ಬಿಟ್ ಕಾಯಿನ್ ಮೌಲ್ಯ ಕುಸಿತ; 7,000 ಅಮೆರಿಕನ್ ಡಾಲರ್ ಗೂ ಕಡಿಮೆ

ಬ್ರಿಟನ್ ಮತ್ತು ಅಮೆರಿಕಾದ ಬ್ಯಾಂಕುಗಳಿಂದ ಬಿಟ್ ಕಾಯಿನ್ ಖರೀದಿಸಲು ಕ್ರೆಡಿಟ್ ಕಾರ್ಡುಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಬ್ರಿಟನ್ ಮತ್ತು ಅಮೆರಿಕಾದ ಬ್ಯಾಂಕುಗಳಿಂದ ಬಿಟ್ ಕಾಯಿನ್ ಖರೀದಿಸಲು ಕ್ರೆಡಿಟ್ ಕಾರ್ಡುಗಳನ್ನು ಬಳಕೆ ಮಾಡುವುದಕ್ಕೆ ನಿಷೇಧ ತರಲು ಜಾಗತಿಕ ಪ್ರಾಧಿಕಾರಗಳಿಂದ ಸತತ ಪ್ರಯತ್ನ ನಡೆಯುತ್ತಿರುವುದರಿಂದ ಕಳೆದ ಮೂರು ತಿಂಗಳಲ್ಲಿ ನಿನ್ನೆ ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಬೆಲೆ ಶೇಕಡಾ 15ಕ್ಕಿಂತ ಅಧಿಕ ಕುಸಿಯಿತು.
ನಿನ್ನೆ ಅಪರಾಹ್ನ ನ್ಯೂಯಾರ್ಕ್ ನಲ್ಲಿ ಲಕ್ಸೆಂಬರ್ಗ್ ಮೂಲದ ಬಿಟ್ ಸ್ಟಾಂಪ್ ವಿನಿಮಯ ಕೇಂದ್ರದಲ್ಲಿ ಬಿಟ್ ಕಾಯಿನ್ ಬೆಲೆ 6,853.53 ಡಾಲರ್ ಗೆ ಕುಸಿಯಿತು. ಕಳೆದ ಡಿಸೆಂಬರ್ ನಲ್ಲಿ 20,000 ಡಾಲರ್ ಇದ್ದ ಬಿಟ್ ಕಾಯಿನ್ ಮೌಲ್ಯ ಅರ್ಧಕ್ಕಿಂತಲೂ ಹೆಚ್ಚು ಕುಸಿಯಿತು.
ಕಳೆದ ವರ್ಷ 1,300ಕ್ಕಿಂತಲೂ ಅಧಿಕ ಏರಿಕೆ ಕಂಡುಬಂದಿದ್ದ ಕರೆನ್ಸಿ ಮೌಲ್ಯ ಅರ್ಧಕ್ಕಿಂತ ಜಾಸ್ತಿ ಈ ವರ್ಷ ಕುಸಿತ ಕಂಡುಬಂತು.ಬಿಟ್ ಕಾಯಿನ್ ವಹಿವಾಟಿಗೆ ನಿಯಂತ್ರಣ ಹಾಕಲು ಅನೇಕ ದೇಶಗಳ ಸರ್ಕಾರ ಮತ್ತು ಬ್ಯಾಂಕುಗಳು ಮುಂದಾಗಿರುವ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ವಹಿವಾಟಿಗೆ ಈ ಹೊಡೆತ ಬಿದ್ದಿದೆ. 2013ರ ನಂತರ ಕಳೆದ ವಾರ ಬಿಟ್ ಕಾಯಿನ್ ವಹಿವಾಟು ತೀವ್ರ ಕುಸಿತ ಕಂಡುಬಂತು.
ಈ ಕುಸಿತ ಮುಂದಿನ ದಿನಗಳಲ್ಲಿಯೂ ಕಾಣಬಹುದು, ಬಿಟ್ ಕಾಯಿನ್ ಮೌಲ್ಯ 5,000ಕ್ಕೆ ಕುಸಿಯಬಹುದು ಎನ್ನುತ್ತಾರೆ ವಿದೇಶಿ ವಿನಿಮಯ, ವಿಶ್ವಾದ್ಯಂತ ಹಣ ಪಾವತಿ ಮತ್ತು ಖಜಾನೆ ನಿರ್ವಹಣೆಯಲ್ಲಿ ವಿಶೇಷ ತಜ್ಞರಾಗಿರುವ ಮುಖ್ಯ ಮಾರುಕಟ್ಟೆ ವಿಶ್ಲೇಷಕ ಮೈಲ್ಸ್ ಈಕರ್ಸ್.
ನಿನ್ನೆ ಇತರ ಕ್ರಿಪ್ಟೊಕರೆನ್ಸಿಗಳ ಮೌಲ್ಯ ಕೂಡ ಕುಸಿತ ಕಂಡುಬಂದಿತು ಎಂದು ಕಾಯಿನ್ ಮಾರ್ಕೆಟ್.ಕಾಂ ಹೇಳಿದೆ.
ಗ್ರಾಹಕರು ಕ್ರೆಡಿಟ್ ಕಾರ್ಡು ಬಳಸಿ ಬಿಟ್ ಕಾಯಿನ್ ಖರೀದಿಸುವುದನ್ನು ನಾವು ನಿಷೇಧಿಸುತ್ತೇವೆ ಎನ್ನುತ್ತಾರೆ ಬ್ರಿಟನ್ ಬ್ಯಾಂಕ್ ಲಾಯ್ಡ್ಸ್ ಬ್ಯಾಂಕಿಂಗ್ ಗ್ರೂಪ್. 
ಮೊನ್ನೆ ಸೋಮವಾರ ಭಾರತ ಸರ್ಕಾರ, ಡಿಜಿಟಲ್ ಕರೆನ್ಸಿ ವಹಿವಾಟು ಕಾನೂನುಬಾಹಿರವೆಂದು ಘೋಷಿಸಿ ಕ್ರಿಪ್ಟೊ ಕರೆನ್ಸಿ ವಹಿವಾಟುಗಳನ್ನು ನಿಯಂತ್ರಿಸಲಾಗುವುದೆಂದು ಘೋಷಿಸಿತ್ತು.
ಆದರೆ ಕೆಲವು ಬಿಟ್ ಕಾಯಿನ್ ಕಂಪೆನಿಗಳಿಗೆ ಮತ್ತೆ ಮೌಲ್ಯ ಬರುತ್ತದೆ ಎಂಬ ನಂಬಿಕೆಯಿದೆ. ಈ ಹಿಂದೆ ಕೂಡ ಸರ್ಕಾರಗಳು ನಿಯಂತ್ರಿಸಲು ಹೊರಟಾಗ ಮೌಲ್ಯ ಕುಸಿತ ಕಂಡು ನಂತರ ಪುಟಿದೇಳಿತ್ತು ಎನ್ನುತ್ತಾರೆ ಯುಎಫ್ಎಕ್ಸ್.ಕಾಂ ಆನ್ ಲೈನ್ ವಹಿವಾಟು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡೆನ್ನಿಸ್ ಡೆ ಜೊಂಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com