ಏಡ್ಸ್ ನಲ್ಲಿ ಜಾರಿದ್ದ ಜಾಂಬಿಯಾ ಚಿಗುರಿದ್ದು ಹೇಗೆ ?

ಈ ವಾರ ಝಮ್ಬಿಯಾ ಎನ್ನುವ ಆಫ್ರಿಕಾದ ದಕ್ಷಿಣದ ಒಂದು ಪುಟ್ಟ ರಾಷ್ಟ್ರವೊಂದರ ಆರ್ಥಿಕತೆ ಮಗ್ಗುಲು ಬದಲಾಯಿಸಿದ ರೀತಿಯ ಬಗ್ಗೆ ಅವರು ಮಾಡಿಕೊಂಡ ಬದಲಾವಣೆಗಳ ಬಗ್ಗೆ ಪಕ್ಷಿನೋಟ ಹರಿಸೋಣ.
ಜಾಂಬಿಯಾ
ಜಾಂಬಿಯಾ
ಕಳೆದ ವಾರ ಆಫ್ರಿಕಾ ಖಂಡದ ಬೋಟ್ಸ್ವಾನ ದೇಶದ ಅಭಿವೃದ್ಧಿ ಬಗ್ಗೆ ಒಂದಷ್ಟು ತಿಳಿದು ಕೊಂಡೆವು. ಈ ವಾರ ಝಮ್ಬಿಯಾ (ಜಾಂಬಿಯಾ ) ಎನ್ನುವ ಆಫ್ರಿಕಾದ ದಕ್ಷಿಣದ ಒಂದು ಪುಟ್ಟ ರಾಷ್ಟ್ರವೊಂದರ ಆರ್ಥಿಕತೆ ಮಗ್ಗುಲು ಬದಲಾಯಿಸಿದ ರೀತಿಯ ಬಗ್ಗೆ ಅವರು ಮಾಡಿಕೊಂಡ ಬದಲಾವಣೆಗಳ ಬಗ್ಗೆ ಒಟ್ಟಾಗಿ ಆ ದೇಶದ ಬಗ್ಗೆ ಒಂದು ಪಕ್ಷಿನೋಟ ಹರಿಸೋಣ.  

ಝಮ್ಬಿಯಾ- ಹಿನ್ನೋಟ. 
ಲ್ಯಾಂಡ್ ಲಾಕ್ಡ್ ಅಂದರೆ ಸಮುದ್ರಕ್ಕೆ ನೇರ ಪ್ರವೇಶವಿಲ್ಲದೆ ಇರುವುದು. ಅಂದರೆ ಆ ದೇಶಗಳಲ್ಲಿ ಬಂದರು ಇರುವುದಿಲ್ಲ. ವಾಣಿಜ್ಯ ವಹಿವಾಟುಗಳಿಗೆ ಇತರ ದೇಶಗಳ ಮೇಲೆ ಅವಲಂಬಿಸಲೇಬೇಕು. ಹೀಗಾಗಿ ಲ್ಯಾಂಡ್ ಲಾಕ್ಡ್ ದೇಶಗಳು ಬೇರೆ ದೇಶಗಳಿಗಿಂತ ಕಡಿಮೆ ಶ್ರೀಮಂತ ಎನ್ನುವುದು ಸಾಮಾನ್ಯ ನಂಬಿಕೆ. ಹೆಚ್ಚಿನ ಸಂದರ್ಭದಲ್ಲಿ ಅದು ನಿಜ ಕೂಡ. ಝಮ್ಬಿಯಾ ಒಂದು ಲ್ಯಾಂಡ್ ಲಾಕ್ಡ್ ದೇಶ. ಆದರೆ ಇದು ಲ್ಯಾಂಡ್ ಲಾಕ್ಡ್ ಎನ್ನುವುದಕ್ಕಿಂತ ಲ್ಯಾಂಡ್ ಲಕ್ಕಿ ಎನ್ನುವ ಹೆಸರು ಹೂಡಿಕೆದಾರರಲ್ಲಿ ಮೂಡಿಸಿದೆ. ಹೀಗೆ ಅಂತ ನಂಬಿಕೆ ಹೂಡಿಕೆದಾರರಲ್ಲಿ ಬರಲು ಮುಖ್ಯ ಕಾರಣ ಝಮ್ಬಿಯಾ ದೇಶ ಎಂಟು ದೇಶಗಳೊಂದಿಗೆ ಸರಹದ್ದು ಹಂಚಿಕೊಂಡಿರುವುದು. 

