ಮಹಾ ಕುಸಿತ: ಐಟಿಸಿ ಷೇರು ಮೌಲ್ಯ ಕುಸಿತ, ಎಲ್ ಐಸಿಗೆ ಬರೊಬ್ಬರಿ 8 ಸಾವಿರ ಕೋಟಿ ನಷ್ಟ

ಸಿಗರೇಟ್ ಮೇಲಿನ ಸೆಸ್ ಹೆಚ್ಚಳ ವಿಚಾರ ಮಂಗಳವಾರ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು, ಕೇವಲ ಒಂದು ದಿನದಲ್ಲಿ ಎಲ್ ಐಸಿ ಸಂಸ್ಥೆ ಬರೊಬ್ಬರಿ 8150 ಕೋಟಿ ರು.ಗಳ ನಷ್ಟ ಅನುಭವಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಿಗರೇಟ್ ಮೇಲಿನ ಸೆಸ್ ಹೆಚ್ಚಳ ವಿಚಾರ ಮಂಗಳವಾರ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು, ಕೇವಲ ಒಂದು ದಿನದಲ್ಲಿ ಎಲ್ ಐಸಿ ಸಂಸ್ಥೆ ಬರೊಬ್ಬರಿ 8150 ಕೋಟಿ ರು.ಗಳ ನಷ್ಟ  ಅನುಭವಿಸಿದೆ.

ಈ ಹಿಂದೆ ಸತತ ಏರುಗತಿಯಲ್ಲಿ ಸಾಗಿ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಮಹಾಕುಸಿತಕ್ಕೆ ಸಾಕ್ಷಿಯಾಯಿತು. ಸಿಗರೇಟ್ ಮೇಲಿನ ಸೆಸ್ ಹೆಚ್ಚಳ ಕಾರಣಕ್ಕೆ ಐಟಿಸಿ ಕಂಪನಿಯ  ಷೇರುಗಳನ್ನು ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡಿದ್ದಾರೆ. ಪ್ರತಿ ಸಾವಿರ ಸಿಗರೇಟ್ ಮೇಲಿನ ಸೆಸ್ ಅನ್ನು 485 ರು.ನಿಂದ 792 ರು.ಗೆ ಏರಿಸುವುದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್  ಘೊಷಿಸಿದ ಬೆನ್ನಲ್ಲೇ ಮಂಗಳವಾರ ಷೇರುಪೇಟೆಯಲ್ಲಿ ಮಹಾ ಕುಸಿತ ಉಂಟಾಗಿದೆ. ಪರಿಣಾಮ ಖ್ಯಾತ ಸಿಗರೇಟ್ ಉತ್ಪಾದನಾ ಸಂಸ್ಥೆ ಐಟಿಸಿಯ ಷೇರು ಮೌಲ್ಯ ಪಾತಾಳಕ್ಕೆ ಇಳಿದಿದ್ದು, ಐಟಿಸಿ ಕಂಪನಿಯ ಷೇರು ಮೌಲ್ಯ ಶೇ.15ರ  ವರೆಗೂ ಕುಸಿದಿದೆ. ಕಂಪನಿಯ ಒಟ್ಟು ಮೌಲ್ಯದಲ್ಲಿ 60 ಸಾವಿರ ಕೋಟಿ ರು. ಇಳಿಕೆ ಕಂಡುಬಂದಿದ್ದು, ಈ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದ್ದ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ)ಗೆ ಒಂದೇ ದಿನದಲ್ಲಿ ಬರೋಬ್ಬರಿ 8  ಸಾವಿರ ಕೋಟಿ ರು. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಎಲ್​ಐಸಿಯ ಯೂನಿಟ್ ಲಿಂಕ್ಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಗ್ರಾಹಕರಿಗೆ ಇದರ ಬಿಸಿ ತಟ್ಟುವ ಸಾಧ್ಯತೆಯಿದ್ದು, ಅಲ್ಪಾವಧಿಯಲ್ಲಿ ಲಾಭಾಂಶದಲ್ಲಿ ಇಳಿಕೆ ಕಂಡುಬರುವುದು ಬಹುತೇಕ ಖಚಿತವಾಗಿದೆ. ಜೂನ್ 30ರ ವೇಳೆಗೆ  ಐಟಿಸಿಯ ಶೇ. 16.29 ಷೇರುಗಳನ್ನು ಎಲ್​ಐಸಿ ಹೊಂದಿತ್ತು. ಪ್ರಸ್ತುತ ಐಟಿಸಿ ಷೇರುಮೌಲ್ಯ ಕುಸಿತದಿಂದಾಗಿ ಎಲ್​ಐಸಿ ಸುಮಾರು 8 ಸಾವಿರ ಕೋಟಿ ರು. ನಷ್ಟ ಅನುಭವಿಸಿದಂತಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ  ದೀರ್ಘಾವಧಿಯಲ್ಲಿ ಕಂಪನಿಯ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಲ್ಲಿ ಈ ನಷ್ಟ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಐಟಿಸಿ ಷೇರಿನ ಮೌಲ್ಯ 40.45 ರೂ. ಕುಸಿತ ಕಂಡು 284. 70 ರು.ನಲ್ಲಿ ನಿಂತಿತ್ತು. ಇದೇ ವೇಳೆ ಸೆನ್ಸೆಕ್ಸ್ 363. 79 ಅಂಕ ಕಳೆದುಕೊಳ್ಳುವ ಮೂಲಕ ವರ್ಷದ ಅತಿದೊಡ್ಡ ಕುಸಿತ ದಾಖಲಿಸಿತು.  ಹೂಡಿಕೆದಾರರಲ್ಲಿ ಭಾರಿ ಭರವಸೆ ಮೂಡಿಸಿದ್ದ ನಿಫ್ಟಿ 9900ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ನಿಫ್ಟಿ 88.80 ಅಂಕ ಇಳಿಕೆ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com