ಯೂರೋಪಿನಲ್ಲಿ ಹಳ್ಳಿಗಳು ಮಾರಾಟಕ್ಕಿವೆ! ಕಾರಣ ಗೊತ್ತಿದೆಯೆ ?

ನಮ್ಮ ಹಳ್ಳಿಗಳಲ್ಲಿ ಇರುವ ಸಮಸ್ಯೆಗಳ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಇಲ್ಲಿಂದ ಅತ್ಯಂತ ಸುಂದರವಾಗಿ ಕಾಣುವ ಯೂರೋಪಿನ ಕಥೆಯೇನು? ಅವರೇನು ಬಿನ್ನರೆ? ಅಲ್ಲಿನ ಹಳ್ಳಿಗಳ, ಅಲ್ಲಿನ..
ಯುರೋಪ್ ಹಳ್ಳಿ
ಯುರೋಪ್ ಹಳ್ಳಿ
ನಾವು ಹುಟ್ಟಿ ಬೆಳೆದ ಹಳ್ಳಿ ಇಂದು ನಮಗೂ ಬೇಡ ಎನ್ನುವ ಸ್ಥಿತಿಗೆ ಬಂದಿದೆ. ಹಳ್ಳಿ ಎಂದ ತಕ್ಷಣ ಮುಖ ಹುಳಿ ಹಿಂಡಿದಂತೆ ಮಾಡುವರ ಸಂಖ್ಯೆ ಬಹಳ ಹೆಚ್ಚು. ನಮ್ಮ ದೇಶದ ಬಹುಪಾಲು ಹಳ್ಳಿಗಳಲ್ಲಿನ ಯುವಕರು ಕೆಲಸ ಹುಡುಕಿ ಅಥವಾ ಉತ್ತಮ ಭವಿಷ್ಯ ಹುಡುಕಿಕೊಂಡು ನಗರಗಳತ್ತ ಮುಖ ಮಾಡುತ್ತಿದ್ದಾರೆ.
ಈ ಪ್ರಕ್ರಿಯೆ ಶುರುವಾಗಿ ದಶಕಗಳ ಮೇಲಾಗಿದೆ. ಹಳ್ಳಿಗಳಲ್ಲಿ ಉಳಿದವರ ಕೆಲಸಕ್ಕೆ ಬಾರದವರು ನಾಲಾಯಕ್ಕು ಎನ್ನುವ ಪಟ್ಟ ಕಟ್ಟಲಾಗುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆ ಎಷ್ಟು ಹದಗೆಟ್ಟಿದೆಯೆಂದರೆ ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಯುವಕನಿಗೆ ಮದುವೆಗೆ ಹೆಣ್ಣು ಸಿಗುವುದು ಕಷ್ಟ. ನಗರದಲ್ಲಿ ಆತ ಯಾವುದೇ ಹುದ್ದೆಯಲ್ಲಿರಲಿ ಪರವಾಗಿಲ್ಲ ಎಷ್ಟೇ ಸಂಬಳ ಬರಲಿ ಪರವಾಗಿಲ್ಲ ಒಟ್ಟಿನಲ್ಲಿ ನಗರದಲ್ಲಿರಲಿ ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡುವುದು ಬೇಡ ಎನ್ನುವುದು ಹೆಣ್ಣೆತ್ತವರ ಆಶಯ. ನಮ್ಮ ಹಳ್ಳಿಗಳಲ್ಲಿ ಇರುವ ಸಮಸ್ಯೆಗಳ  ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಹೀಗೆ ಅಗಣಿತ ಸಮಸ್ಯೆಗಳಿಂದ ಬೇಸೆತ್ತು ಯುವ ಜನತೆ ನಗರ ಸೇರುವುದರಿಂದ ಹಳ್ಳಿಗಳು ಕೇವಲ ವಯಸ್ಸಾದವರ ಬೀಡಾಗಿದೆ. ಅಲ್ಲದೆ ಎಷ್ಟೋ ಸಣ್ಣ ಪುಟ್ಟ ಹಳ್ಳಿಗಳಲ್ಲಿನ ಶಾಲೆಗಳನ್ನ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಜನರ ಸಂಖ್ಯೆ ಹೆಚ್ಚಿಲ್ಲ ಎಂದು ಮುಚ್ಚಿದ್ದಾರೆ. ಇದು ನಮ್ಮ ಕಥೆಯಾಯಿತು. ಇಲ್ಲಿಂದ ಅತ್ಯಂತ ಸುಂದರವಾಗಿ ಕಾಣುವ ಯೂರೋಪಿನ ಕಥೆಯೇನು? ಅವರೇನು ಬಿನ್ನರೆ? ಅಲ್ಲಿನ ಹಳ್ಳಿಗಳ, ಅಲ್ಲಿನ ಸಮಸ್ಯೆಗಳ ಅನಾವರಣ ಮುಂದಿನ ಸಾಲುಗಳಲ್ಲಿ ನಿಮ್ಮ ಮುಂದಿವೆ. 