ಇದನ್ನ ಸರಳವಾಗಿ ಹೇಳ ಬೇಕೆಂದರೆ ಝಮ್ಬಿಯಾ ಕಾರ್ಯತಂತ್ರವನ್ನ ಜಾರಿಗೆ ಗೊಳಿಸಲು ಬೇಕಾದ ಆಯಕಟ್ಟಿನ ಸ್ಥಳದಲ್ಲಿದೆ. ಈ ದೇಶದ ಜನಸಂಖ್ಯೆ 17 ಮಿಲಿಯನ್ ಇಷ್ಟು ಪುಟ್ಟ ದೇಶ, ಇಷ್ಟು ಕಡಿಮೆ ಜನಸಂಖ್ಯೆ ಇರುವ ದೇಶದಲ್ಲಿ ಹೂಡಿಕೆ ಮಾಡಿ ಪ್ರಯೋಜನವೇನು? ಇಲ್ಲಿ ವ್ಯಾಪಾರ ಮಾಡಲು ಅದರಿಂದ ಹೆಚ್ಚಿನ ಹಣಗಳಿಸುವ ಅವಕಾಶವಿದೆಯೇ? ಎನ್ನುವುದಕ್ಕೆ ಉತ್ತರ ಹೌದು. ಈ ದೇಶ ಗಾತ್ರದಲ್ಲಿ ಚಿಕ್ಕದು ಜನಸಂಖ್ಯೆಯು ಬಹಳ ಕಡಿಮೆ. ಜಗತ್ತಿನ ಕೆಲವೇ ಕೆಲವು ದೇಶಗಳಿಗೆ ಇರುವ ಅದೃಷ್ಟ ಝಮ್ಬಿಯಾ ದೇಶಕ್ಕೆ ಇದೆ. ದಕ್ಷಿಣ ಆಫ್ರಿಕಾ ಖಂಡದ 8 ದೇಶಗಳೊಂದಿಗೆ ತನ್ನ ಬಾರ್ಡರ್ ಹಂಚಿಕೊಂಡಿರುವುದು ಆ ಮಹಾನ್ ಅದೃಷ್ಟ. ಹೀಗಾಗಿ ಈ ಭಾಗದ 600 ಮಿಲಿಯನ್ ಜನರೊಂದಿಗೆ ವ್ಯಾಪಾರ ಮಾಡುವ ನೇರ ಅವಕಾಶವಿದೆ. ಬೌಗೋಳಿಕವಾಗಿ ಆ ರೀತಿ ಇರುವುದು ಲ್ಯಾಂಡ್ ಲಾಕ್ಡ್ ಆಗಿ ನಷ್ಟವಾಗುವುದಕ್ಕಿಂತ ಲಾಭವೇ ಹೆಚ್ಚಾಗಿ ಲ್ಯಾಂಡ್ ಲಕ್ಕಿ ಎನ್ನುವ ಹೆಸರು ಪಡೆದಿದೆ ಝಮ್ಬಿಯಾ. 

