2018 ಹಿನ್ನೋಟ: ಹೀಗಿತ್ತು ಆರ್ ಬಿಐ, ಬ್ಯಾಂಕಿಂಗ್ ಕ್ಷೇತ್ರ

ಆರ್ಥಿಕ ವಿಷಯಗಳಲ್ಲಿ 2018 ಹಲವು ಕಾರಣಗಳಿಂದಾಗಿ ಭಾರತ ಮರೆಯಲಾರದ ವರ್ಷ. ಜಿಡಿಪಿ ಶೇ.7 ರಷ್ಟು ಏರಿಕೆಯಾದದ್ದು ಹಾಗೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು ಇದೇ ವರ್ಷದಲ್ಲಿ ಎಂಬ ಹೆಗ್ಗಳಿಕೆ ಒಂದೆಡೆಯಾದರೆ...
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಹಣಕಾಸು ಸಚಿವ ಅರುಣ್ ಜೇಟ್ಲಿ
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಹಣಕಾಸು ಸಚಿವ ಅರುಣ್ ಜೇಟ್ಲಿ
ಆರ್ಥಿಕ ವಿಷಯಗಳಲ್ಲಿ 2018 ಹಲವು ಕಾರಣಗಳಿಂದಾಗಿ ಭಾರತ ಮರೆಯಲಾರದ ವರ್ಷ. ಜಿಡಿಪಿ ಶೇ.7 ರಷ್ಟು ಏರಿಕೆಯಾದದ್ದು ಹಾಗೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು ಇದೇ ವರ್ಷದಲ್ಲಿ ಎಂಬ ಹೆಗ್ಗಳಿಕೆ ಒಂದೆಡೆಯಾದರೆ ಮತ್ತೊಂದೆಡೆ ಆರ್ ಬಿಐ ನಲ್ಲಿ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆಯಂತಹ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ ವರ್ಷವೂ ಹೌದು 
ಅತಿ ದೊಡ್ಡ ವಂಚನೆ ಬೆಳಕಿಗೆ ಬಂದ ವರ್ಷ: ವಿಜಯ್ ಮಲ್ಯ ಸುಸ್ತಿದಾರನಾಗಿ ವಿದೇಶದಲ್ಲಿ ಆಶ್ರಯ ಪಡೆದಾಗಿನಿಂದಲೂ ಬ್ಯಾಂಕ್ ಗಳ ಬ್ಯಾಡ್ ಲೋನ್ (ಸಾಲ ಮರುಪಾವತಿ)ಯಾಗದೇ ಉಳಿದಿದ್ದ ಹಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಆದರೆ 2018ರಲ್ಲಿ ಬ್ಯಾಂಕ್ ಗಳಿಗೆ ವಂಚಿಸಿದ್ದ ಕಥೆಗಳು ಸಾಕಷ್ಟು ತೆರೆದುಕೊಂಡವು. ಫೆಬ್ರವರಿ ತಿಂಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 14,000 ಕೋಟಿ ರೂಪಾಯಿ ವಂಚನೆ ಮಾಡಿದ್ದ ಪ್ರಕರಣ ಬಯಲಿಗೆ ಬಂದಿತ್ತು. 2011-2017 ವರೆಗೆ ನಿರಂತರವಾಗಿ ನಡೆದಿದ್ದ ವಂಚನೆ ಬೆಳಕಿಗೆ ಬಂದಿದ್ದು 2018 ರಲ್ಲೇ. 
ಜಿಡಿಪಿ ಬೆಳವಣಿಗೆ:  2016-2017 ನೇ ಸಾಲಿನಲ್ಲಿ ಕೈಗೊಂಡ ಪ್ರಮುಖ ಆರ್ಥಿಕ ಸುಧಾರಣೆಗಳು ಪರಿಣಾಮ ಬೀರಿದ್ದು 2018 ರಲ್ಲಿ. ನೋಟು ಅಮಾನ್ಯೀಕರಣ ಹಾಗೂ ಜಿಎಸ್ ಟಿಯ ಪರಿಣಾಮ 2018 ರಲ್ಲಿ ಸ್ಪಷ್ಟವಾಗಿ ಗೋಚರಿಸಲು ಪ್ರಾರಂಭವಾಗಿ ಈ ಮೊದಲೇ ಹೇಳಿದಂತೆ 2018 ರಲ್ಲಿ ಜಿಡಿಪಿಯಲ್ಲೂ ಏರಿಳಿಕೆ ಕಾಣಲು ಪ್ರಾರಂಭವಾಯಿತು. 2018 ರ ಮೊದಲ ತ್ರೈಮಾಸಿಕದಲ್ಲಿ ಶೇ.8.2 ರಷ್ಟಿದ್ದ ಜಿಡಿಪಿ 2 ನೇ ತ್ರೈಮಾಸಿಕದ ವೇಳೆಗೆ ಶೇ.7.1 ರಷ್ಟಕ್ಕೆ ಇಳಿಯಿತು. ಆದರೂ ಸಹ ಜಾಗತಿಕ ಮಟ್ಟದಲ್ಲಿ ಭಾರತ 2018 ರಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದು ವಿಶೇಷ. 