ಸ್ಪೇನ್:  2014 ರ ಒಂದು ಮಧ್ಯಾಹ್ನ ಉಂಡು ಹಾಗೆ ವಿರಮಿಸಿದ್ದೆ  ಸ್ಪೇನ್ ನ ರಾಷ್ಟೀಯ ಟೆಲಿವಿಷನ್ ನಲ್ಲಿ ದಕ್ಷಿಣ ಸ್ಪೇನ್ ನ ಹಳ್ಳಿಯೊಂದಕ್ಕೆ ಯಾರಾದರೂ ಹೋಗುವುದಾದರೆ ಅವರಿಗೆ ಅಲ್ಲಿಯೇ ಕೆಲಸ ಕೊಡುವುದಾಗಿ ಮತ್ತು ಪ್ರಥಮ ಎರಡು ವರ್ಷ ಮನೆ ಬಾಡಿಗೆ, ವಿದ್ಯುತ್ ಮತ್ತು ನೀರಿನ ಸರಬರಾಜು ಪುಕ್ಕಟೆ ಕೊಡುವುದಾಗಿ ಮತ್ತು ಇದಕ್ಕೆ ಕೇವಲ ಒಂದು ಕಂಡೀಷನ್ ಅವರದು ಎರಡು ಮಕ್ಕಳ ಸಂಸಾರವಾಗಿರಬೇಕು. ಹೀಗೆ ಹತ್ತಾರು ಸಂಸಾರವ ಆ ಹಳ್ಳಿಗೆ ಸೆಳೆಯಲು ಸರಕಾರ ಜಾಹಿರಾತು ನೀಡಿತ್ತು. ಖಾಲಿಯಾದ ಹಳ್ಳಿಯಲ್ಲಿ ಅಥವಾ ಕೇವಲ ವೃದ್ದರೆ ತುಂಬಿರುವ ಹಳ್ಳಿಯಲ್ಲಿ ಯುವಜನತೆಯ ತರಲು ಇಂತಹ ಹೊಸ ಚಿಂತನೆ ಅಲ್ಲಿನ ಸರಕಾರದ್ದು. ಸ್ಪೇನ್ ನಲ್ಲಿ ಒಟ್ಟು 2900 ಹಳ್ಳಿಗಳು ಮಾರಾಟಕ್ಕಿವೆ. ಸರಕಾರ ಮಾಡಿದ ಯಾವ ಕಸರತ್ತು ಹೆಚ್ಚು ಫಲಿತಾಂಶ ನೀಡಿಲ್ಲ!. ಸ್ಪೇನ್ ನ ಯುವ ಜನತೆಗೆ ಹಳ್ಳಿಯ ವಾಸ ಬೇಕಿಲ್ಲ. ಒಮ್ಮೆ ನಗರಕ್ಕೆ ಬಂದು ಅಲ್ಲಿನ ಜೀವನ ರುಚಿ ಉಂಡವರಿಗೆ ಹಳ್ಳಿಯ ದೈಹಿಕ ಶ್ರಮ ಬೇಡುವ ಕೆಲಸಗಳು ಆಕರ್ಷಕವಾಗಿಲ್ಲ. ಹೀಗಾಗಿ ಸಾವಿರಾರು ಹಳ್ಳಿಗಳು ಖಾಲಿ ಬಿದ್ದಿವೆ. ಅತ್ಯಂತ ಸುಂದರ, ರಮಣೀಯ ದೃಶ್ಯಗಳ ಹಳ್ಳಿ ಮನೆಗಳು ಭಾರತೀಯ ರೂಪಾಯಿ 30 ಅಥವಾ 40 ಲಕ್ಷಕ್ಕೆ ಮಾರಾಟಕ್ಕಿವೆ.  