ಬ್ಯಾಂಕ್ ವಂಚನೆ ಪ್ರಕರಣ: ಕೊನೆಗೂ ಮೌನಮುರಿದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದೇನು?

ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಕೊನೆಗೂ ತಮ್ಮ ಮೌನ ಮುರಿದಿದ್ದು, ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಮುರಿಯಲು ಆರ್ ಬಿಐ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿದ್ದರೂ ಇಷ್ಟು ದಿನ ಸುಮ್ಮನಿದ್ದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಕೊನೆಗೂ ತಮ್ಮ ಮೌನ ಮುರಿದಿದ್ದು, ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಮುರಿಯಲು ಆರ್ ಬಿಐ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ನ ರಾಷ್ಟ್ರೀಯ ಕಾನೂನು ವಿವಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಸಿ ಮಾತನಾಡಿದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಮುರಿಯಲು ಆರ್ ಬಿಐ ಕಾರ್ಯಪ್ರವೃತ್ತವಾಗಿದೆ. ಪ್ರಸ್ತುತ ಬ್ಯಾಂಕಿಂಗ್ ವಂಚನೆ ಪ್ರಕರಣ ವಿಷವನ್ನು ನೀಲಕಂಠನಂತೆ ಕೇಂದ್ರೀಯ ಬ್ಯಾಂಕ್ ಅರಗಿಸಿಕೊಳ್ಳಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮವನ್ನು ಜರುಗಿಸುತ್ತದೆ. ಈಗಾಗಲೇ ಈ ಸಂಬಂಧ ಆರ್ ಬಿಐ ಕಾರ್ಯ ಪ್ರವೃತ್ತವಾಗಿದ್ದು, ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಕಡಿದು ಹಾಕಲು ಬೇಕಾದ ಎಲ್ಲ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಕೆಲವು ಸಾಲಕೊಡುವವರ ನೆರವಿನಿಂದ ಉದ್ಯಮ ಸಮುದಾಯದ ಕೆಲವರು ನಮ್ಮ ದೇಶದ ಭವಿಷ್ಯವನ್ನು ಲೂಟಿ ಮಾಡುತ್ತಿದ್ದಾರೆ . ಈ ಅಪವಿತ್ರ ಹೊಂದಾಣಿಕೆಯನ್ನು ಮುರಿಯಲು ಆರ್‌ಬಿಐ ಗರಿಷ್ಟ ಪ್ರಯತ್ನ ನಡೆಸುತ್ತಿದೆ ಎಂದರು. ದೇಶದ ಸಾಲ ವ್ಯವಸ್ಥೆಯನ್ನು ಶುದ್ಧೀಕರಿಸಲು ಆರ್‌ಬಿಐ ಕ್ರಮ ಕೈಗೊಂಡಿದೆ .ಈ ಅಮೃತ ಮಥನ ಕಾರ್ಯದಲ್ಲಿ ರಾಕ್ಷಸರ ಪಕ್ಷ ವಹಿಸುವ ಬದಲು ದೇವತೆಗಳ ಪಕ್ಷ ವಹಿಸಿ ಎಂದು ಅವರು ಸೂಚ್ಯವಾಗಿ ಬ್ಯಾಂಕ್‌ಗಳಿಗೆ ಹಾಗೂ ಪ್ರವರ್ತಕರಿಗೆ ಕಿವಿಮಾತು  ಹೇಳಿದರು. 
ಅಂತೆಯೇ  ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಂಚನೆ ಪ್ರಕರಣ ವರದಿಯಾದ ಬಳಿಕ ಆರ್‌ಬಿಐ ಮೇಲ್ವಿಚಾರಣೆ ತಂಡ ಗಮನಿಸುತ್ತದೆ ಎಂಬ ಟೀಕೆಗೆ ಉತ್ತರಿಸಿದ ಅವರು, ವಿಸ್ತಾರವಾದ ಬ್ಯಾಂಕಿಂಗ್ ಕ್ಷೇತ್ರದ ಯಾವುದೋ ಒಂದು ಕಡೆ ವಂಚನೆ ನಡೆಯುತ್ತಿದೆ ಎಂದು ಮೊದಲೇ ಗೊತ್ತುಪಡಿಸಿ ನಿಯಂತ್ರಿಸುವುದು ಅಸಾಧ್ಯವಾಗಿದೆ ಎಂದರು. ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ನಿಯಂತ್ರಣ ವ್ಯವಸ್ಥೆ ಸರಿಸಮಾನವಾಗಿರಬೇಕು ಎಂದ ಪಟೇಲ್, ಸಾಧನೆಯ ಶ್ರೇಯ ಪಡೆಯಲು ಹಲವರು ಮುಂದೆ ಬರುತ್ತಾರೆ. ಆದರೆ ವೈಫಲ್ಯದ ಹೊಣೆ ಯಾರೂ ಹೊರುವುದಿಲ್ಲ ಎಂದು ಹೇಳಿದರು. ಅನುತ್ಪಾದಕ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚುತ್ತಿರುವುದನ್ನು ಪ್ರಸ್ತಾವಿಸಿದ ಪಟೇಲ್, ಈ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com