ಮಹಾ ವಿಲೀನ: ದೇಶದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ "ಐಡಿಯಾ-ವೊಡಾಫೋನ್" ಪರಿವರ್ತನೆ!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ಪರಸ್ಪರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ದೇಶದ ಟೆಲಿಕಾಂ ಇತಿಹಾಸದಲ್ಲೇ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ಪರಸ್ಪರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ದೇಶದ ಟೆಲಿಕಾಂ ಇತಿಹಾಸದಲ್ಲೇ ಇದು ಅತೀ ದೊಡ್ಡ ಪ್ರಮಾಣದ  ವಿಲೀನ ಪ್ರಕ್ರಿಯೆಯಾಗಿ ಮಾರ್ಪಟ್ಟಿದ್ದು, ದೇಶದ ಅತೀ ದೊಡ್ಡ ದೂರ ಸಂಪರ್ಕ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ.

ವೊಡಾಫೋನ್ ಸಮೂಹದ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ವೊಡಾಫೋನ್ ಮೊಬೈಲ್ ಸರ್ವೀಸಸ್ ಲಿಮಿಟೆಡ್ ಜತೆಗೆ ಐಡಿಯಾ ಸೆಲ್ಯುಲಾರ್ ಸಂಸ್ಥೆ ವಿಲೀನ ಒಪ್ಪಂದಕ್ಕೆ ಸೋಮವಾರ ನಡೆದ ನಿರ್ದೇಶಕ ಮಂಡಳಿ  ಸಭೆಯಲ್ಲಿ ಒಪ್ಪಿಗೆ ದೊರಕಿದೆ.  ಪ್ರಸ್ತುತ ಗ್ರಾಹಕರ ಸಂಖ್ಯೆಯಲ್ಲಿ ಭಾರ್ತಿ ಏರ್​ಟೆಲ್ ದೇಶದಲ್ಲೇ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಆದರೆ ಐಡಿಯಾ ಮತ್ತು ವೊಡಾಫೋನ್ ವಿಲೀನದ ಬಳಿಕ ಅದು 40 ಕೋಟಿ ಗ್ರಾಹಕರನ್ನು  ಹೊಂದುವ ಮೂಲಕ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿಯಾಗಿ ಹೊರಹೊಮ್ಮಲಿದೆ. ದೇಶದ ಪ್ರತಿ ಮೂವರು ಮೊಬೈಲ್ ಗ್ರಾಹಕರರಲ್ಲಿ ಒಬ್ಬರು ಐಡಿಯಾ-ವೊಡಾಫೋನ್ ಸಂಸ್ಥೆಯ ಗ್ರಾಹಕರಾಗಿರುತ್ತಾರೆ.

ಇನ್ನು ಈ ನೂತನ ಒಪ್ಪಂದದ ಅನ್ವಯ ವೊಡಾಫೋನ್ ಸಂಸ್ಥೆ ಶೇ. 45.1 ರಷ್ಟು, ಐಡಿಯಾ ಶೇ. 26ರಷ್ಟು ಮಾರುಕಟ್ಟೆ ಪಾಲು ಹೊಂದಲಿವೆ. ವಿಲೀನ ಪ್ರಕ್ರಿಯೆ ಪೂರ್ಣವಾಗಲು 24 ತಿಂಗಳ ಕಾಲಾವಕಾಶ ಬೇಕಿದ್ದು, ವಿಲೀನ ಪ್ರಕ್ರಿಯೆ  ಪೂರ್ಣವಾದ ಬಳಿಕ ಐಡಿಯಾ ಮತ್ತಷ್ಟು ಸಂಖ್ಯೆಯ ಷೇರುಗಳನ್ನು ಹೊಂದಲಿದೆ. ವಿಲೀನದಿಂದಾಗಿ ಈ ಸಂಸ್ಥೆಯ ಆದಾಯ ಬರೊಬ್ಬರಿ 81,403 ಕೋಟಿ ರು. ಗೆ ಏರಲಿದೆ.