ದಕ್ಷಿಣ ಸ್ಪೇನ್ ನ ಕೊರ್ತೆಗಾದ ದ ಒಂದು ಪುಟ್ಟ ಹಳ್ಳಿಯನ್ನ ಕೇವಲ 45 ಸಾವಿರ ಯೂರೋಗಳಿಗೆ ಮಾರಾಟಕ್ಕಿಡಲಾಗಿತ್ತು. ಕೊನೆಗೆ ಕೊಳ್ಳುವರು ಬರಲಿಲ್ಲ ಎನ್ನುವ ಕಾರಣ ಹೇಳಿ. ಅದನ್ನ ಪುನರ್ಜಿವನ ಗೊಳಿಸಿದರೆ ಸಾಕು ಎನ್ನುವ ಕರಾರಿನ ಮೇಲೆ ಅದನ್ನ ಪುಕ್ಕಟೆ ಮಾರಲಾಯಿತು ಎಂದರೆ ನೀವು ನಂಬಲೇಬೇಕು. ಹೀಗೆ ಖಾಲಿ ಅಥವಾ ಪಾಲು ಬಿದ್ದಿರುವ ಹಳ್ಳಿ ಮನೆಗಳನ್ನ ಮಾರಾಟ ಮಾಡಲು ಒಂದು ವೆಬ್ ಸೈಟ್ ಹುಟ್ಟಿಕೊಂಡಿದೆ ಅಂದರೆ ಸಮಸ್ಯೆ ಎಷ್ಟು ದೊಡ್ಡದು ಎನ್ನುವ ಅರಿವಾದೀತು. 
ಸ್ಪೇನ್ ನ ದಕ್ಷಿಣಕ್ಕೆ ಗಲಿಸಿಯಾ ಎನ್ನುವ ರಾಜ್ಯವಿದೆ. ಇಲ್ಲಿ ಮಕ್ಕಳ ಜನನ ಪ್ರಮಾಣ ಯೂರೋಪಿನಲ್ಲೇ ಅತಿ ಕಡಿಮೆ . ಜಗತ್ತಿನ ಮಕ್ಕಳ ಜನನ ಅನುಪಾತಕ್ಕೆ ಹೋಲಿಸಿದರೆ ಯೂರೋಪ್ ಅತಿ ಕಡಿಮೆ, ಅಂತಹುದರಲ್ಲಿ ಗಲಿಸಿಯಾ ಅತಿ ಕಡಿಮೆಯದ್ದು . ಹೀಗಾಗಿ ಮುಂದಿನ 35 ವರ್ಷದಲ್ಲಿ  ಗಲಿಸಿಯಾ ರಾಜ್ಯವೇ ಪಾಳು ಬೀಳಬಹುದು ಎನ್ನುವ ಆತಂಕ ಅಲ್ಲಿದೆ. 
