ಮೋದಿ ಸರ್ಕಾರ ಆರ್ಥಿಕತೆ ಮೇಲಿನ ನಂಬಿಕೆಯನ್ನು ಮರು ಸ್ಥಾಪಿಸಿದೆ: ಅರುಣ್ ಜೇಟ್ಲಿ

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹಲವು ಸುಧಾರಣಾ ಯೋಜನೆಗಳಿಂದ...
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹಲವು ಸುಧಾರಣಾ ಯೋಜನೆಗಳಿಂದ ಆರ್ಥಿಕತೆ ಮೇಲಿನ ನಂಬಿಕೆಯನ್ನು  ಪುನಃಸ್ಥಾಪಿಸುವಲ್ಲಿ ನೆರವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಮೋದಿ ಸರ್ಕಾರದ ಮೂರು ವರ್ಷದ ಸಾಧನೆಗಳ ಬಗ್ಗೆ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರೇ ಇರಲಿಲ್ಲ. ಹಿಂದಿನ ಸರ್ಕಾರದಿಂದ ಮೋದಿ ಸರ್ಕಾರಕ್ಕೆ ಸಿಕ್ಕಿದ್ದು ದುರ್ಬಲ ಆರ್ಥಿಕತೆಯ ಬಳುವಳಿ ಎಂದು ಟೀಕಿಸಿದರು.
ಆರ್ಥಿಕ ರಂಗದಲ್ಲಿ ಇಡೀ ವಿಶ್ವಕ್ಕೆ ಕಳೆದ ಮೂರು ವರ್ಷಗಳಲ್ಲಿ ಸವಾಲುಗಳಿದ್ದವು. ಮೂರು ವರ್ಷಗಳ ಹಿಂದೆ ಯೋಜನೆ ಸುಧಾರಣೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು ಮತ್ತು ಭಾರತದಲ್ಲಿ ರಚನಾತ್ಮಕ ಬದಲಾವಣೆಗಳಾಗಿದ್ದವು. ಭ್ರಷ್ಟಾಚಾರ ಮತ್ತು ಅನಿರ್ಧಾರದಿಂದಾಗಿ ವಿಶ್ವಾಸಾರ್ಹತೆ ವಿಷಯದಲ್ಲಿ  ನಾವು ದುರ್ಬಲ ಆರ್ಥಿಕತೆಯನ್ನು ಬಳುವಳಿಯಾಗಿ ಪಡೆದಿದ್ದೆವು ಎಂದು ಹಿಂದಿನ ಯುಪಿಎ ಸರ್ಕಾರವನ್ನು ಆಪಾದಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಸುಧಾರಣೆಗಳು ಭ್ರಷ್ಟಾಚಾರವನ್ನು ನಿಗ್ರಹಿಸಲು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ಆರ್ಥಿಕತೆಯ ನಂಬಿಕೆಯನ್ನು ಮರು ಸ್ಥಾಪಿಸಿದ್ದೇವೆ. ವಿದೇಶಿ ನೇರ ಹೂಡಿಕೆಗೆ ಭಾರತ ಅತಿದೊಡ್ಡ ಗ್ರಾಹಕನಾಗಿದೆ ಎಂದರು.
ಈ ವರ್ಷ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಕುಂಠಿತವಾಗಿದ್ದು ಇದಕ್ಕೆ ಹಲವು ಕಾರಣಗಳಿವೆ. ಜಿಡಿಪಿಗಳ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ ಎಂದು ಹೇಳಿದ ಅವರು, ನೋಟು ಅಮಾನ್ಯತೆಗಿಂತ ಮುನ್ನವೇ ಆರ್ಥಿಕ ಬೆಳವಣಿಗೆ ಸ್ವಲ್ಪ ಕುಂಠಿತವಾಗಿತ್ತು. ಹಾಗಂತ ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತದಲ್ಲಿ ಶೇಕಡಾ 7ಕ್ಕಿಂತ 8ರಷ್ಟು ಆರ್ಥಿಕತೆ ಸರಾಸರಿ ಬೆಳವಣಿಗೆಯಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಕಾಣುತ್ತಿಲ್ಲ ಎಂದರು.
ಭಾರತದಿಂದ ರಫ್ತಾಗುವ ಸರಕು, ಸೇವೆಗಳ ಕುರಿತು ಮಾತನಾಡಿದ ಜೇಟ್ಲಿ, ರಕ್ಷಣಾ ನೀತಿ ಮತ್ತು ಭೂ-ರಾಜಕೀಯ ಅನಿಶ್ಚಿತತೆಯಿಂದ ಜಾಗತಿಕ ವ್ಯಾಪಾರದ ಕುಸಿತವುಂಟಾಗಿದೆ ಎಂದರು.
ಹಳೆಯ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ಬಗ್ಗೆ ಮಾತನಾಡಿದ ಸಚಿವರು, ಇದರಿಂದಾಗಿ ದೇಶದ ಸಮಾನಾಂತರ ಆರ್ಥಿಕತೆಯನ್ನು ತಳ್ಳಿಹಾಕಲು ಸಾಧ್ಯವಾಯಿತು ಎಂದು ಹೇಳಿದರು.
ನೋಟುಗಳ ಅಪಮೌಲ್ಯದ ನಂತರ ನಾವು ಹೊಸ ಆರ್ಥಿಕತೆಯನ್ನು ಕಾಣುತ್ತಿದ್ದೇವೆ. ಇಂದು ನಗದು ವಹಿವಾಟು ನಡೆಸುವುದು ಅಷ್ಟು ಸುರಕ್ಷಿವಲ್ಲ. ಯೋಜನೆ ನಿರೂಪಣೆಯಲ್ಲಿ ನಾವು ನಿರ್ಣಾಯಕತೆಯನ್ನು ತೋರಿಸಿದ್ದೇವೆ. ಈ ಹಿಂದೆ ಒಂದೇ ರೀತಿಯ ಆರ್ಥಿಕತೆ ಮುಖ್ಯವಾಗಿ ನಗದು ವಹಿವಾಟುಗಳನ್ನು ಹೊಂದಿತ್ತು. ಅದನ್ನು ನಾವು ಕೊನೆಗಾಣಿಸಿದ್ದೇವೆ. ಇಂದು ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇಂದು ಕಪ್ಪು ಹಣದ ಚಲಾವಣೆಯನ್ನು ನಿಲ್ಲಿಸಿದ್ದರಿಂದ ತೆರಿಗೆ ಪಾವತಿದಾರರ ಮೂಲ ಗಟ್ಟಿಯಾಗಿದೆ ಎಂದರು.
ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಅಂಕಿ ಅಂಶದ ಬಗ್ಗೆ ವಿರೋಧ ಪಕ್ಷ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದರು.