ಆದರೇನು ತನ್ನ ಯುವಜನತೆ ಏಡ್ಸ್ ನಿಂದ ಬಳಲುತ್ತಿದ್ದರೆ ಯಾವ ದೇಶ ತಾನೇ ಅಭಿವೃದ್ಧಿಯಾಗಲು ಸಾಧ್ಯ? ತನ್ನ ಜನರನ್ನ ಏಡ್ಸ್ ಮುಕ್ತ ಮಾಡಲು ಶ್ರಮಸಿ ಅದರಲ್ಲಿ ಹೆಚ್ಚಿನ ಜಯಗಳಿಸಿ, ಇಂದಿನ ಮಟ್ಟಿಗೆ ಬೆಳೆದದ್ದು ಯಾವ ಮ್ಯಾಜಿಕ್ಕಿಗೂ ಕಡಿಮೆಯೇನಲ್ಲ. 
 
ಆಫ್ರಿಕಾದ ದಕ್ಷಿಣದಲ್ಲಿ ಹೆಚ್ಚಿನ ರಾಜಕೀಯ ಸ್ಥಿರತೆ ಹೊಂದಿದ ದೇಶ ಎನ್ನುವ ಹೆಗ್ಗಳಿಕೆ ಕೂಡ ಝಮ್ಬಿಯಕ್ಕೆ ಸೇರುತ್ತೆ. ರಾಜಕೀಯ ಸ್ಥಿರತೆ ಹೂಡಿಕೆದಾರರ ಮನಸ್ಸಿನಲ್ಲಿ ಒಂದು ರೀತಿಯ ಭದ್ರತೆ ನೀಡುತ್ತದೆ. 2004 ರಿಂದ 2014 ರ ವರೆಗೆ 7 ಪ್ರತಿಶತಕ್ಕೂ ಮೀರಿ ಜಿಡಿಪಿ ಬೆಳವಣಿಗೆ ಕಾಣುತ್ತಿದ್ದ ಝಮ್ಬಿಯಾ, ಕುಸಿದ ಚೀನಾದ ದೇಶದ ಬಳಕೆ, ಕಡಿಮೆಯಾದ ಮಳೆ, ಕುಸಿದ ಕೃಷಿ ಇವುಗಳಿಂದ ಆರ್ಥಿಕವಾಗಿ ಬಹಳ ಪೆಟ್ಟು ತಿಂದಿತು. ಪರಿಣಾಮವಾಗಿ ಜಿಡಿಪಿ ಕುಸಿಯಿತು. 2016 ರಿಂದ ಮತ್ತೆ ಚೇತರಿಕೆ ಕಾಣಲು ಶುರುವಾಗಿದೆ. 

ಝಮ್ಬಿಯಾ ದೇಶದ ಆದಾಯದ ಮೂಲಯಾವುದು? 

ಝಮ್ಬಿಯಾ ದೇಶ ಪ್ರಪಂಚದ ಹತ್ತು ಪ್ರಮುಖ ತಾಮ್ರ ಉತ್ಪಾದಕ ದೇಶಗಳಲ್ಲಿ ಒಂದು. ದೇಶದ ವಿದೇಶಿ ವಿನಿಮಯದ 80 ಭಾಗ ತಾಮ್ರವನ್ನ ರಫ್ತು (ಎಕ್ಸ್ಪೋರ್ಟ್ ) ಮಾಡುವುದರಿಂದ ಬರುತ್ತದೆ. ಗಣಿಗಾರಿಕೆ ದೇಶದ ಪ್ರಮುಖ ಉದ್ಯಮ. ತಾಮ್ರವೊಂದೇ ಅಲ್ಲದೆ ಇತರ ಖನಿಜ ಗಳನ್ನ ಕೂಡ ಝಮ್ಬಿಯಾ ರಫ್ತು ಮಾಡುತ್ತದೆ. ಇಷ್ಟೇ ಅಲ್ಲದೆ ಅಮೂಲ್ಯ ಕಲ್ಲುಗಳ (precious stones)ಸಂಗ್ರಹ ಕೂಡ ಇಲ್ಲಿದೆ. ಇದೆ ವರ್ಗಕ್ಕೆ ಸೇರಿದ ಎಮರಾಲ್ಡ್ ಎನ್ನುವ ಕಲ್ಲಿನ ಅತಿ ಹೆಚ್ಚು ಡೆಪಾಸಿಟ್ ಇರುವ ಜಗತ್ತಿನ ಪ್ರಥಮ ದೇಶ ಎನ್ನುವ ಹೆಮ್ಮೆ ಕೂಡ ಝಮ್ಬಿಯಾಕ್ಕೆ ಸೇರಿದ್ದು. 

