2018ರಲ್ಲಿ ಭಾರತದ ಅಭಿವೃದ್ಧಿ ದರ ಶೇ.7.3ಕ್ಕೆ ಏರಿಕೆ ಸಾಧ್ಯತೆ: ವಿಶ್ವ ಬ್ಯಾಂಕ್

ಭಾರತ ಅತ್ಯುತ್ತಮ ಆರ್ಥಿಕತೆ ಹೊಂದಿದ್ದು, 2018ನೇ ಸಾಲಿನಲ್ಲಿ ಭಾರತ ಶೇ.7.3ರಷ್ಟು ಅಭಿವೃದ್ಧಿ ದರ ಸಾಧನೆ ಮಾಡಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಭಾರತ ಅತ್ಯುತ್ತಮ ಆರ್ಥಿಕತೆ ಹೊಂದಿದ್ದು, 2018ನೇ ಸಾಲಿನಲ್ಲಿ ಭಾರತ ಶೇ.7.3ರಷ್ಟು ಅಭಿವೃದ್ಧಿ ದರ ಸಾಧನೆ ಮಾಡಲಿದೆ.
ಜಿಎಸ್ ಟಿ ಮತ್ತು ನೋಟು ನಿಷೇಧದ ಪರಿಣಾಮ 2016 ಮತ್ತು 2017ನೇ ವಿತ್ತೀಯ ವರ್ಷದಲ್ಲಿ ಭಾರತ ಹಿನ್ನಡೆ ಸಾಧಿಸಿದ್ದರೂ ಭಾರತದ ಆರ್ಥಿಕತೆ ಸದೃಢವಾಗಿದೆ. 2018ನೇ ಸಾಲಿನಲ್ಲಿ ಭಾರತ ತನ್ನ ಅಭಿವೃದ್ಧಿ ದರವನ್ನು ಶೇ.7.3ಕ್ಕೆ  ಏರಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಅಮೆರಿಕದ ವಾಷಿಂಗ್ಟನ್ ನಲ್ಲಿ ಇಂದು ವಿಶ್ವಬ್ಯಾಂಕ್ ತನ್ನ ಜಾಗತಿಕ ಆರ್ಥಿಕ ನಿರೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಭಾರತದ  ಆರ್ಥಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.
ವರದಿಯಲ್ಲಿ ಜಿಎಸ್ ಟಿ ಮತ್ತು ನೋಟು ನಿಷೇಧ ಸೇರಿದಂತೆ ಇತ್ತೀಚೆಗೆ ಭಾರತ ಸರ್ಕಾರ ಕೈಗೊಂಡ ಆರ್ಥಿಕ ನೀತಿಗಳನ್ನು ವಿಶ್ವಬ್ಯಾಂಕ್ ಉಲ್ಲೇಖ ಮಾಡಿದ್ದು, 2017ರಲ್ಲಿ ಭಾರತದ ಅಭಿವೃದ್ಧಿ ದರ 6.7ರಷ್ಟಿದೆಯಾದರೂ, 2018ನೇ  ಸಾಲಿನಲ್ಲಿ ಇದು ಶೇ.7.3ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಆ ಸಾಮರ್ಥ್ಯ ಭಾರತದ ಬಲಿಷ್ಟ ಆರ್ಥಿಕತೆಗೆ ಇದೆ. ಕೇವಲ 2018ರಲ್ಲಿ ಮಾತ್ರವಲ್ಲದೇ 2020ರ ವೇಳೆಗೆ ಭಾರತ ಶೇ.7.5ರಷ್ಚು ಅಭಿವೃದ್ಧಿ ದರ ಸಾಧಿಸಲಿದೆ ಎಂದು  ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ವಿಶ್ವಬ್ಯಾಂಕ್ ನ ಜಾಗತಿಕ ಆರ್ಥಿಕ ನಿರೀಕ್ಷೆಯ ವರದಿ ತಯಾರಿಕ ವಿಭಾಗದ ನಿರ್ದೇಶಕ ಐಹ್ಯಾನ್ ಕೋಸ್ ಅವರು, ಪ್ರಸ್ತುತ ಭಾರತ ಕೈಗೊಳ್ಳುತ್ತಿರುವ  ವಿತ್ತೀಯ ನೀತಿಗಳು ಆಶಾದಾಯಕವಾಗಿದೆ. ಭಾರತ ಗರಿಷ್ಠ ಪ್ರಮಾಣದ ಅಭಿವೃದ್ಧಿ ದರವನ್ನು ದಾಖಲು ಮಾಡುತ್ತಿದ್ದು, ವಿಶ್ವ ಆರ್ಥಿಕ ಮಾರುಕಟ್ಟೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿದೆ. ಪ್ರಸ್ತುತ ಜಿಎಸ್ ಟಿ ಮತ್ತು ನೋಟು  ನಿಷೇಧದಿಂದಾಗಿ ಭಾರತಕ್ಕೆ ಹಿನ್ನಡೆಯಾಗಿರಬಹುದು, ಆದರೆ ಸುದೀರ್ಘ ಸಮಯದಲ್ಲಿ ಭಾರತಕ್ಕೆ ಲಾಭವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com