ಇಟಲಿ:  ಸ್ಪೇನ್ ನಲ್ಲಿ 2900 ಹಳ್ಳಿಗಳು ಪಾಳು ಬಿದ್ದಿದ್ದರೆ ಇಟಲಿಯ ಕಥೆ ಅದಕ್ಕಿಂತ ದಾರುಣವಾದದ್ದು. ಹತ್ತಿರತ್ತಿರ 20 ಸಾವಿರ ಹಳ್ಳಿ ಹಾಗು ಸಣ್ಣ ನಗರಗಳು ಭಾಗಾಂಶ ಖಾಲಿ ಬಿದ್ದಿವೆ. ಇಲ್ಲಿ ಶತಶತಮಾನಗಳಿಂದ ವಾಸವಿದ್ದ ಜನತೆ ದೊಡ್ಡ ದೊಡ್ಡ ನಗರಗಳತ್ತ ಗುಳೆ ಹೋಗಿ ದಶಕಗಳಾಗಿವೆ. ಸ್ಪೇನ್ ನಂತೆ ಇಲ್ಲಿಯೂ ಇಡೀ ಹಳ್ಳಿಗಳನ್ನೇ ಮಾರಾಟಕಿಟ್ಟ ಉದಾಹರಣೆಗಳು ಸಾಕಷ್ಟಿವೆ. ಅಳಿವಿನ ಅಂಚಿನಲ್ಲಿರುವ ಹಳ್ಳಿಗಳ ಉಳಿಸಲು ಸರಕಾರ ಎಲ್ಲಾ ರೀತಿಯ ಕೆಸರತ್ತು ಮಾಡಿದೆ. ಹಲವು ವರ್ಷ ಎಲ್ಲಾ ಸೌಲಭ್ಯ ಪುಕ್ಕಟೆ ನೀಡುವುದರ ಜೊತೆಗೆ ಹತ್ತಾರು ವರ್ಷ ತೆರಿಗೆಯಿಂದ ಕೂಡ ವಿನ್ಯಾತಿ ಕೊಡುತ್ತಿವೆ ಅಂದರೂ ಅಲ್ಲಿಗೆ ಹೋಗುವರ ಸಂಖ್ಯೆ ಹೆಚ್ಚಿಲ್ಲ. ಇಟಲಿಯ ರೆವೆನ್ಯೂ ಏಜನ್ಸಿ ತನ್ನ ಅಂಕಿಅಂಶದಲ್ಲಿ ದೇಶದಲ್ಲಿ ಒಟ್ಟು 1.3 ಮಿಲಿಯನ್ ಮನೆಗಳನ್ನ ನೊಂದಾಯಿಸಿಕೊಂಡಿಲ್ಲ! ಮನೆ ನೊಂದಾಯಿಸಿಕೊಂಡಿಲ್ಲ ಎಂದ ಮೇಲೆ ತೆರಿಗೆ ಹಾಕುವದಾದರೂ ಯಾರ ಮೇಲೆ? ಹೀಗೆ ಈ ಸಮಸ್ಯೆಯಿಂದ ಸರಕಾರಕ್ಕೆ ವಾರ್ಷಿಕ 589 ಮಿಲಿಯನ್ ಯುರೋ ಆದಾಯ ಕಡಿತವಾಗಿದೆ. 
ಊಹಿಸಲಾಗದ ಪರಿಸ್ಥಿತಿ ಊಹಿಸಲಾಗದ ತೀರ್ಮಾನಗಳನ್ನೂ ಹೊತ್ತು ತರುತ್ತದೆ. ಇಟಲಿಯ ದಕ್ಷಿಣಕ್ಕೆ ಮೆಡೀವಲ್ ವಿಲೇಜ್ ಒಂದಿದೆ ಸೆಲ್ಲಿಯ ಎನ್ನುವ ಹೆಸರೊತ್ತ ಈ ಗ್ರಾಮದ ಜನಸಂಖ್ಯೆ 18 ನೇ ಶತಮಾನದದಲ್ಲಿ ಇದ್ದ ಜನಸಂಖ್ಯೆಯ ಕೇವಲ ಹತ್ತು ಭಾಗ! ಇಲ್ಲಿನ ಮೇಯರ್ ' ನಮ್ಮೋರಲ್ಲಿ ಯಾರಿಗೂ ಸಾಯುವ ಹಕ್ಕಿಲ್ಲ !, ಸಾವನ್ನ ನಾವು ಒಪ್ಪಿಕೊಳ್ಳುವ ಸ್ಥಿತಿಯಲಿಲ್ಲ , ಉಳಿದಿರುವ ನಾವು ನಮ್ಮ ಹಳ್ಳಿಯನ್ನ ಉಳಿಸಬೇಕಿದೆ' ಎನ್ನುವ ಮುಚ್ಚಳಿಕೆ ಹೊರಡಿಸುತ್ತಾನೆ . ಇಂದೂ ನಾಳೆಯೋ ಎಂದು ದಿನ ಎಣಿಸುತ್ತಿರುವ ಬಹುತೇಕ ವೃದ್ದರು ಮೇಯರ್ ಮಾತಿಗೆ ' ಪ್ರಕೃತ್ತಿಗೆ ಸಾವಾಲು ಹಾಕುವ ಮುಚ್ಚಳಿಕೆ ಹೊರಡಿಸಿದ್ದೀಯಾ , ಸಾವನ್ನ ತಡೆಯಲು ಸಾಧ್ಯವೇ? 'ಎನ್ನುವ ಪ್ರಶ್ನೆ ಕೇಳಿದ್ದಾರೆ . ಮೇಯರ್ ಮುಚ್ಚಳಿಕೆ ಸಾವನ್ನ ತಡೆಯುವುದಿಲ್ಲ ನಿಜ . ತನ್ನೋರನ್ನ ಕಾಪಾಡಬೇಕು ಎನ್ನುವ ಕಿಚ್ಚು ಆ ಮುಚ್ಚಳಿಕೆ ತೋರಿಸುತ್ತಿದೆ . ಹಿರಿಯ ನಾಗರಿಕರಲ್ಲಿ ಇರುವ ಆ ಕಿಚ್ಚು ಯುವಕರಲಿಲ್ಲ . ನಗರದ ಆಕರ್ಷಣೆ , ಹಳ್ಳಿಯ ಕಷ್ಟದ ಬದುಕು , ಇಟಲಿಯ ಹಳ್ಳಿಯಲ್ಲಿ  ಸಾಮಾನ್ಯವಾಗಿರುವ ಪೈರೇಟ್ ದಾಳಿಗಳು , ಭೂಕುಸಿತ , ಕಾಳ್ಗಿಚ್ಚು ಇವುಗಳಲ್ಲವ ಕಾರಣದಿಂದ ಇಟಲಿಯ ಯುವಜನತೆ ಹಳ್ಳಿಯಿಂದ ಗಾವುದ ದೂರ . 
ಇಟಲಿಯ ಹಲವು ಹಳ್ಳಿಗಳನ್ನ ಕೇವಲ 2 ಲಕ್ಷ ಯುರೋ ಗೆ ಮಾರಕ್ಕೆ ಇಡಲಾಗಿದೆ . ಮನೆಗಳ ಬೆಲೆ ೧ ಯುರೋ ದಿಂದ ಶುರು ಅಂದರೆ ಕೇವಲ ಎಪ್ಪತ್ತು ರೂಪಾಯಿ ! ಹೌದು ಸರಿಯಾಗಿ ಓದಿದಿರಿ ಕೇವಲ ಎಪ್ಪತ್ತು ರೂಪಾಯಿ . ಇದಕ್ಕೆ ಅವರು ವಿಧಿಸುವ  ಏಕ ಷರತ್ತು ಒಂದೇ ನಿಗದಿತ ಅವಧಿಯಲ್ಲಿ ಆ ಜಾಗ ಪುನರ್ಜೀವನ ಗೊಳ್ಳಬೇಕು ! . 
ಯೂರೋಪಿನ ಇತರ ಹಳ್ಳಿಗಳ ಕಥೆಯೇನು? 