  • ಕೃಷಿ ಮತ್ತೊಂದು ಆದಾಯದ ಮೂಲ. ಸಕ್ಕರೆ, ತಂಬಾಕು, ಹತ್ತಿ ಮತ್ತು ಜೋಳವನ್ನ ಹೆಚ್ಚಾಗಿ ಬೆಳೆಯುತ್ತಾರೆ. ಹೀಗಾಗಿ ಇವು ಕೂಡ ರಫ್ತಾಗುತ್ತವೆ. ಇಂದಿಗೂ ಇವರು ಕೂಡ ಮಳೆಯನ್ನ ನಂಬಿ ಕೃಷಿ ಸಾಗಿಸುತ್ತಿದರೆ. ಮಳೆ ಕೈಕೊಟ್ಟರೆ ಇವರ ಬೆಳೆಗಳು ಕೈ ಕೊಡುತ್ತವೆ. 
  • ಹೈಡ್ರೊ ಪವರ್, ನೀರಿನಿಂದ ವಿದ್ಯುತ್ ಉತ್ಪಾದಿಸುವ ಕೈಗಾರಿಕೆ. ದೊಡ್ಡ ದೊಡ್ಡ ನದಿಗಳು ರಭಸವಾಗಿ ಕೆಳಮುಖವಾಗಿ ಹರಿಯುವ ಕಾರಣದಿಂದ ಮತ್ತು ಝಮ್ಬಿಯಾ ಸರಿಯಾಗಿ ಬೌಗೋಳಿಕವಾಗಿ ಅಲ್ಲಿರುವುದರಿಂದ ಯಥೇಚ್ಛವಾಗಿ ಹೈಡ್ರೋ ಪವರ್ ಉತ್ಪಾದಿಸುವ ಅವಕಾಶ ಈ ದೇಶಕ್ಕಿದೆ. ಮತ್ತು ಅದು ಉತ್ಪಾದಿಸುತ್ತಲೂ ಇದೆ. ಇಷ್ಟೆಲ್ಲಾ ಇದ್ದೂ ಇಲ್ಲಿನ ಪ್ರತಿ ನಾಗರಿಕನಿಗೂ ಇನ್ನು ವಿದ್ಯುತ್ ಭಾಗ್ಯ ಇಲ್ಲ. ಇವರಿಗೆ ವಿದ್ಯುತ್ ತಪುಪಿಸುವ ಕೆಲಸ ಮಾಡಬೇಕಿದೆ. 
  • ಟೂರಿಸಂ. ಪಕ್ಕದ ಜ್ಜಿಂಬಾಂಬ್ವೆ ಯಲ್ಲಿನ ರಾಜಕೀಯ ಅಸ್ಥಿರತೆ, ಶಾಂತಿ ರಹಿತ ವಾತಾವರಣ ಝಮ್ಬಿಯಾಗೆ ವರದಾನವಾಗಿದೆ. ಹೆಚ್ಚು ಹೆಚ್ಚಿನ ಪ್ರವಾಸಿಗರು ಈ ದೇಶವನ್ನ ಪ್ರವಾಸಕ್ಕೆ ಆಯ್ದು ಕೊಳ್ಳುತ್ತಿದ್ದಾರೆ. ಇದು ಕೂಡ ಆದಾಯದ ಪ್ರಮುಖ ಆದಾಯದ ಮೂಲವಾಗಿ ತನ್ನ ಬಲವನ್ನ ವೃದ್ಧಿಪಡಿಸಿಕೊಳ್ಳುತ್ತಿದೆ. 
