
ನವದೆಹಲಿ: ಭಾರತೀಯ ಬ್ಯಾಂಕ್ ಗಳ ಅಧ್ಯಕ್ಷ ವೇತನ ವಿಚಾರ ಇದೀಗ ವ್ಯಾಪಕ ಚರ್ಚೆಗೀಡಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅವರು ಇಂತಹುದೊಂದು ಚರ್ಚೆಗೆ ಕಾರಣವಾಗಿದ್ದಾರೆ.
ಮೂಲಗಳ ಪ್ರಕಾರ ಖಾಸಗಿ ಬ್ಯಾಂಕುಗಳ ಅಧ್ಯಕ್ಷರಿಗೆ ಹೋಲಿಕೆ ಮಾಡಿದರೆ ಎಸ್ ಬಿಐ ಅಧ್ಯಕ್ಷರಿಗೆ ನೀಡುತ್ತಿರುವ ವೇತನ ತೀರಾ ಕಡಿಮೆ ಎಂದು ಹೇಳಲಾಗುತ್ತಿದ್ದು, ಅರುಂಧತಿ ಭಟ್ಟಾಚಾರ್ಯ ಅವರಿಗೆ ವಾರ್ಷಿಕ ಕೇವಲ 28.96 ಲಕ್ಷ ರು. ವೇತನ ನೀಡಲಾಗುತ್ತಿದೆಯಂತೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿನ ಅಧ್ಯಕ್ಷರಿಗೆ ಇದರ 10 ಪಟ್ಟು ವೇತನ ನೀಡಲಾಗುತ್ತಿದ್ದು, ಉದಾಹರಣೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂಡಿ ಆದಿತ್ಯಪುರಿ 10 ಕೋಟಿ ರು. ವೇತನ ಪಡೆದಿದ್ದರು. ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್ ವಾರ್ಷಿಕ 2.66 ಕೋಟಿ ರು. ವೇತನ, 2.2 ಕೋಟಿ ರು. ಸಾಧನೆ ಆಧಾರಿತ ಬೋನಸ್ ಜೊತೆಗೆ ಇತರೆ ಕೆಲ ಭತ್ಯೆಗಳ ರೂಪದಲ್ಲಿ 2.43 ಕೋಟಿ ರು. ಪಡೆದಿದ್ದಾರೆ. ಅದೇ ರೀತಿ ಎಕ್ಸಿಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಶಿಕಾ ಶರ್ಮಾ ಕೂಡಾ ಹೆಚ್ಚು ಕಡಿಮೆ 5 ಕೋಟಿ ರು. ವೇತನ ಮತ್ತು ಭತ್ಯೆ ಪಡೆದಿದ್ದಾರೆ.
ಆದರೆ ದೇಶದ ಪ್ರಮುಖ ಮತ್ತು ಅತ್ಯಂತ ದೊಡ್ಡ ಪ್ರಮಾಣದ ಗ್ರಾಹಕರನ್ನು ಹೊಂದಿರುವ ಎಸ್ ಬಿಐ ಬ್ಯಾಂಕ್ ಅಧ್ಯಕ್ಷರಿಗೆ ಇಷ್ಟು ಕಡಿಮೆ ಮೊತ್ತದ ವೇತನ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಲಾಗುತ್ತಿದೆ. ದೇಶದ ಅತೀ ದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಗಳಿಸಿರುವ ಎಸ್ ಬಿಐ ಟ್ಟಾರೆ 42 ಕೋಟಿ ಗ್ರಾಹಕರನ್ನು ಹೊಂದಿದೆ. ದೇಶದ ಬ್ಯಾಂಕಿಂಗ್ ವಲಯದಲ್ಲಿ ಶೇ.23ರಷ್ಟು ಪಾಲು ಹೊಂದಿದೆ.
ಇದೀಗ ಎಸ್ ಬಿಐ ಅಧ್ಯಕ್ಷ ವೇತನ ವಿಚಾರ ವಾಣಿಜ್ಯ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿದೆ.
Advertisement