ಆದಾಯ ತೆರಿಗೆ ಸಲ್ಲಿಕೆ: ಆಗಸ್ಟ್ 5ರ ವರೆಗೂ ಗಡುವು ವಿಸ್ತರಣೆ!
ನವದೆಹಲಿ: ಪ್ರಸಕ್ತ ಸಾಲಿನ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಈ ಹಿಂದೆ ವಿಧಿಸಿದ್ದ ಕಾಲಮಿತಿಯನ್ನು ಪರಿಷ್ಕರಿಸಿದ್ದು, ಜುಲೈ 31ಕ್ಕೆ ಕೊನೆಯಗಬೇಕಿದ್ದ ಗಡುವನ್ನು ಆಗಸ್ಟ್ 5ರವರೆಗೆ ವಿಸ್ತರಣೆ ಮಾಡಿದೆ.
ಕೇಂದ್ರ ಸರ್ಕಾರದ ಈ ಹಿಂದಿನ ನಿರ್ದೇಶನದಂತೆ ಇದೇ ಜುಲೈ 31 ಅಂದರೆ ಇಂದಿಗೆ ಆದಾಯ ತೆರಿಗೆ ಸಲ್ಲಿಕೆಯ ಅಂತಿಮ ಗಡುವು ಮುಕ್ತಾಯವಾಗಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ತೆರಿಗೆ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಗಡುವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಂತೆ ಈಗಿರುವ ಜುಲೈ 31ರ ಗಡುವನ್ನು ಆಗಸ್ಟ್ 5 ರವೆಗೂ ವಿಸ್ತರಣೆ ಮಾಡಿದೆ ಎಂದು ತಿಳಿದುಬಂದಿದೆ.
ಕೇಂದ್ರ ವಿತ್ತ ಇಲಾಖೆಯ ಮೂಲಗಳ ಪ್ರಕಾರ ಈ ವರೆಗೂ ಇ-ಫಿಲಿಂಗ್ ಮೂಲಕ ಸುಮಾರು 2ಕೋಟಿ ಆದಾಯ ತೆರಿಗೆ ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ ಪ್ರಸಕ್ತ ಸಾಲಿನ ಆದಾಯ ತೆರಿಗೆ ಪಾವತಿ ಸಂದರ್ಭದಲ್ಲಿ ಗ್ರಾಹಕರು ಸಾಕಷ್ಟು ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಬಹುಶಃ ಇದು ಆದಾಯ ತೆರಿಗೆ ಸಂಗ್ರಹದ ವಿಳಂಬಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಿಎಸ್ ಟಿ ಮತ್ತು ಹೊಸ ವಿಧಾನದ ತೆರಿಗೆ ಪಾವತಿ ಕ್ರಮಗಳೂ ಕೂಡ ಆದಾಯ ತೆರಿಗೆ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇ-ಫಿಲ್ಲಿಂಗ್ ವೆಬ್ ಸೈಟ್ ನಲ್ಲಿನ ತಾಂತ್ರಿಕ ಅಡಚಣೆಗಳ ಕುರಿತಾಗಿಯೂ ಸಾಕಷ್ಟು ತೆರಿಗೆದಾರರು ಈ ಹಿಂದೆ ದೂರಿದ್ದರು.
ಇನ್ನು ಪ್ಯಾನ್ ಕಾರ್ಡ್-ಆಧಾರ್ ಜೋಡಣೆ ಪ್ರಕ್ರಿಯೆಯಲ್ಲೂ ವಿಳಂಬವಾಗಿದ್ದು, ಜುಲೈ 1ರಿಂದಲೇ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್-ಆಧಾರ್ ಜೋಡಣೆ ಕಡ್ಡಾಯಗೊಳಿಸಿತ್ತು. ಹೀಗಿದ್ದೂ ಈ ವರೆಗೂ ಕೇವಲ ಶೇ.45ರಷ್ಟು ತೆರಿಗೆ ಪಾವತಿದಾರರು ಮಾತ್ರ ತಮ್ಮ ಆಧಾರ್-ಪ್ಯಾನ್ ಜೋಡಣೆ ಮಾಡಿದ್ದಾರೆ. ಆದರೆ ತೆರಿಗೆ ಪಾವತಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದೆ. ಅಂತೆಯೇ ಅಸ್ಸಾಂ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕೂಡ ತೆರಿಗೆ ಪಾವತಿದಾರರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತೆರಿಗೆ ಪಾವತಿಯ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿದೆ ಎಂದು ಹೇಳಲಾಗುತ್ತಿದೆ.
ನೋಟು ನಿಷೇಧ ಬಳಿಕ 2 ಲಕ್ಷಕ್ಕೂ ಅಧಿಕ ಠೇವಣಿ ಮಾಡಿದವರಿಂದ ವಿವರ
ಇದೇ ವೇಳೆ ನೋಟು ನಿಷೇಧದ ಬಳಿಕ ಬ್ಯಾಂಕ್ ಗಳಿಗೆ 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಠೇವಣಿ ಮಾಡಿದ ತೆರಿಗೆ ಪಾವತಿದಾರರಿಂದ ಠೇವಣಿ ಕುರಿತ ಮಾಹಿತಿ ಕೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