂಡ್ ಬೆಲೆ ಸಹಜವಾಗೇ ಈ ದೇಶಗಳಿಗೆ ಲಾಭದಾಯಕ ಹಾಗಾಗಿ ನಮ್ಮೊಂದಿಗೆ ವ್ಯಾಪಾರ ಮಾಡುತ್ತಾರೆ ಎನ್ನುವ ವಿಶ್ವಾಸವೇ ? ಇವೆಲ್ಲಾ ಹಾಗಿರಲಿ ಸದ್ಯಕ್ಕಂತೂ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ? ಎನ್ನುವಂತೆ ಬ್ರಿಟನ್ ರಿಸೆಶನ್ ನಲ್ಲಿದೆ ಎಂದು ಧೈರ್ಯವಾಗಿ ಹೇಳುವ ಆರ್ಥಿಕ ತಜ್ಞ ಯಾರು ? ಎನ್ನುವ ಪ್ರಶ್ನೆ ಉತ್ತರಕ್ಕೆ ಗಿರಕಿ ಹೊಡೆಯುತ್ತಿದೆ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com