ಷೇರು ಮಾರುಕಟ್ಟೆ ಜನ್ಮ ರಹಸ್ಯ : ಬಹಳವಿದೆ ಸ್ವಾರಸ್ಯ !

ಈ ಪರಿಕಲ್ಪನೆಯ ಮೂಲವನ್ನ ಇತಿಹಾಸದಲ್ಲಿ ಹುಡುಕಿದರೆ ಇದರ ಬೆಸುಗೆ ಬೆಲ್ಜಿಯಂ ದೇಶದ ಜೊತೆಗೆ ಬೆಸೆದುಕೊಳ್ಳುತ್ತದೆ.
ಸ್ಟಾಕ್ ಮಾರ್ಕೆಟ್
ಸ್ಟಾಕ್ ಮಾರ್ಕೆಟ್
ಸ್ಟಾಕ್ ಮಾರುಕಟ್ಟೆ ಹಿಂದಿನ ಕಥೆ :
ಬಹಳ ಹಿಂದೆ ವರ್ತಕರು ತಮ್ಮ ಹಣದಿಂದ ವ್ಯಾಪಾರ ಮಾಡುತ್ತಿದ್ದರು. ಒಂದು ಪ್ರದೇಶದಲ್ಲಿ ಹೆಚ್ಚಾಗಿ ಮತ್ತು ಕಡಿಮೆ ಬೆಲೆಗೆ ಸಿಗುತ್ತಿದ್ದ ವಸ್ತುವನ್ನ ಅದು ಹೆಚ್ಚಾಗಿ ಸಿಗದಿದ್ದ ಪ್ರದೇಶಕ್ಕೆ ಹೆಚ್ಚಿನ ಬೆಲೆಯಲ್ಲಿ ಮಾರುತ್ತಿದ್ದರು . ಇದು ಬಹಳಷ್ಟು ವರ್ಷ ನೆಡೆಯಿತು. ಕೆಲವೊಮ್ಮೆ ವರ್ತಕರಿಗೆ ತಮ್ಮ ಬಳಿ ಇರುವ ಹಣಕ್ಕಿಂತ ಬಹಳಷ್ಟು ಹೆಚ್ಚಿನ ಮೊತ್ತದ ಬೇಕಾಗುತ್ತಿತ್ತು. ಹಾಗೆ ತಮಗೆ ಬೇಕಾದ ಹಣಕ್ಕೆ ಅವರು ತಮ್ಮ ಪ್ರದೇಶದ ಸಾಹುಕಾರನ ಬಳಿ ಕೇಳಬೇಕಾಗುತಿತ್ತು. ಆತನ ಮನಸ್ಥಿತಿ ಮೇಲೆ ವರ್ತಕರ ಬೇಕು ಬೇಡ ಪೂರೈಕೆಯಾಗುತ್ತಿತ್ತು. ಇನ್ನೂ ಹೆಚ್ಚಿನ ಹಣಕ್ಕಾಗಿ ತಮ್ಮ ರಾಜನನ್ನು ಆಶ್ರಯಿಯಿಸಬೇಕಾಗುತಿತ್ತು. ಇಲ್ಲಿಯೂ ರಾಜನ  ಸಮ್ಮತಿ ಅಥವಾ ಅಸಮ್ಮತಿ ವರ್ತಕರ ಹಣೆಬರಹ ನಿರ್ಧರಿಸುತಿತ್ತು . ಹೀಗೆ ತಮ್ಮ ಸಾಹುಕಾರ ನಿಂದ ಅಥವಾ ರಾಜ ನಿಂದ ಹಣವಿಲ್ಲ ಎನಿಸಿಕೊಂಡು ಬರಿಗೈಲಿ ಹಿಂದುರಿಗಿದ ಆದರೆ ಸೋಲೊಪ್ಪಲು ಸಿದ್ಧವಿಲ್ಲದ ವರ್ತಕರು ತಮ್ಮ ವ್ಯಾಪಾರದಲ್ಲಿ ನಂಬಿಕೆಯಿಟ್ಟ ಹಲವು ಸಮಾನ ಮನಸ್ಕ ಸಹ ವರ್ತಕರು ಅಥವಾ ಬಂಧುಗಳ ಬಳಿ ಸಾಧ್ಯವಾದಷ್ಟು ಹಣವನ್ನು ಕೇಳಿ ಪಡೆದು ತಮ್ಮ ಕಾರ್ಯ ಸಾಧನೆಯಾದ ನಂತರ ಅವರ ಮೂಲ ಹಣದ ಜೊತೆಗೆ ಲಾಭದ ಒಂದಷ್ಟು ಅಂಶವನ್ನು ಅವರಿಗೆ ನೀಡುತ್ತಿದ್ದರು. ಹೀಗೆ ಇದನ್ನ ಸ್ಟಾಕ್ ಎಕ್ಸ್ಚೇಂಜ್, ಸ್ಟಾಕ್ ಮಾರ್ಕೆಟ್, ಇಂತಹ ಕ್ರಿಯೆಗೆ ಟ್ರೇಡಿಂಗ್ ಎನ್ನುವ ಹೆಸರು ಇಡುವ ಮುಂಚೆಯೇ ಅವಶ್ಯಕತೆ ಪೂರೈಸಿ ಕೊಳ್ಳಲು ತಮ್ಮದೇ ದಾರಿ ಹುಡುಕಿಕೊಂಡಿದ್ದರು.
ಸ್ಟಾಕ್ ಮಾರುಕಟ್ಟೆ ಕಲ್ಪನೆಯ ಹರಿಕಾರ:
ಈ ಪರಿಕಲ್ಪನೆಯ ಮೂಲವನ್ನ ಇತಿಹಾಸದಲ್ಲಿ ಹುಡುಕಿದರೆ ಇದರ ಬೆಸುಗೆ ಬೆಲ್ಜಿಯಂ ದೇಶದ ಜೊತೆಗೆ ಬೆಸೆದುಕೊಳ್ಳುತ್ತದೆ. ಕ್ರಿಸ್ತಶಕ 1400/1500 ರಲ್ಲೇ ಬೆಲ್ಜಿಯಂ ನಲ್ಲಿ ಈ ರೀತಿಯ ಹೂಡಿಕೆ ನೆಡೆಯುತಿತ್ತು. ಇದು ಮುಕ್ಕಾಲು ಪಾಲು ಇಂದಿನ ಷೇರು ಮಾರುಕಟ್ಟೆಯನ್ನೇ ಹೋಲುತಿತ್ತು. ಬಹು ಮುಖ್ಯ ವ್ಯತ್ಯಾಸವೆಂದರೆ ಇದನ್ನ ಕೊಂಡ ಜನ ಅದನ್ನ ಇನ್ನೊಬರಿಗೆ ಮಾರುತ್ತಿರಲಿಲ್ಲ. ಕೊನೆಯವರೆಗೂ ಅದು ಅವರ ಬಳಿಯೇ ಇರುತಿತ್ತು. ಅಂದರೆ ಷೇರು ಮಾರುವಿಕೆ ಕೊಳ್ಳುವಿಕೆ ಒಂದು ಸಲದ ಕ್ರಿಯೆಯಾಗಿತ್ತು. ಟ್ರೇಡಿಂಗ್ ಅಲ್ಲಿರಲಿಲ್ಲ.
