ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾಲ ವಸೂಲಿ ಮತ್ತು ದಿವಾಳಿತನ ತಿದ್ದುಪಡಿಗೆ ಸಂಪುಟ ಅಸ್ತು: ಶೀಘ್ರ ಸುಗ್ರೀವಾಜ್ಞೆ

ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ನೀತಿಸಂಹಿತೆಯಲ್ಲಿ ಕೆಲ ತಿದ್ದುಪಡಿ ತರಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ನವದೆಹಲಿ: ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ನೀತಿಸಂಹಿತೆಯಲ್ಲಿ ಕೆಲ ತಿದ್ದುಪಡಿ ತರಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ವಿತ್ತ ಹಾಗೂ ಕಂಪನಿ ವ್ಯವಹಾರಗಳ ಸಚಿವ ಅರುಣ್‌ ಜೇಟ್ಲಿ ಅವರು, ಕಾಲಮಿತಿಗೆ ಒಳಪಟ್ಟು ಬ್ಯಾಂಕ್‌ ಗಳ ಸಾಲ ವಸೂಲಾತಿ ಪ್ರಕ್ರಿಯೆ ನಡೆಸಲು ಕಳೆದ ವರ್ಷದ  ಡಿಸೆಂಬರ್‌ನಿಂದಲೇ ಈ ಸಂಹಿತೆ ಜಾರಿಗೆ ತರಲಾಗಿದ್ದು, ಕಂಪನಿ ವ್ಯವಹಾರ ಸಚಿವಾಲಯವು ಇದನ್ನು ಕಾರ್ಯಗತಗೊಳಿಸುತ್ತಿದೆ ಎಂದು ಹೇಳಿದರು. ಇನ್ನು ಪ್ರಸ್ತುತ ಕೇಂದ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿರುವ ಅಂಶಗಳು  ಮಾಹಿತಿ ಲಭ್ಯವಾಗದೇ ಹೋದರೂ, ಈ ಕಾಯ್ದೆಯ ವಿವಿಧ ವಿಷಯಗಳ ಬಗ್ಗೆ ಉದ್ಯಮ ವಲಯದಲ್ಲಿ ಕೇಳಿ ಬರುತ್ತಿರುವ ಕಳವಳದ ಕಾರಣಕ್ಕೆ ತಿದ್ದುಪಡಿ ತರಲಾಗುತ್ತಿದೆ ಎನ್ನಲಾಗಿದೆ.
ಕೆಲ ಉದ್ದಿಮೆಗಳ ಪ್ರವರ್ತಕರು ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಉದ್ದಿಮೆ ಮೇಲೆ ಮತ್ತೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಕಾಯ್ದೆ ಜಾರಿಯಲ್ಲಿ ಎದುರಾಗುತ್ತಿರುವ  ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಲಹೆ ನೀಡಲು ಕೇಂದ್ರ ಸರ್ಕಾರ ಈಗಾಗಲೇ 14 ಸದಸ್ಯರ ಸಮಿತಿ ರಚಿಸಿದೆ. ಕಂಪನಿ ವ್ಯವಹಾರ ಕಾರ್ಯದರ್ಶಿ ಐ. ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿನ ಈ ಸಾಲ ವಸೂಲಾತಿ ಕಾಯ್ದೆ ಸಮಿತಿಯು  ದಿವಾಳಿ ಸಂಹಿತೆ ಜಾರಿ ಕುರಿತು  ಮಾಹಿತಿ ಕಲೆ ಹಾಕುತ್ತಿದೆ.
ಸಾಲ ವಸೂಲಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಈಗಾಗಲೇ 300 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ನ್ಯಾಯಮಂಡಳಿ ಸಮ್ಮತಿ ನೀಡಿದ ನಂತರವೇ ಸಾಲ  ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್ನಲಾಗಿದೆ.
ಇಬಿಆರ್ ಡಿ ಸದಸ್ಯತ್ವಕ್ಕೂ ಸಂಪುಟ ಅಸ್ತು
ಇದೇ ವೇಳೆ ಯುರೋಪಿಯನ್ ಬ್ಯಾಂಕ್ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಭಾರತ ಸದಸ್ಯತ್ವ ಪಡೆಯಲೂ ಕೂಡ ಬುಧವರಾ ನಡೆದ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಆ ಮೂಲಕ ಭಾರತದ ಆರ್ಥಿಕ  ಹಿತಾಸಕ್ತಿಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಚುರ ಪಡಿಸಲು ಇದು ನೆರವಾಗಲಿದೆ ಎಂದು ಹೇಳಲಾಗಿದೆ. ಅಂತೆಯೇ ಒಂದು ವೇಳೆ ಸದಸ್ಯತ್ವ ದೊರೆತಿದ್ದೇ ಆದರೆ ಇಬಿಆರ್ ಡಿಯಿಂದಲೂ ಭಾರತಕ್ಕೆ ಆರ್ಥಿಕ ನೆರವು  ದೊರೆಯುವ ವಿಶ್ವಾಸವಿದೆ.

Related Stories

No stories found.

Advertisement

X
Kannada Prabha
www.kannadaprabha.com