ಈ ಹಿಂದೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿವಿಧ ಸುಧಾರಣಾ ಯೋಜನೆಗಳ ಕುರಿತು ಆರೋಪ ಮಾಡುತ್ತಿದ್ದವು. ಇಂದು ಉದ್ಯೋಗ ಸೃಷ್ಟಿಯ ಕುರಿತು ಆರೋಪಿಸುತ್ತಿವೆ. ಸುಳ್ಳು ಪ್ರಚಾರ ಮಾಡಲು ಜನರಿಗೆ ಯಾವುದಾದರೊಂದು ವಿಷಯ ಬೇಕು.   ಆರ್ಥಿಕ ವಲಯದಿಂದ ಹೊರಗೆ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಬೆಳವಣಿಗೆಯಾಗಿದೆ ಎಂದಾದರೆ ಅಲ್ಲಿ ಉದ್ಯೋಗ ಸೃಷ್ಟಿಯಾಗಿರಲೇಬೇಕು ಎಂದರು.

 ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯರನ್ನು ಪಾಕಿಸ್ತಾನ ಗುರಿಯಾಗಿಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕಳೆದ ಕೆಲ ದಿನಗಳ ಹಿಂದೆ ನಮ್ಮ ಸೇನಾಪಡೆ ಗಡಿ ನಿಯಂತ್ರಣ ರೇಖೆ ಬಳಿ ನಿಯಂತ್ರಣ ಹೊಂದಿತ್ತು.  ಪಾಕಿಸ್ತಾನ ಜೊತೆ ಸ್ನೇಹ ಬಾಂಧವ್ಯ ಬೆಳೆಸುವ ನಮ್ಮ ಪ್ರಯತ್ನಕ್ಕೆ ಪಠಾಣ್ ಕೋಟ್ ಅಥವಾ ಉರಿ ದಾಳಿಯಂತಹ ದಾಳಿಗಳಿಂದ ಪಾಕಿಸ್ತಾನ ಉತ್ತರ ಕೊಟ್ಟಿದೆ. ಶಾಂತಿ ಮಾತುಕತೆಗೆ ಮುಂದಾಗುವ ನಮ್ಮ ಪ್ರಯತ್ನವನ್ನು ಪಾಕಿಸ್ತಾನವೇ ದೂರವಿಡುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com