ಅಧಿಕೃತ ಸ್ಟಾಕ್ ಮಾರುಕಟ್ಟೆ  ತೆರೆದ ಡಚ್ ಈಸ್ಟ್ ಇಂಡಿಯಾ ಕಂಪನಿ:
1602 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಪ್ರಥಮ ಬಾರಿಗೆ ಮುದ್ರಿತ ಮುಚ್ಚಳಿಕೆ ಹೊರಡಿಸುತ್ತೆ. ಡಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಹಣವನ್ನ ಹೂಡಿದರೆ ಇಷ್ಟು ಅವಧಿಯ ನಂತರ ಮೂಲ ಹಣದ ಜೊತೆಗೆ ಇಷ್ಟು ಹಣವನ್ನ ನೀಡಲಾಗುತ್ತದೆ. ಅದು ಲಾಭದ ಇಷ್ಟು ಅಂಶ. ಅಂದರೆ ನೀವು ಹೂಡಿಕೆದಾರರು ಕೇವಲ ಹೂಡಿಕೆದಾರರಲ್ಲ ಡಚ್ ಈಸ್ಟ್ ಇಂಡಿಯಾ ಕಂಪನಿಗೆ ನೀವು ಹೂಡಿದ ಹಣದ ಭಾಗದ ಮಾಲೀಕರು ಅಥವಾ ಪಾಲುದಾರರು ಎನ್ನುವ ಹೊಸ ಅರ್ಥವನ್ನ ಜನರ ಮುಂದೆ ಇಡುತ್ತದೆ. ತಮ್ಮ ಹಣವನ್ನ ಬಡ್ಡಿಗೆ ಅಥವಾ ಹೆಚ್ಚಿನ ಹಣ ಗಳಿಸುವ ಆಶಯದಿಂದ ನೀಡುತಿದ್ದ ಜನರಿಗೆ ತಾವು ಕಂಪನಿಯ ಭಾಗ ಎಂದು ಅನ್ನಿಸುತ್ತಿರಲಿಲ್ಲ. ಈ ಹೊಸ ವ್ಯಾಖ್ಯೆಯಿಂದ ಜನರ ಮನಸ್ಸಿನಲ್ಲಿ ' ನಾನು ಈಸ್ಟ್ ಇಂಡಿಯಾ ಕಂಪನಿಯ ಮಾಲೀಕ / ಪಾಲುದಾರ' ಎನ್ನುವ ಭಾವನೆ ಉತ್ಪನ್ನವಾಯಿತು.  ಆಂಸ್ಟರ್ಡ್ಯಾಮ್ ಸ್ಟಾಕ್ ಎಕ್ಸ್ಚೇಂಜ್ ಮೊದಲ ಷೇರು ಮಾರುಕಟ್ಟೆ ಎನಿಸಿಕೊಳ್ಳುತ್ತದೆ. ಇದು ಯಶಸ್ಸು ಕಂಡ ತಕ್ಷಣ ಇದನ್ನ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ ದೇಶಗಳು ತಮ್ಮದಾಗಿಸಿಕೊಳ್ಳುತ್ತವೆ.
ಪ್ರಥಮ ಷೇರು ವಹಿವಾಟುಗಳು  ನೆಡೆದದ್ದು ಕಾಫಿ ಶಾಪುಗಳಲ್ಲಿ:
ಒಂದು ಫಾರ್ಮುಲಾ ಯಶಸ್ಸು ಕಂಡರೆ ಅದನ್ನ ಕಾಪಿ ಮಾಡಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆದರೆ ಅಂದಿನ ಜನರಿಗೆ ಈ ಷೇರು ಮಾರುಕಟ್ಟೆ ಹೇಗೆ ರೂಪಗೊಳ್ಳಬಹುದು ಎನ್ನುವ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ . ಅವರಿಗೂ ಅದು ಹೊಸತು. ಯಾವುದು ಸರಿ ಯಾವುದು ತಪ್ಪು ಎನ್ನುವ ಪರಿಜ್ಞಾನ ಕೂಡ ಇರಲಿಲ್ಲ. ಎಲ್ಲವೂ ಒಂದು ರೀತಿಯಲ್ಲಿ ಪ್ರಾಯೋಗಿಕ ಹಂತದಲಿದ್ದವು. ಷೇರುಗಳ ಕೊಳ್ಳುವ ಫಾರಂ ಮತ್ತು ಷೇರುಗಳ ವಿತರಣೆ ನಗರದ ಪ್ರಸಿದ್ಧ ಕಾಫೀ ಶಾಪ್ ನಲ್ಲಿ ನೆಡೆಯುತಿತ್ತು. ಅದಕ್ಕೆ ಎಂದು ನಿಗದಿತ ವೇಳೆ ಇರಲಿಲ್ಲ. ಯಾವುದೇ ವ್ಯಕ್ತಿ ತನಗೆ ಹೊಳೆದ ಹೊಸ ಐಡಿಯಾವನ್ನ ಕಾಫಿ ಶಾಪ್ ನಲ್ಲಿ ಸೇರುವ ಜನರ ಮುಂದೆ ಹೇಳಬಹುದಿತ್ತು ಮತ್ತು ತನ್ನ ಕಂಪನಿಯ ಷೇರನ್ನ ವಿತರಿಸಬಹುದಿತ್ತು. ಟೊಳ್ಳು ಮತ್ತು ಗಟ್ಟಿಯನ್ನ ಬೇರ್ಪಡಿಸಲಾಗದೆ. ಈ ವ್ಯವಸ್ಥೆ ಕುಸಿಯುತ್ತದೆ.
ನ್ಯೂಯೋರ್ಕ್ ಸ್ಟಾಕ್ ಎಕ್ಸ್ಚೇಂಜ್ ಬೆಳೆಯಲು ಬಿಟ್ಟ ಲಂಡನ್:
1801 ರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಹೊಸ ರೂಪುರೇಷೆಯೊಂದಿಗೆ ಹೊಸದಾಗಿ ಲೋಕಾರ್ಪಣೆಯಾಗುತ್ತದೆ. ಸಿಕ್ಕಸಿಕ್ಕವರೆಲ್ಲಾ ಷೇರು ವಿತರಿಸದಿರಲು ಸರಕಾರ ಅನೇಕ ನಿಬಂಧನೆ ವಿಧಿಸುತ್ತದೆ. 1825 ರ ವರೆಗೆ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತೆ ಕಾರ್ಯ ನಿರ್ವಹಿಸುತ್ತೆ. ಈ ಮಧ್ಯೆ 1817 ರಲ್ಲಿ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಶುರುವಾಗುತ್ತೆ. ಶುರುವಾದಷ್ಟೇ ವೇಗವಾಗಿ ಬೆಳೆಯುತ್ತದೆ. ಹಾಗೆ ನೋಡಲು ಹೋದರೆ ಅಮೇರಿಕಾದ ಪ್ರಥಮ ಸ್ಟಾಕ್ ಎಕ್ಸ್ಚೇಂಜ್ ಫಿಲಿಡೇಲ್ಫಿಯಾ ದಲ್ಲಿ ಶುರುವಾಗುತ್ತೆ. ಆದರೆ ವೇಗವಾಗಿ ಮತ್ತು ಪ್ರಭಲವಾಗಿ ಬೆಳೆದದ್ದು ಮಾತ್ರ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ . ಲಂಡನ್ ನಲ್ಲಿ 1801 ರಲ್ಲಿ ಶುರುವಾದರೂ ಅದನ್ನ ಬೆಳೆಯಲು ಬಿಡದೆ ಹೋದದ್ದು ನ್ಯೂಯೋರ್ಕ್ ಜಗತ್ತಿನ ಅತ್ಯಂತ ಪ್ರಸಿದ್ಧ ಮತ್ತು ಬಲಿಷ್ಠ ಸ್ಟಾಕ್ ಮಾರ್ಕೆಟ್ ಆಗುವಲ್ಲಿ ತನ್ನದೇ ಆದ ದೇಣಿಗೆಯನ್ನ ನೀಡಿದೆ .