ಮುಂದೇನು? ಇಲ್ಲಿ ಹೂಡಿಕೆ ಮಾಡಬಹುದೇ?
ಝಮ್ಬಿಯಾ ದೇಶದ ಪೆಟ್ರಿಯೋಟಿಕ್ ಫ್ರಂಟ್ 2016 ರಲ್ಲಿ ಪುನರಾಯ್ಕೆ ಆಗಿ ಬಂದಿದೆ. 2021 ರ ವರೆಗೆ ಇಲ್ಲಿ ಸ್ಥಿರತೆ ಇರುತ್ತದೆ. ಹಾಗೆ ನೋಡಲು ಹೋದರೆ ಇತರ ಆಫ್ರಿಕನ್ ದೇಶಗಳು ಜನಾಂಗೀಯ ಕಲಹ ಮತ್ತು ಹಲವು ರೀತಿಯ ಆತಂರಿಕ ಕಲಹಗಳಿಂದ ಕೆಂಗಟ್ಟಿದ್ದರೂ ಝಮ್ಬಿಯಾ ಸ್ಥಿರತೆ ಕಾಪಾಡಿಕೊಂಡ ದೇಶ ಎನ್ನುವ ಹೆಸರು ಪಡೆದಿದೆ.  ಮಾರ್ಚ್ 2017 ರಂದು ಜನತೆಯನ್ನ ಉದ್ದೇಶಿಸಿ ಮಾತನಾಡುತ್ತ ದೇಶದಲ್ಲಿನ ಬಡತನ, ಅನಕ್ಷರತೆ ಜೊತೆಗೆ ಹೆಚ್ಚುತ್ತಿರುವ ಸಾಮಾಜಿಕ ಅಂತರವನ್ನ ಕಡಿಮೆ ಮಾಡುವ ಬಗ್ಗೆ ಮತ್ತು ಹೆಚ್ಚಿನ ಪಾರದರ್ಶಕ ಆಡಳಿತವನ್ನ ನೆಡೆಸುವ ಬಗ್ಗೆ, ದೇಶವನ್ನ ಪೂರ್ಣವಾಗಿ ಬದಲಾಯಿಸುವ ಬಗ್ಗೆ ಹೆಚ್ಚಿನ ಭರವಸೆ ಹುಟ್ಟಿಸುವ ಮಾತನ್ನಾಡಿದ್ದಾರೆ. ತನ್ನ ಸರಕಾರದ ವತಿಯಿಂದ ಏಳನೇ ನ್ಯಾಷನಲ್ ಡೆವಲಪ್ಮೆಂಟ್ ಪ್ಲಾನ್ ಬಿಡುಗಡೆ ಮಾಡಿದೆ. 2017 ರಿಂದ 2021 ರಲ್ಲಿ ಏನೆಲ್ಲಾ ಮಾಡಬೇಕು ಎನ್ನುವುದಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ . ಅವುಗಳಲ್ಲಿ ಮುಖ್ಯವಾಗಿ . ತನ್ನ ಸಮಾಜವನ್ನ ಕೇವಲ ಗಣಿಗಾರಿಕೆ ಮೇಲೆ ಮಾತ್ರವೇ ಹೆಚ್ಚು ಆಧಾರಿಸುವುದರಿಂದ ಬದಲಾಯಿಸಿ ಬೇರೆಯ ಸಂಪನ್ಮೂಲ ವೇದಿಕೆ ತಯಾರಿಸುವುದು ಮತ್ತು ಸಮಾಜದಲ್ಲಿ ಹೆಚ್ಚಿರುವ ಸಾಮಾಜಿಕ ಅಂತರ ಕಡಿಮೆ ಮಾಡುವುದು ಪ್ರಮುಖವಾಗಿವೆ . ಇಷ್ಟೇ ಅಲ್ಲದೆ 2030 ರಲ್ಲಿ ನಮ್ಮ ದೇಶ ಹೇಗಿರಬೇಕು ಎನ್ನುವ ಕನಿಸಿನೊಂದಿಗೆ ವಿಷನ್ 2030 ಘೋಷಣೆ ಮಾಡಿಕೊಂಡಿದೆ. 2030 ರ ಹೊತ್ತಿಗೆ ಯಾರೋ ಅಭಿವೃದ್ದಿಯಿಂದ ವಂಚಿತರಾಗಿರಬಾರದು, ಎಲ್ಲರಿಗೂ ಅಭಿವೃದ್ಧಿಯ ಪಾಲು ಸಿಗಬೇಕು ಎನ್ನುವುದು ಗುರಿ. 