ಪೋರ್ಚುಗಲ್ ನಲ್ಲಿ ಸ್ಥಿತಿ ಬಿನ್ನವಾಗೇನು ಇಲ್ಲ . ಸ್ಪೇನ್ ಇಟಲಿಗಳಂತೆ ಇಡೀ ಹಳ್ಳಿಯನ್ನೇ ಮಾರಾಟಕಿಟ್ಟ ಉದಾಹರಣೆಗಳು ಕಣ್ಣ ಮುಂದಿವೆ. ಸ್ವಿಜರ್ಲ್ಯಾಂಡ್ ಗೆ ಅತ್ಯಂತ ಸಮೀಪದಲ್ಲಿರುವ ಫ್ರಾನ್ಸ್ ದೇಶದ ಬೌದಿನ್ ಎನ್ನುವ ಹಳ್ಳಿ ಮಾರಾಟಕ್ಕಿದೆ . ಬೆಲೆ ಕೂಡ ಹೆಚ್ಚೇನು ಇಲ್ಲ ಕೇವಲ ಒಂದು ಲಕ್ಷ 75 ಸಾವಿರ ಡಾಲರ್ಗಳು. ಇಂಗ್ಲೆಂಡ್ ಸ್ಕಾಟ್ಲೆಂಡ್ . ಹೀಗೆ ಯೂರೋಪಿನ ಬಹುತೇಕ ದೇಶಗಳ ಉದಾಹರಣೆ ಕೊಡುತ್ತ ಹೋಗಬಹುದು. ಇಲ್ಲೆಲ್ಲಾ ಇದೆ ಸಮಸ್ಯೆ. ಮೊದಲು ಮಕ್ಕಳ ಜನನ ಪ್ರಮಾಣದಲ್ಲಿ ಕುಸಿತವಾಗಿರುವುದು ಎರಡನೆಯದು ಹಳ್ಳಿಯ ಜೀವನದಲ್ಲಿ ಯಾರಿಗೂ ಆಸಕ್ತಿ ಇಲ್ಲದಿರುವುದು. 
ಮುಂದೇನು? 
ಯುನೈಟೆಡ್ ನೇಶನ್ ಪ್ರಕಟಿಸುವ ಅಂಕಿಅಂಶದ ಪ್ರಕಾರ 2014ರಲ್ಲೇ ಜಗತ್ತಿನ 54 ಪ್ರತಿಶತ ಜನ ನಗರ ಪ್ರದೇಶಗಲ್ಲಿ ವಾಸಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ 2050 ರ ವೇಳೆಗೆ ಇದು 66 ರಿಂದ 70 ಪ್ರತಿಶತ ಮುಟ್ಟುವ ಎಲ್ಲಾ ಸಾಧ್ಯತೆಗಳಿವೆ. ಜನಸಂಖ್ಯೆ ಬಾಹುಳ್ಯದಿಂದ ನಗರಗಳು ವಾಸಿಸಲು ಯೋಗ್ಯವಲ್ಲದ ಸ್ಥಿತಿ ಮುಟ್ಟಿ ದಶಕಗಳಾಗಿವೆ. 2050 ರ ವೇಳೆಗೆ ನಮ್ಮ ನಗರಗಳ ಪರಿಸ್ಥಿತಿ ಊಹಿಸಿಕೊಳ್ಳದಿರುವುದೆ ಲೇಸು. ಇದೊಂದು ಜಾಗತಿಕ ಸಮಸ್ಯೆ. ಹಳ್ಳಿಗಳಲ್ಲಿ ಜೀವನ ಮಟ್ಟ ಉತ್ತಮ ಗೊಳಿಸುವುದು, ಹಳ್ಳಿಯ ಬದುಕನ್ನ ಹೆಚ್ಚು ಆಕರ್ಷಕ ಮಾಡುವುದೊಂದೆ ಇದಕ್ಕಿರುವ ಮದ್ದು. ಸಿಕ್ಕ ಕಡಿಮೆ ಸಮಯದಲ್ಲಿ ಹಣ ಮಾಡಿಕೊಂಡು ಆರಾಮಾಗಿರಬೇಕು ಎನ್ನುವ ನಮ್ಮನ್ನಾಳುವರ ಕಿವುಡು ಕಿವಿಗೆ , ಕುರುಡು ಕಣ್ಣಿಗೆ ಇದೆಲ್ಲಾ ಕಂಡೀತೇ? 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com