ವಾಲ್ ಸ್ಟ್ರೀಟ್ ನಲ್ಲಿ ನೆಲೆಸಿರುವ ನ್ಯೂಯೋರ್ಕ್ ಸ್ಟಾಕ್ ಎಕ್ಸ್ಚೇಂಜ್ ಜನರ ಬಾಯಲ್ಲಿ NYSC ಎಂದು ಪ್ರಸಿದ್ದಿ ಪಡೆದಿದೆ. ಅಮೇರಿಕಾಕ್ಕೆ ಪ್ರವಾಸ ಹೋಗುವ ಜನ ಸ್ಟಾಕ್ ಎಕ್ಸ್ಚೇಂಜ್ ನೋಡಲೆಂದೇ ವಾಲ್ ಸ್ಟ್ರೀಟ್ ಗೆ ಹೋಗುತ್ತಾರೆ . ರಸ್ತೆಯಲ್ಲಿ ಇರುವ ದೈತ್ಯಾಕಾರದ ಗೂಳಿಯ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಸ್ಟಾಕ್ ಮಾರ್ಕೆಟ್ಟಿನ ಹೆಚ್ಚಿನ ಅರಿವಿಲ್ಲದ ಜನರಿಗೂ ವಾಲ್ ಸ್ಟ್ರೀಟ್ ಮಾತ್ರ ಗೊತ್ತು. ನ್ಯೂಯೋರ್ಕ್ ಷೇರು ಮಾರುಕಟ್ಟೆ ಗಳಿಸಿದ ಜನಪ್ರಿಯತೆ  ಸ್ವಿಸ್ ನಿಂದ ಹಿಡಿದು ಜಪಾನ್ ವರೆಗೆ ಜಗತ್ತಿನ ಎಲ್ಲಾ ದೇಶಗಳೂ ಕಾಪಿ ಮಾಡುತ್ತವೆ. ಇಂದು ಜಗತ್ತಿನ ಬಹುತೇಕ ಎಲ್ಲಾ  ದೇಶಗಳೂ ತಮ್ಮದೇ ಆದ ಷೇರು ಮಾರುಕಟ್ಟೆ ಹೊಂದಿವೆ. ಅವುಗಳಿಗೆ ವೇಳೆ ನಿಗದಿಯಾಗಿದೆ. ಆದರೆ ಹೂಡಿಕೆದಾರ ದಿನದ ಇಪ್ಪತ್ನಾಲ್ಕು ಗಂಟೆಯೂ ಹೂಡಿಕೆ ಮಾಡಬಹುದು. ಜಗತ್ತಿನ ಒಂದಲ್ಲ ಒಂದು ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ.
ಭಾರತದಲ್ಲಿ ಷೇರು ಮಾರುಕಟ್ಟೆ:
9 ಜುಲೈ 1875 ರಲ್ಲಿ ಮುಂಬೈ ನ ದಲಾಲ್ ಸ್ಟ್ರೀಟ್ ನಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಶುರುವಾಗುತ್ತದೆ. ಇಂದಿಗೂ ಇಂದು BSE  ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ. 1992 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆ ಕಾರ್ಯ ಶುರು ಮಾಡುತ್ತದೆ. ಇದು ಪೂರ್ಣ ಗಣಕೀಕೃತ ವಾಗಿದೆ. ಜಗತ್ತಿನ ಇತರ ಸ್ಟಾಕ್ ಎಕ್ಸ್ಚೇಂಜ್ ಕಾರ್ಯ ನಿರ್ವಹಿಸುವ ರೀತಿಯಲ್ಲಿ ಇದು ಕೂಡ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದೆ. ಮತ್ತು ಕಾರ್ಯ ನಿರ್ವಹಿಸುತ್ತಿದೆ.