ಅಂತೆಯೇ ಟ್ರಾಯ್ ಅಂಕಿಅಂಶಗಳ ಪ್ರಕಾರ, ಏರ್​ ಟೆಲ್ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ. 23.58 ಪಾಲು ಹೊಂದಿದ್ದು, 26.58 ಕೋಟಿ ಏರ್ ​ಟೆಲ್ ಗ್ರಾಹಕರಿದ್ದಾರೆ. ಎರಡನೇ ಸ್ಥಾನದಲ್ಲಿರುವ ವೊಡಾಫೋನ್ 20.46  ಕೋಟಿ ಗ್ರಾಹಕರೊಂದಿಗೆ ಶೇ. 18.16 ಮಾರುಕಟ್ಟೆ ಪಾಲು ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಐಡಿಯಾ 19.05 ಕೋಟಿ ಗ್ರಾಹಕರನ್ನು ಹೊಂದಿದ್ದು, ಶೇ. 16.9 ಪಾಲು ಹೊಂದಿದೆ. ವೊಡಾಫೋನ್ ಮಾರುಕಟ್ಟೆ ಮೌಲ್ಯ 82,800  ಕೋಟಿ ರು.ಗಳಾಗಿದ್ದರೆ, ಐಡಿಯಾ 72,200 ಕೋಟಿ ರೂ. ಮೌಲ್ಯ ಹೊಂದಿದೆ. ವಿಲೀನದ ಬಳಿಕ 81,000 ಕೋಟಿ ರು. ಆದಾಯ ಹೊಂದುವ ಸಂಸ್ಥೆಗೆ 39.5 ಕೋಟಿ ಗ್ರಾಹಕರು ಸೇರ್ಪಡೆಯಾಗುವುದರಿಂದ ಅತಿದೊಡ್ಡ ಸಂಸ್ಥೆಯಾಗಲಿದೆ  ಎಂದು ತಜ್ಞರು ತಿಳಿಸಿದ್ದಾರೆ.

ವಿಲೀನದ ಬಳಿಕ ಉಭಯ ಕಂಪನಿಗಳು ಹೊಂದುವ ಹಕ್ಕುಗಳೇನು?
ಐಡಿಯಾ ಪ್ರಮೋಟರ್ಸ್ ಮತ್ತು ವೊಡಾಫೋನ್ ತಲಾ ಮೂವರು ನಿರ್ದೇಶಕರನ್ನು ನಾಮನಿರ್ದೇಶನ ಮಾಡುವ ಹಕ್ಕು ಹೊಂದಿವೆ. ಆದರೆ ಚೇರ್ಮನ್ ನೇಮಕ ಅಧಿಕಾರ ಮಾತ್ರ ಐಡಿಯಾಗಿದ್ದು, ಕುಮಾರ ಮಂಗಲಂ ಬಿರ್ಲಾ  ಚೇರ್ಮನ್ ಆಗಿರುತ್ತಾರೆ. ಕಂಪನಿಗೆ ಸಿಎಫ್​ ಒ (ಮುಖ್ಯ ವಿತ್ತ ಅಧಿಕಾರಿ) ನೇಮಕವನ್ನು ವೊಡಾ ಫೋನ್ ಮಾಡಲಿದೆ. ವಿಲೀನಕ್ಕೆ ಸೆಬಿ, ಟೆಲಿಕಾಂ ಇಲಾಖೆ ಮತ್ತು ಆರ್​ ಬಿಐ ಸಹಿತ ಪ್ರಮುಖ ಹಲವು ಸಂಸ್ಥೆಗಳ ಒಪ್ಪಿಗೆ ಅಗತ್ಯವಾಗಿದೆ.

ಮಾರುಕಟ್ಟೆ ದರ ಸಮರಕ್ಕೆ ದಾರಿ
ಎರಡು ಸಂಸ್ಥೆಗಳ ವಿಲೀನದಿಂದ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಏರ್ಪಡಲಿದ್ದು, ರಿಲಯನ್ಸ್ ಜಿಯೋದ ಜತೆಗಿನ 4ಜಿ ಡೇಟಾ ದರ, ಕರೆ ದರ ಇತ್ಯಾದಿ ಕೊಡುಗೆಗಳ ಸಮರದಲ್ಲಿದ್ದ ಕಂಪನಿಗಳ ಮಧ್ಯೆ ಮತ್ತಷ್ಟು  ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ರಿಲಯನ್ಸ್ ಜಿಯೋ 4ಜಿ ಪ್ರವೇಶದ ಬಳಿಕ ಸರ್ಕಾರಿ ಸ್ವಾಮ್ಯದ ಬಿಎಸ್ ​ಎನ್​ ಎಲ್ ಸಹಿತ ಪ್ರಮುಖ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ದರ ಕಡಿತ ಮತ್ತು  ಹೆಚ್ಚುವರಿ ಡೇಟಾ ಕೊಡುಗೆ ನೀಡುತ್ತಿವೆ.

ಐಡಿಯಾ ಷೇರುಗಳ ಮೌಲ್ಯ ಏರಿಕೆ
ಇನ್ನು ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳ ವಿಲೀನ ಸುದ್ದಿ ಹೊರಬಿದ್ದ ಬೆನ್ನಲ್ಲೇ ಐಡಿಯಾ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆಯಾಗಿದ್ದು, 14.25ರಷ್ಟು ಮೌಲ್ಯ ಏರಿಕೆಯಾಗಿದೆ. ಅಂತೆಯೇ ವೊಡಾಫೋನ್ ಷೇರು ಮೌಲ್ಯ ಕೂಡ  ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com