ಮೆಕ್ ಡೊನಾಲ್ಡ್, ಕೆಎಫ್ ಸಿಗೆ ಸಡ್ಡು; ಬಾಬಾ ರಾಮ್ ರಿಂದ ಶೀಘ್ರ ಸರಣಿ ರೆಸ್ಟೋರೆಂಟ್ ಸ್ಥಾಪನೆ!

ಪತಂಜಲಿ ಸಂಸ್ಥೆ ಇದೀಗ ಸರಣಿ ರೆಸ್ಟೋರೆಂಟ್ ಗಳ ದೈತ್ಯ ಸಂಸ್ಥೆಗಳಾದ ಮೆಕ್ ಡೊನಾಲ್ಡ್, ಕೆಎಫ್ ಸಿಯಂತಹ ಸಂಸ್ಥೆಗಳಿಗೆ ಎದುರಾಗಿ ಸರಣಿ ರೆಸ್ಟೋರೆಂಟ್ ಗಳನ್ನು ತೆರೆಯಲು ಚಿಂತನೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವೈವಿಧ್ಯಮಯ ಉತ್ಪನ್ನಗಳ ಮೂಲಕ ಜನಮನ್ನಣೆ ಗಳಿಸಿ ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರುಪತ್ಯ ಮೆರೆಯುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಸರಣಿ ರೆಸ್ಟೋರೆಂಟ್ ಗಳ ದೈತ್ಯ  ಸಂಸ್ಥೆಗಳಾದ ಮೆಕ್ ಡೊನಾಲ್ಡ್, ಕೆಎಫ್ ಸಿಯಂತಹ ಸಂಸ್ಥೆಗಳಿಗೆ ಎದುರಾಗಿ ಸರಣಿ ರೆಸ್ಟೋರೆಂಟ್ ಗಳನ್ನು ತೆರೆಯಲು ಚಿಂತನೆ ನಡೆಸಿದೆ.

ಈ ಬಗ್ಗೆ ಬಾಬಾ ರಾಮ್ ದೇವ್ ಅವರು ಮಾತನಾಡಿದ್ದು, ಪ್ರಸಕ್ತ ಸಾಲಿನಲ್ಲಿ ಪತಂಜಲಿ ಸಂಸ್ಥೆಯ ಆದಾಯ ದ್ವಿಗುಣಗೊಂಡಿದೆ. ಮಾರ್ಚ್ 2017 ಅಂತ್ಯದ ಹೊತ್ತಿಗೆ ಪತಂಜಲಿ ವಹಿವಾಟು 10,500 ಕೋಟಿ ರು. ಆಗಿದೆ. ಮುಂದಿನ  ದಿನಗಳಲ್ಲಿ ಇದನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ ಸಂಸ್ಥೆ  300 ಶತಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಸಾಲಿನಲ್ಲಿ ಇದು ದ್ವಿಗುಣಗೊಳ್ಳಲಿದೆ ಎಂದು  ಹೇಳಿದರು.

ಇದೇ ವೇಳೆ ಕೆಎಫ್ ಸಿ, ಮೆಕ್ ಡೊನಾಲ್ಡ್, ಸಬ್ ವೇ ರೆಸ್ಟಾರೆಂಟ್ ಗಳಂತಹ ದೈತ್ಯ ಸರಣಿ ರೆಸ್ಟೋರೆಂಟ್ ಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಬಾ ರಾಮ್ ದೇವ್ ಹೆಸರಿನಲ್ಲಿ ಸರಣಿ ರೆಸ್ಟೋರೆಂಟ್ ತೆರೆಯಲು  ನಿರ್ಧರಿಸಲಾಗಿದೆ. ಗಿಡಮೂಲಿಕೆಗಳ ಸಂಯೋಜನೆಗಳು ಮತ್ತು ವಿಶೇಷ ಆಹಾರ ಪದ್ಧತಿಯ ರೆಸ್ಟೋರೆಂಟ್ ಗಳ ಸ್ಥಾಪನೆಗೆ ಪತಂಜಲಿ ಸಂಸ್ಥೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡಿದೆ.

ಮನಸ್ಸು, ದೇಹ ಮತ್ತು ಆತ್ಮದ ಸಮತೋಲನ ಸಂಯೋಜನೆ ಮೂಲಕ ಆರೋಗ್ಯ ಆಯಸ್ಸನ್ನು ಕಾಪಾಡಿಕೊಳ್ಳಬಹುದು. ಗಿಡಮೂಲಿಕೆಗಳ ಸಂಯೋಜನೆಗಳು ಮತ್ತು ವಿಶೇಷ ಆಹಾರ ಪದ್ಧತಿ ಪಾಲಿಸುವ ಮೂಲಕ ಇಂತಹ  ಸ್ವಾಸ್ಥ್ಯವನ್ನು ಸಾಧಿಸಬಹುದಾಗಿದೆ ಎಂದು ಬಾಬಾ ರಾಮ್ ದೇವ್ ಹೇಳಿದರು. ಇದೇ ವೇಳೆ ಮುಂದಿನ ದಿನಗಳಲ್ಲಿ ಬಟ್ಟೆ ವ್ಯಾಪಾರಕ್ಕೂ ಇಳಿಯಲಿದ್ದೇವೆ ಎಂದು ರಾಮ್ ದೇವ್ ಹೇಳಿದರು.

ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ಪತಂಜಲಿ ನೆರವು
ಇದೇ ವೇಳೆ ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಪತಂಜಲಿ ಸಂಸ್ಥೆ ಯೋಜನೆಯೊಂದನ್ನು ರೂಪಿಸಿದ್ದು, ಅದರಂತೆ ಯೋಧರ ಮಕ್ಕಳಿಗಾಗಿ ಒಂದು ಶಾಲೆಯನ್ನೂ ತೆರೆಯುವ ಚಿಂತನೆಯಲ್ಲಿದ್ದೇವೆ ಎಂದು  ರಾಮ್ ದೇವ್ ಹೇಳಿದರು. ಅಂತೆಯೇ  ತಾವು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಅದಕ್ಕಾಗಿ ನಾನು ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನ ಬಾಲ್ಯ ಸ್ನೇಹಿತ ಆಚಾರ್ಯ ಬಾಲಕೃಷ್ಣ ಕಂಪನಿಯ  ಪಾಲುದಾರಿಕೆಯಲ್ಲಿ ಶೇ. 97ರಷ್ಟು ಷೇರುಗಳಲ್ಲಿ ಹೊಂದಿದ್ದಾರೆ ಎಂದೂ ರಾಮ್ ದೇವ್ ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com