ತೈಲ ಬೆಲೆ ಏರಿಕೆ: 2018 ರಲ್ಲಿ ಅಮೆರಿಕ-ಇರಾನ್ ನಡುವಿನ ’ನಿರ್ಬಂಧ’ ಪ್ರಹಸನದಿಂದಾಗಿ ತೈಲೋತ್ಪನ್ನಗಳು ಏರಿಕೆಯಾಗತೊಡಗಿತ್ತು. ಈ ನಡುವೆ ರೂಪಾಯಿ ಮೌಲ್ಯವೂ ಡಾಲರ್ ಮುಂದೆ ಕುಸಿದಿದ್ದು 2018, ಭಾರತೀಯರು ಕಂಡು ಕೇಳರಿಯದಷ್ಟು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ವರ್ಷವಾಗಿತ್ತು. ನಿರ್ಬಂಧದಿಂದಾಗಿ ಭಾರತಕ್ಕೆ ತೈಲೋತ್ಪನ್ನಗಳ ಪೂರೈಕೆ ಸಮಸ್ಯೆಯಾಗುವುದಿಲ್ಲವೆಂದು ಇರಾನ್ ಭರವಸೆ ನೀಡಿತ್ತು. ಈ ಮಧ್ಯೆ ಡಾಲರ್ ಗಳಲ್ಲಿ ತೈಲೋತ್ಪನ್ನಗಳಿಗೆ ಪಾವತಿ ಮಾಡುತ್ತಿದ್ದ ಮೋದಿ ಸರ್ಕಾರ,  ಇರಾನ್ ಗೆ ರೂಪಾಯಿಯಲ್ಲೇ ಪಾವತಿ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳುವುದಕ್ಕೂ ಸಹಿ ಹಾಕಿತ್ತು. ತೈಲ ಖರೀದಿಗೆ ಇನ್ಮುಂದೆ ರೂಪಾಯಿಯಲ್ಲೇ ಪಾವತಿ: ಇರಾನ್ ಜೊತೆ ಭಾರತದ ಒಪ್ಪಂದ!
ಆರ್ ಬಿಐ- ಕೇಂದ್ರ ಸರ್ಕಾರದ ನಡುವೆ ಐತಿಹಾಸಿಕ ತಿಕ್ಕಾಟ: ನೋಟ್ ಬ್ಯಾನ್, ಜಿಎಸ್ ಟಿ ಜಾರಿಯೆಲ್ಲವೂ ಒಂದು ಹಂತಕ್ಕೆ ಬರುತ್ತಿದೆ ಎನ್ನುವಾಗಲೇ ಬ್ಯಾಡ್ ಲೋನ್ ಗಳಿಗೆ ಕಡಿವಾಣ ಹಾಕಲು ಆರ್ ಬಿಐ ಕೈಗೊಂಡ ಕ್ರಮಗಳಿಗೆ ಕೇಂದ್ರ ಸರ್ಕಾರ ಅಪಸ್ವರವೆತ್ತಿ ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಪ್ರಾರಂಭವಾಯಿತು.  ಬ್ಯಾಡ್ ಲೋನ್ ವಿಷಯದಿಂದ ಮೊದಲಾಗಿ ಆರ್ ಬಿಐ ನ ಮೀಸಲು ಹಣ ಪಡೆಯುವ ವರೆಗೂ ಆರ್ ಬಿಐ ಗೌರ್ನರ್ ಹಾಗೂ ವಿತ್ತ ಸಚಿವರ ನಡುವೆ ಸುದೀರ್ಘವಾದ ತಿಕ್ಕಾಟಕ್ಕೆ ಸಾಕ್ಷಿಯಾಗಿತ್ತು 2018. ಆರ್ ಬಿ ಐ ಮತ್ತು ಕೇಂದ್ರ ಸರಕಾರದ ನಡುವಿನ ಸಮರ, ವಿತ್ತ ಜಗತ್ತಿನಲ್ಲಿ ಹಾಹಾಕಾರ!
ಅಷ್ಟೇ ಅಲ್ಲದೇ  ರಿಸರ್ವ್ ಬ್ಯಾಂಕ್ ಬಳಿ 2018ರಲ್ಲಿ ಸಂಗ್ರಹಣೆಯಾದ ಲಾಭವನ್ನು ಹೆಚ್ಚುವರಿಯಾಗಿ ಪಡೆಯಲು ಆರ್ ಬಿಐ ಕಾಯ್ದೆಯ ಸೆಕ್ಷನ್ 7 ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇಷ್ಟೇ ಅಲ್ಲದೇ ಚುನಾವಣಾ ದೃಷ್ಟಿಯಿಂದ  ಕೇಂದ್ರ ಸರ್ಕಾರ ಆರ್ ಬಿಐ ಗೌರ್ನರ್ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು ಎಂಬ ಆರೋಪ ಕೇಳಿಬಂದಿತ್ತು. ಅಂತಿಮವಾಗಿ ಅವಧಿ ಮುಕ್ತಾಯಗೊಳ್ಳುವುದರ ಮುನ್ನವೇ ಆರ್ ಬಿಐ ಗೌರ್ನರ್ ರಾಜೀನಾಮೆ ನೀಡುವ ಮೂಲಕ ಈ ಎಲ್ಲಾ ಪ್ರಹಸನಕ್ಕೂ ತೆರೆ ಬಿದ್ದು 2018 ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಹಾಗೂ ಆರ್ ಬಿಐ ಗೌರ್ನರ್ ನ ರಾಜೀನಾಮೆಗಳ ಬಗ್ಗೆ ಬಹುದೊಡ್ಡ ಚರ್ಚೆಗೇ ಸಾಕ್ಷಿಯಾದ ವರ್ಷವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com