ಇಷ್ಟೆಲ್ಲಾ ನನಸಾಗಬೇಕಾದರೆ ಸರಕಾರ ಹೊಸದಕ್ಕೆ ಒಗ್ಗಿಕೊಳ್ಳಬೇಕು. ಹೊಸ ಹೂಡಿಕೆದಾರ, ಹೊಸ ವ್ಯಾಪಾರ, ಹೊಸ ರೀತಿ ನೀತಿ ಗಳಿಗೆ ಸರಕಾರ ತೆರೆದ ಬಾಹುವಿನಿಂದ ಸ್ವಾಗತ ಕೂರಬೇಕು. ಅದು ಝಮ್ಬಿಯಾ ಸರಕಾರಕ್ಕೆ ತಿಳಿದಿದೆ. ಹೀಗಾಗಿ ಮೇಲೆ ಹೇಳಿದ ಎಲ್ಲಾ ಕ್ಷೇತ್ರದಲ್ಲೂ ಹೂಡಿಕೆಯ ಅವಕಾಶ ಮುಕ್ತವಾಗಿದೆ. 

ಝಮ್ಬಿಯಾ ಎಂದರೆ ಏಡ್ಸ್ ಎನ್ನುವ ಮಟ್ಟಿಗೆ ಕುಪ್ರಸಿದ್ಧವಾಗಿತ್ತು . ಇಲ್ಲಿನ ಜನರ ಸರಾಸರಿ ಜೀವಿತಾವಧಿ 40 ಇದ್ದದ್ದು 2012 ರ ವೇಳೆಗೆ 49 ತಲುಪಿ ಇಂದಿಗೆ 65ಕ್ಕೆ ವೃದ್ಧಿ ಆಗಿದೆ. ನಿಧಾನವಾಗಿ ಏಡ್ಸ್ ನ ಕಂಬಂಧ ಬಾಹುಗಳಿಂದ ಬಿಡುಗಡೆ ಗೊಳ್ಳುತ್ತಾ ಅಭಿವುದ್ಧಿಯ ಪಥದಲ್ಲಿ ಸರಾಸರಿ 6 ಪ್ರತಿಶತ ವೃದ್ಧಿ ದಶಕದಿಂದ ಈ ದೇಶದ ಕಾಣುತ್ತ ಬಂದಿರುವುದು ಸೋಜಿಗ ಅನ್ನಿಸಿದರೂ ಸರಳ ಲೆಕ್ಕಾಚಾರ, ಒಂದು ಪಥದಲ್ಲಿ ವಿಚಲಿತ ನೆಡಿಗೆ ಎಂತವರನ್ನೂ ಸರಿಯಾದ ಮಾರ್ಗದಲ್ಲಿ ತರಬಲ್ಲದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದೆ. ಸಾಗುವ ದಾರಿ ಬಹಳವಿದೆ ಆದರೆ ಸಾಗುತ್ತಿರುವ ದಾರಿ ಸರಿಯಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com