ಇಂದಿಗೆ ಜಗತ್ತಿನ ಬಂಡವಾಳ ಹೂಡಿಕೆ ದೃಷ್ಟಿಯಿಂದ ಕೆಳಗಿನ ಷೇರು ಮಾರುಕಟ್ಟೆಗಳು ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳು ಎನ್ನಿಸಿ ಕೊಂಡಿವೆ:
  1. ನ್ಯೂಯೋರ್ಕ್ ಸ್ಟಾಕ್ ಎಕ್ಸ್ಚೇಂಜ್
  2. ನಾಸ್ ಡಾಕ್
  3. ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್
  4. ಲಂಡನ್ ಸ್ಟಾಕ್ ಎಕ್ಸ್ಚೇಂಜ್
  5. ಯೂರೋನೆಕ್ಸ್ಟ್
  6. ಹಾಂಗಕಾಂಗ್ ಸ್ಟಾಕ್ ಎಕ್ಸ್ಚೇಂಜ್
  7. ಶಾಂಗೈ ಸ್ಟಾಕ್ ಎಕ್ಸ್ಚೇಂಜ್
  8. ಟೊರಾಂಟೊ ಸ್ಟಾಕ್ ಎಕ್ಸ್ಚೇಂಜ್
  9. ಫ್ರಾಂಕ್ಫರ್ಟ್ ಸ್ಟಾಕ್ ಎಕ್ಸ್ಚೇಂಜ್
  10.  ಆಸ್ಟ್ರೇಲಿಯನ್ ಸೆಕ್ಯುರಿಟೀಸ್ ಎಕ್ಸ್ಚೇಂಜ್ .
ಷೇರು ಮಾರುಕಟ್ಟೆಯ ಭವಿಷ್ಯವೇನು ?
ಇಂದು ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಷೇರು ಮಾರುಕಟ್ಟೆ ಹೊಂದಿವೆ. ಅವು ಆಯಾ ದೇಶಗಳ ಡ್ರೈವಿಂಗ್ ಫೋರ್ಸ್ ಎನ್ನುವ ಮಟ್ಟಕ್ಕೆ ಬೆಳೆದು ಕೂಡ ನಿಂತಿವೆ. ಜಗತ್ತಿನ ಎಲ್ಲಾ ಸ್ಟಾಕ್ ಮಾರ್ಕೆಟ್ ಅನ್ನು ಒಗ್ಗೂಡಿಸ ಬೇಕು ಎನ್ನುವ ಮಾತು ಆಗಾಗ ಕೇಳಿ ಬರುತ್ತಿದೆ. ಇದು ಪ್ರಾಕ್ಟಿಕಲ್ ಆಗಿ ಸಾಧ್ಯವಿಲ್ಲದ ವಿಷಯವಾಗಿದೆ. ಇದನ್ನ ಬದಿಗಿಟ್ಟು ನೋಡಿದರು ಸ್ಟಾಕ್ ಮಾರ್ಕೆಟ್ ಇಲ್ಲದ ವಾಣಿಜ್ಯ ವಹಿವಾಟು ಊಹಿಸಿಕೊಳ್ಳಲು ಅಸಾಧ್ಯ ಎನ್ನುವ ಮಟ್ಟಿಗೆ ಇವು ಬೆಳೆದಿವೆ. ಉದ್ಯಮವನ್ನ ಬೆಳೆಸಿವೆ. ಸದ್ಯದ ಮಟ್ಟಿಗಂತೂ ಬಂಡವಾಳ ಶೇಖರಣೆಗೆ ಇದಕ್ಕಿಂತ ಉತ್ತಮ ಪರ್ಯಾಯ ಇಲ್ಲ. ಅಷ್ಟರ ಮಟ್ಟಿಗೆ ಷೇರು ಮಾರುಕಟ್ಟೆಯ ಭವಿಷ್ಯ ಭದ್ರ. ಇದು ಇನ್ನೂ ಹಲವಾರು ದಶಕ ಇರಲಿದೆ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com