ಮುಂಬೈ: ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಭರ್ಜರಿ ಜಿಗತ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಏರಿಕೆ ಕಾಣುವ ಮೂಲಕ 37,272.86 ಅಂಕಗಳ ಮಟ್ಟವನ್ನು ತಲುಪಿತು.
ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77 ಅಂಕಗಳ ಮುನ್ನಡೆಯನ್ನು ದಾಖಲಿಸಿ 11,237.45 ಅಂಕಗಳ ಮಟ್ಟವನ್ನು ತಲುಪಿತು.
ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ ಒಟ್ಟು 633.41 ಅಂಕಗಳನ್ನು ಸಂಪಾದಿಸಿದೆ.
ಏಷ್ಯನ್ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ವಾತಾವರಣ ನೆಲೆಸಿರುವುದು ಮತ್ತು ವಿದೇಶಿ ಬಂಡವಾಳದ ಒಳಹರಿವಿನಲ್ಲಿ ದೃಢತೆ ತೋರಿಬಂದಿರುವುದು ಷೇರು ಮಾರುಕಟ್ಟೆಯ ದಾಖಲೆ ಜಿಗಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಏಷ್ಯನ್ ಪೇಂಟ್, ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ವೇದಾಂತ, ವಿಪ್ರೋ ಷೇರುಗಳು ಶೇ.3ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಸುಧಾರಿಸಿ 68.60 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.